ಕನ್ನಡ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ ಆಸ್ಟ್ರೇಲಿಯಾ ಪತ್ರಕರ್ತೆ
ಒಟಿಟಿಗಳ ದೆಸೆಯಿಂದಾಗಿ ವಿಶ್ವ ಸಿನಿಮಾಗಳು ಬೆರಳ ತುದಿಯಲ್ಲಿ ಸಿಗುವಂತಾಗಿವೆ. ಈ ಹಿಂದೆ ವಿದೇಶಿ ಭಾಷೆಯ ಸಿನಿಮಾಗಳನ್ನು ನೋಡಲು ವರ್ಷಕ್ಕೊಮ್ಮೆ ನಡೆಯುವ ಚಲನ ಚಿತ್ರೋತ್ಸವಕ್ಕೆ ಕಾಯಬೇಕಿತ್ತು ಆದರೆ ಈಗ ಹಾಗಿಲ್ಲ.
ಒಟಿಟಿಗಳಿಂದಾಗಿ ಭಾರತದ ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ವಿಶ್ವ ಮಟ್ಟದ ಗುರುತು ದೊರೆತಿದೆ. ಭಾರತ ಸಿನಿಮಾ ರಂಗ ಎಂದರೆ ಹಿಂದಿ ಸಿನಿಮಾಗಳು, ಸ್ಟಾರ್‌ಗಳೆಂದರೆ ಅಮಿತಾಬ್ ಹಾಗೂ ಖಾನ್ ತ್ರವಯರು ಎಂದುಕೊಂಡಿದ್ದ ವಿದೇಶಿಗರಿಗೆ ಪ್ರಾದೇಶಿಕ ಸಿನಿಮಾಗಳು ಎಷ್ಟು ಶಕ್ತ ಸಿನಿಮಾಗಳನ್ನು ಮಾಡುತ್ತಿವೆ ಎಂಬ ಪರಿಚಯ ಆಗಿದೆ.
ಕನ್ನಡದ ಕೆಲವು ಸಿನಿಮಾಗಳು ಸಹ ವಿದೇಶಗಳಲ್ಲಿ ತಮ್ಮದೇ ಆದ ವೀಕ್ಷಕರ ಬಳಗವನ್ನು ಸೃಷ್ಟಿಸಿಕೊಂಡಿದೆ. ಅಮೆಜಾನ್ ಪ್ರೈಂನಲ್ಲಿ ಭಾರಿ ಹಿಟ್ ಆದ 'ಲವ್ ಮಾಕ್ಟೆಲ್' ಸಿನಿಮಾ ಸಹ ಹಲವು ಸಿನಿಮಾ ಪ್ರೇಮಿ ವಿದೇಶಿಗರಿಗೆ ಬಹುವಾಗಿ ಇಷ್ಟವಾಗಿದೆ.

ಆಸ್ಟ್ರೇಲಿಯಾ ಪತ್ರಕರ್ತೆ ಕ್ಲೋಯಿ ಅಮಂಡಾ ಬೇಯ್ಲಿ
ಆಸ್ಟ್ರೇಲಿಯಾದ ಪತ್ರಕರ್ತೆ ಕ್ಲೋಯಿ ಅಮಂಡಾ ಬೇಯ್ಲಿ 'ಲವ್ ಮಾಕ್ಟೆಲ್' ಸಿನಿಮಾವನ್ನು ನೋಡಿದ್ದು, ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 'ಲವ್ ಮಾಕ್ಟೆಲ್' ಸಿನಿಮಾದ ಬಗ್ಗೆ ಹೊಗಳಿ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಕ್ಲೋಯಿ.

'ಲವ್ ಮಾಕ್ಟೆಲ್' ಅದ್ಭುತವಾದ ಸಿನಿಮಾ: ಕ್ಲೋಯಿ
'ಒಳ್ಳೆಯ ಸಿನಿಮಾ ಸೂಚಿಸಿದ್ದಿರಿ, ನೀವು ಹೇಳಿದ್ದು ನಿಜ, 'ಲವ್ ಮಾಕ್ಟೆಲ್' ಅದ್ಭುತವಾದ ಸಿನಿಮಾ. ಸಿನಿಮಾ ನೋಡುವಾಗ ಸಾಕಷ್ಟು ಬಾರಿ ನಾನು ನಕ್ಕೆ. ಸಿನಿಮಾದ ಅಂತ್ಯದಲ್ಲಿ ತುಸು ದುಃಖವಾಯಿತು. ಆದರೆ ಇದೊಂದು ಒಳ್ಳೆಯ ಅನುಭೂತಿ. ಸಂಗೀತ ಅದ್ಭುತವಾಗಿದೆ. ಸಿನಿಮಾದಲ್ಲಿ ತಮಾಷೆಯೂ ಇದೆ ಭಾವುಕತೆಯೂ ಇದೆ. ಸಿನಿಮಾ ನೋಡುವಾಗ ಎಲ್ಲ ರೀತಿಯ ಭಾವನೆಗಳನ್ನು ಅನುಭವಿಸಿದೆ. ಎರಡನೇ ಭಾಗ ಸಹ ನಿರ್ಮಾಣವಾಗುತ್ತಿದೆ ಎಂದು ಕೇಳಲ್ಪಟ್ಟೆ' ಎಂದಿದ್ದಾರೆ ಕ್ಲೋಯಿ.

ದಿಯಾ ಕ್ಲೈಮ್ಯಾಕ್ಸ್ ನೋಡಿ ಶಾಕ್
'ಲವ್ ಮಾಕ್ಟೆಲ್ ಮಾತ್ರವಲ್ಲ 'ದಿಯಾ' ಸಿನಿಮಾವನ್ನೂ ನೋಡಿದ್ದಾರೆ ಕ್ಲೋಯಿ, 'ದಿಯಾ ಕ್ಲೈಮ್ಯಾಕ್ಸ್ ನೋಡಿ ಶಾಕ್ ಆಯಿತು. ನಾನಿದನ್ನು ನಿರೀಕ್ಷಿಸಿರಲಿಲ್ಲ. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಬಹಳ ಚೆನ್ನಾಗಿ ಸಿನಿಮಾ ಕಟ್ಟಿದ್ದಾರೆ. ಈ ಸಿನಿಮಾದ ಮುಂದಿನ ಭಾಗ ನಿರ್ಮಾಣ ಆಗುತ್ತದೆಯೇ?' ಎಂದು ಕೇಳಿದ್ದಾರೆ.
Recommended Video

ಆರ್‌ಸಿಬಿ ಮೆಚ್ಚಿನ ತಂಡ
ಕ್ರಿಕೆಟ್ ಹಾಗೂ ಸಿನಿಮಾವನ್ನು ಬಹುವಾಗಿ ಇಷ್ಟಪಡುವ ಕ್ಲೋಯಿಯ ಮೆಚ್ಚಿನ ಕ್ರಿಕೆಟ್ ತಂಡ ಆರ್‌ಸಿಬಿ. ವಿರಾಟ್ ಕೊಹ್ಲಿ ಮೆಚ್ಚಿನ ಕ್ರಿಕೆಟರ್. ಭಾರತದ ಹಲವಾರು ಸಿನಿಮಾಗಳನ್ನು ಕ್ಲೋಯಿ ನೋಡಿದ್ದಾರೆ. ಕನ್ನಡದ ಕೆಜಿಎಫ್ ಸಿನಿಮಾವನ್ನೂ ಕ್ಲೋಯಿ ನೋಡಿದ್ದಾರೆ.


Click it and Unblock the Notifications











