ಶರಣ್ ಅವತಾರ್ ಪುರುಷ ಪಾರ್ಟ್ 2 ಸಿನಿಮಾ ಕಥೆ ಏನಾಯ್ತು?
ನಟ ಶರಣ್ ಹಾಗೂ ಸಿಂಪಲ್ ಸುನಿ ಕಾಂಬಿನೇಶನ್‌ನಲ್ಲಿ ಕಳೆದ ವರ್ಷದ ಮೇ ತಿಂಗಳ 6ರಂದು ಅವತಾರ್ ಪುರುಷ ಎಂಬ ಚಿತ್ರ ಬಿಡುಗಡೆಗೊಂಡಿತ್ತು. ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರ ಜನರಿಗೆ ಇಷ್ಟ ಆಗುವಲ್ಲಿ ಸಂಪೂರ್ಣ ಯಶಸ್ವಿಯಾಗಲಿಲ್ಲ. ಇನ್ನು ಈ ಚಿತ್ರ ತೆರೆ ಕಾಣುವ ಮುನ್ನವೇ ಚಿತ್ರ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು.
ಮೊದಲ ಭಾಗವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಿ ನಿರೀಕ್ಷಿಸಿದ ಫಲಿತಾಂಶ ಬರದ ಕಾರಣ ಅವತಾರ್ ಪುರುಷ ಚಿತ್ರದ ಎರಡನೇ ಭಾಗ ತೆರೆಗೆ ಬರುವುದಿಲ್ಲ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಆದರೆ ಈ ಸುದ್ದಿಗೆ ಇದೀಗ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಅವರೇ ಫುಲ್ ಸ್ಟಾಪ್ ಇಟ್ಟಿದ್ದು, ಚಿತ್ರ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಹೌದು, ಇಂದು ( ಫೆಬ್ರವರಿ 6 ) ಚಿತ್ರದ ನಟ ಶರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿಂಪಲ್ ಸುನಿ ಅವತಾರ್ ಪುರುಷ ಪಾರ್ಟ್ 2 ಚಿತ್ರದ ಪೋಸ್ಟರ್ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಕುತೂಹಲ ಮೂಡಿಸಿ ಚಿತ್ರಕ್ಕೆ ಅಲ್ಪವಿರಾಮವನ್ನು ಇಟ್ಟಿದ್ದ ನಿರ್ದೇಶಕ ಸಿಂಪಲ್ ಸುನಿ ಈ ಚಿತ್ರಕ್ಕೆ 'ಅವತಾರ್ ಪುರುಷ; ತ್ರಿಶಂಕು ಪಯಣ' ಎಂದು ಶೀರ್ಷಿಕೆ ಇಟ್ಟಿದ್ದಾರೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊನೆಗೂ ಈ ಚಿತ್ರದ ಮುಂದುವರಿದ ಭಾಗ ಬರುತ್ತದೆ ಎಂಬುದನ್ನೂ ಈ ಮೂಲಕವಾದರೂ ಖಚಿತಪಡಿಸಿದರಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಆದರೆ ನಿರ್ದೇಶಕ ಸಿಂಪಲ್ ಸುನಿ ಮಾತ್ರ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಮಾತ್ರ ತಮ್ಮ ಖಾತೆಯಲ್ಲಾಗಲಿ ಅಥವಾ ತಮ್ಮ ಪ್ರೊಡಕ್ಷನ್ ಹೌಸ್ ಖಾತೆಯಲ್ಲಾಗಲಿ ಈ ಪೋಸ್ಟರ್ ಅನ್ನು ಹಂಚಿಕೊಂಡಿಲ್ಲ. ಈ ಎಲ್ಲಾ ಗೊಂದಲಗಳ ನಡುವೆ ಚಿತ್ರ ತೆರೆಗೆ ಬಂದರೆ ಸಾಕು, ಕನ್ನಡ ಚಿತ್ರವೊಂದು ಈ ರೀತಿ ಅರ್ಧಕ್ಕೆ ನಿಲ್ಲಬಾರದು ಎಂದು ಕನ್ನಡ ಸಿನಿ ರಸಿಕರು ಆಶಿಸಿದ್ದಾರೆ.
ಈ ಚಿತ್ರದಲ್ಲಿ ಶರಣ್ ನಾಯಕ ನಟನಾಗಿ ಅಭಿನಯಿಸಿದ್ದರೆ, ಶ್ರೀನಗರ ಕಿಟ್ಟಿ ಖಳನಾಯಕನಾಗಿ ಹಾಗೂ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಚಿತ್ರದ ತಾರಾಗಣದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ಭವ್ಯ, ಬಾಲಾಜಿ ಮನೋಹರ್, ಸುಧಾರಾಣಿ, ಸಾಧ ಕೋಕಿಲ ಸೇರಿದಂತೆ ಇನ್ನೂ ಮುಂತಾದ ಪ್ರತಿಭಾವಂತ ಕಲಾವಿದರಿದ್ದಾರೆ.


Click it and Unblock the Notifications











