ಚಿತ್ರಮಂದಿರಗಳಲ್ಲೂ ಸದ್ದು ಮಾಡಿತು 'ನಿಖಿಲ್ ಎಲ್ಲಿದ್ದೀಯಪ್ಪಾ..?'
ಅದ್ಯಾವ ಸಮಯದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ..?' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಕರೆದರೋ ಏನೋ. ಆ ಸಣ್ಣ ಡೈಲಾಗ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಅತಿ ಹೆಚ್ಚು ಟ್ರೋಲ್ ಆದ ವಿಡಿಯೋ ಇದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಯಾವ ಮಟ್ಟಿಗೆ ವೈರಲ್ ಆಗಿದೆ ಎಂದರೆ, ಯಾರಿಗೂ ಅದನ್ನು ಮರೆಯಲು ಆಗುತ್ತಿಲ್ಲ. ಎಷ್ಟು ದಿನ ಆದರೂ, ನಿಖಿಲ್ ರನ್ನು ಈ ಡೈಲಾಗ್ ಬಿಟ್ಟು ಹೋಗುತ್ತಿಲ್ಲ. ಈಗ ಚಿತ್ರಮಂದಿರದಲ್ಲಿಯೂ ಅದು ಮುಂದುವರೆದಿದೆ.
'ಕುರುಕ್ಷೇತ್ರ' ಸಿನಿಮಾದಲ್ಲಿ ನಿಖಿಲ್ ಕುಮಾರ್ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಆದರೆ, ಚಿತ್ರಮಂದಿರದಲ್ಲಿಯೂ ಅವರನ್ನು 'ನಿಖಿಲ್ ಎಲ್ಲಿದ್ದೀಯಪ್ಪಾ..?' ಎಂದೇ ಸ್ವಾಗತ ಮಾಡಲಾಗುತ್ತಿದೆ.

'ನಿಖಿಲ್ ಎಲ್ಲಿದ್ದೀಯಪ್ಪಾ..?' ಎನ್ನುತ್ತಿದ್ದಾರೆ ಪ್ರೇಕ್ಷಕರು
'ಕುರುಕ್ಷೇತ್ರ' ಸಿನಿಮಾ ನೋಡುವಾಗ ಚಿತ್ರಮಂದಿರದಲ್ಲಿ ಎಲ್ಲ ಪ್ರಮುಖ ಪಾತ್ರಗಳಿಗೆ ಜನರು ಕೂಗಾಟ, ಶಿಳ್ಳೆ, ಚಪ್ಪಾಳೆ ಸಿಗುತ್ತಿದೆ. ಆದರೆ, ನಿಖಿಲ್ ರನ್ನು ಮಾತ್ರ 'ನಿಖಿಲ್ ಎಲ್ಲಿದ್ದೀಯಪ್ಪಾ..? ಡೈಲಾಗ್ ಮೂಲಕ ಪ್ರೇಕ್ಷಕರು ಸ್ವಾಗತ ಮಾಡುತ್ತಿದ್ದಾರೆ. ನಿಖಿಲ್ ತೆರೆ ಮೇಲೆ ಬಂದ ಕೂಡಲೇ 'ನಿಖಿಲ್ ಎಲ್ಲಿದ್ದೀಯಪ್ಪಾ..? ಎಂದು ಪ್ರೇಕ್ಷಕರು ಕೂಗುತ್ತಿದ್ದಾರೆ.

ಅಭಿಮನ್ಯು ಬಗೆ ತಲೆ ಕಡಿಸಿಕೊಳ್ಳುತ್ತಿಲ್ಲ
ಚಿತ್ರದಲ್ಲಿ ನಿಖಿಲ್ ಅರ್ಜುನನ ಮಗ ಅಭಿಮನ್ಯು ಪಾತ್ರ ಮಾಡಿದ್ದಾರೆ. ಅಭಿಮನ್ಯು ಪಾತ್ರ ಚೆನ್ನಾಗಿ ಇದ್ದರೂ, ಜನ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಯುದ್ಧದ ಸನ್ನಿವೇಶಗಳಲ್ಲಿ ನಿಖಿಲ್ ಒಳ್ಳೆಯ ಸಾಹಸ ಮಾಡಿದರೂ ಗಣನೆಗೆ ಬರುತ್ತಿಲ್ಲ. ಆ ಮಟ್ಟಿಗೆ 'ನಿಖಿಲ್ ಎಲ್ಲಿದ್ದೀಯಪ್ಪಾ..? ವಿಡಿಯೋ ಪರಿಣಾಮ ಬೀರಿದೆ. ಚಿತ್ರಮಂದಿರರಲ್ಲಿಯೂ ಪ್ರೇಕ್ಷಕರು ಆ ಡೈಲಾಗ್ ಹೇಳಿಕೊಂಡು ನಗುತ್ತಿದ್ದಾರೆ.

ನಿಖಿಲ್ ಸೂಪರ್ ಎಂದ ಸುಮಲತಾ
'ಕುರುಕ್ಷೇತ್ರ' ಸಿನಿಮಾವನ್ನು ಮೊದಲೇ ದಿನವೇ ವೀಕ್ಷಿಸಿರುವ ನಟಿ ಸುಮಲತಾ ಅದರ ಬಗ್ಗೆ ಮಾತಾನಾಡಿದ್ದಾರೆ. ಸಿನಿಮಾದಲ್ಲಿ ಮುಖ್ಯವಾಗಿ ಕಲಾವಿದರ ನಟನೆಯ ಅವರಿಗೆ ಇಷ್ಟ ಆಗಿದೆ. ಪ್ರಮುಖವಾಗಿ ದರ್ಶನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಹಾಗೂ ಅಂಬರೀಶ್ ಪಾತ್ರಗಳು ಅವರಿಗೆ ಬಹಳ ಖುಷಿ ನೀಡಿವೆ. ''ನಿಖಿಲ್ ಸೂಪರ್ ಆಗಿ ಆಕ್ಟ್ ಮಾಡಿದ್ದಾನೆ'' ಎಂದು ಸುಮಲತಾ ಹೇಳಿದ್ದಾರೆ.

ಕುರುಕ್ಷೇತ್ರ ಸಿನಿಮಾ ಹೇಗಿದೆ?
ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬಂದು ಎಷ್ಟೋ ಕಾಲ ಆಗಿದೆ. ಹಾಗಾಗಿ, ಒಂದು ಒಳ್ಳೆಯ ಅನುಭವ, ಸಿನಿಮಾ ನೋಡಿದ ಮೇಲೆ ಆಗುತ್ತದೆ. ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಇದ್ದರೂ, ಯಾವುದು ಹೆಚ್ಚು ಕಿರಿಕಿರಿ ಎನಿಸುವುದಿಲ್ಲ. ಚಿತ್ರಮಂದಿರದ ಒಳಗೆ ದರ್ಶನ್ ಅಭಿಮಾನಿಯಾಗಿ ಹೋದರೂ, ಪೌರಾಣಿಕ ಚಿತ್ರದ ಪ್ರೇಮಿಯಾಗಿ ಹೋದರೂ, ಅಥವಾ ಸಾಮಾನ್ಯ ಪ್ರೇಕ್ಷಕನಾಗಿ ಹೋದರೂ ಸಿನಿಮಾ ಎಲ್ಲರನ್ನು ರಂಜಿಸುತ್ತದೆ.


Click it and Unblock the Notifications











