ಪಬ್‌ನಲ್ಲಿ ಕೈ ಹಿಡಿದು ಎಳೆದ ಅಭಿಮಾನಿ, ಕೆನ್ನೆಗೆ ಬಾರಿಸಿದ ರಾಗಿಣಿ- ವಿಡಿಯೋ ವೈರಲ್..!
ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ.
ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಸೆಲ್ಫಿ ನೆಪದಲ್ಲಿ ಮಾಡಬಾರದ ಕೆಲಸ ಮಾಡಲು ಮುಂದಾಗುತ್ತಾರೆ. ಅಭಿಮಾನದ ಸೋಗಿನಲ್ಲಿ ನಾಯಕಿಯರಿಗೆ ಕಿಸ್ ಕೊಡುವುದು, ಮುಟ್ಟಬಾರದ ಜಾಗವನ್ನೆಲ್ಲ ಮುಟ್ಟುವ ಪ್ರಯತ್ನ ಮಾಡುವುದನ್ನು ಮಾಡುತ್ತಾರೆ. ಇದಕ್ಕೆ ರಾಗಿಣಿ ದ್ವಿವೇದಿಗೆ ಆದ ಅನುಭವ ಸದ್ಯದ ಉದಾಹರಣೆ.

ಹೌದು, ರಾಗಿಣಿ ದ್ವಿವೇದಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ನೋಡಲು ಯಾವುದೋ ಪಬ್‌ನಂತೆ ಕಾಣಿಸುವ ಸ್ಥಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಗಿಣಿ ಅವರ ಜೊತೆ ಫೋಟೊ ತೆಗೆಸಿಕೊಳ್ಳಲು ಕೆಲವರು ಮುಗಿ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಒಬ್ಬ ವ್ಯಕ್ತಿ ರಾಗಿಣಿ ಅವರ ಕೈಯನ್ನು ಹಿಡಿದು ಎಳೆದಾಡಿದ್ದಾನೆ.
ವ್ಯಕ್ತಿಯ ಈ ವರ್ತನೆಯಿಂದ ಸಂಯಮ ಕಳೆದುಕೊಂಡ ರಾಗಿಣಿ ಅಲ್ಲಿಯೇ ಆ ವ್ಯಕ್ತಿಯ ಕೆನ್ನೆಗೆ ಚಟೀರ್ ಎಂದು ಬಾರಿಸಿದ್ದಾರೆ. ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಆ ವ್ಯಕ್ತಿಯನ್ನು ಅಲ್ಲಿದ್ದವರು ಆಚೆ ಕರೆದುಕೊಂಡು ಹೋಗುತ್ತಾರೆ. ರಾಗಿಣಿ ಮೂಡ್ ಅಪ್‌ಸೆಟ್ ಆದವರಂತೆ ನಿಲ್ಲುತ್ತಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಹಲವರು ರಾಗಿಣಿ ಅವರ ಈ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದು ಕೈ ಹಿಡಿದು ಎಳೆದ ಆ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ರಾಗಿಣಿಯವರದ್ದೇ ತಪ್ಪು ಎನ್ನುವಂತೆ ಮಾತನಾಡಿದ್ದಾರೆ. ಅಭಿಮಾನಿಗಳನ್ನು ಅಣ್ಣಾವ್ರು ದೇವರೆಂದು ಕರೆಯುತ್ತಿದ್ದರು ಆದರೆ ಈಗಿನ ಸ್ಟಾರ್‌ಗಳಿಗೆ ಅಭಿಮಾನಿಗಳ ಬೆಲೆ ಗೊತ್ತಿಲ್ಲ ಅನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ ಎನ್ನುತ್ತಿದ್ದಾರೆ.
ಇನ್ನುಳಿದಂತೆ ರಾಗಿಣಿ ದ್ವಿವೇದಿ ಚಿತ್ರರಂಗದಲ್ಲಿ ಬಹುದೊಡ್ಡ ಗೆಲುವನ್ನು ಕಂಡು ಅನೇಕ ವರ್ಷಗಳಾಗಿವೆ. ಆದರೂ ಕೂಡ ಇವರ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಕೇವಲ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲಿ ಕೂಡ ರಾಗಿಣಿ ಬ್ಯುಸಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ, ರಾಜವರ್ಧನ್ ಅಭಿನಯದ ಗಜರಾಮ ಚಿತ್ರದಲ್ಲಿ ಸಾರಾಯಿ ಶಾಂತಮ್ಮ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದ ರಾಗಿಣಿ ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
ಆದರೆ ರಾಗಿಣಿ ಅವರ ದೃಶ್ಯಗಳಿಗೆಲ್ಲ ಕತ್ತರಿ ಹಾಕಿ ಇವರ ಪಾತ್ರವನ್ನು ಕೇವಲ ಹಾಡೊಂದಕ್ಕೆ ಸೀಮಿತಗೊಳಿಸಲಾಗಿತ್ತು. ಇದರಿಂದ ಬೇಸರಗೊಂಡಿದ್ದ ರಾಗಿಣಿ ದ್ವಿವೇದಿ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದರು.ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ನನ್ನದು ಹೀಗೆ ಬಂದು ಹಾಗೇ ಹೋಗುವ ಪಾತ್ರವಾಗಿರಲಿಲ್ಲ ಬದಲಿಗೆ ಪ್ರಮುಖ ಪಾತ್ರವಾಗಿತ್ತು, ತುಂಬಾ ಚೆನ್ನಾಗಿದೆ ಪಾತ್ರ ಎಂದು ಅಂದುಕೊಂಡು ನಾನು ಒಪ್ಪಿಕೊಂಡೆ ಆದರೆ ಅವರು ಯಾರ ಮಾತು ಕೇಳಿದರೋ ಏನು ಆಯ್ತು ಎನ್ನುವುದು ನನಗೆ ಗೊತ್ತಿಲ್ಲ ನನ್ನ ಪಾತ್ರಕ್ಕೆ ಕತ್ತರಿ ಹಾಕಿದ್ದಾರೆ ಎಂದು ಚಿತ್ರತಂಡದ ವಿರುದ್ದ ತಮ್ಮ ಆಕ್ರೋಶವನ್ನು ಕೂಡ ರಾಗಿಣಿ ದ್ವಿವೇದಿ ಹೊರ ಹಾಕಿದ್ದರು.
ಸದ್ಯ ರಾಗಿಣಿ ದ್ವಿವೇದಿ ಮೋಹನ್ ಲಾಲ್ ಅವರ ಜೊತೆ ವೃಷಭ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಚಿತ್ರ ಮಲಯಾಳಂ ಜೊತೆ ಕನ್ನಡದಲ್ಲಿ ಕೂಡ ಬಿಡುಗಡೆಯಾಗಲಿದೆ. ಬೇರೆ ಭಾಷೆಗಳಲ್ಲಿ ಕೂಡ ತೆರೆಗೆ ಬರಲಿದೆ. ಒಟ್ನಲ್ಲಿ ಸದ್ಯ ರಾಗಿಣಿ ಅಭಿಮಾನಿಯ ಕೆನ್ನೆಗೆ ಬಾರಿಸಿದ ವಿಡಿಯೋ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.


Click it and Unblock the Notifications











