»   » ರಾಜ್ಯಪಾಲರಿಗೆ ವ್ಯಾಯಾಮ ಮಾಡಿಸಿದ ವಾರ್ತಾ ಇಲಾಖೆ

ರಾಜ್ಯಪಾಲರಿಗೆ ವ್ಯಾಯಾಮ ಮಾಡಿಸಿದ ವಾರ್ತಾ ಇಲಾಖೆ

Posted By: Super
Subscribe to Filmibeat Kannada

ಬೆಂಗಳೂರು : ಹೊರಗೆ ಆಗಸದಲ್ಲಿ ತಾರೆಗಳು ಹೊಳೆಯುತ್ತಿದ್ದರೆ, ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಚಿತ್ರತಾರೆಯರು ಮಿರಿ ಮಿರಿ ಮಿಂಚುವ ವಸ್ತ್ರಗಳಲ್ಲಿ ಕಣ್ಣು ಕುಕ್ಕುವಂತೆ ಮಿನುಗುತ್ತಿದ್ದರು. ಇಂತಹ ಮಿನುಗುವ ತಾರೆಯರಿಗೆ ಪ್ರಶಸ್ತಿ ನೀಡಲು ನನಗೆ ಅತೀವ ಆನಂದವಾಗಿದೆ ಎಂದು ಕರ್ನಾಟಕದ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರು ಹೇಳಿದರಾದರೂ, ಅವರ ಮುಖದಲ್ಲಿ ನೋವು ಇಣುಕುತ್ತಿತ್ತು.

ಸಂತಸದ ಸಮಯದಲ್ಲೂ ರಾಜ್ಯಪಾಲರ ನೋವಿಗೆ ಕಾರಣ ಏನು? ಯಾರು ಕಾರಣರು? ಇದಕ್ಕೆ ಸಂಪೂರ್ಣ ಕಾರಣಕರ್ತರು ಕರ್ನಾಟಕ ರಾಜ್ಯದ ವಾರ್ತಾ ಇಲಾಖೆಯೇ. ಭಾನುವಾರ ಸಂಜೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಜಾನಪದ ನೃತ್ಯ ಗಜವದನ... ಹೇರಂಭ.... ಮೊಳಗಿತು.

ಪ್ರಥಮ ವಂದಿತ ಗಣಪನ ಸ್ತುತಿಯ ತರುವಾಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರುಗಳಾದ ಜಯಮಾಲ ಹಾಗೂ ಎಂ.ಎಸ್‌. ಸತ್ಯು ಅವರ ಭಾಷಣ. ನಂತರ ಡಾ. ರಾಜ್‌ಕುಮಾರ್‌ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ವಿತರಿಸಲು ರಾಜ್ಯಪಾಲರಾದ ವಿ.ಎಸ್‌. ರಮಾದೇವಿ, ವಾರ್ತಾ ಸಚಿವ ಎಂ. ಶಿವಣ್ಣ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಅವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಎತ್ತರದ ವೇದಿಕೆಯ ಮೆಟ್ಟಿಲೇರಿದ ಈ ಎಲ್ಲ ಗಣ್ಯರು ಒಂದು ಸುತ್ತಿನ ಪ್ರಶಸ್ತಿ ವಿತರಿಸಿದ ಬಳಿಕ ನನ್ನ ಪ್ರೀತಿಯ ಹುಡುಗಿ ಚಿತ್ರದ ಕಾರ್‌ಕಾರ್‌ ಕಾರ್‌.. ಗೀತೆಗೆ ನೃತ್ಯಕಾರ್ಯಕ್ರಮ ಇತ್ತು. ಹೀಗಾಗಿ ರಾಜ್ಯಪಾರಾದಿಯಾಗಿ ಎಲ್ಲ ಗಣ್ಯರನ್ನೂ ವೇದಿಕೆಯಿಂದ ಕೆಳಗಿಳಿಸಲಾಯಿತು.

ನೃತಾ ್ಯನಂತರ ಮತ್ತೆ ಪ್ರಶಸ್ತಿ ವಿತರಣೆ ಸಮಾರಂಭ. ವಿ.ಎಸ್‌. ರಮಾದೇವಿ, ಸಚಿವ ಶಿವಣ್ಣ ಎಲ್ಲರನ್ನೂ ಮತ್ತೆ ವೇದಿಕೆಗೆ ಬರುವಂತೆ ನಿರೂಪಕರಾದ ಜಯಂತ್‌ ಕಾಯ್ಕಿಣಿ ಹಾಗೂ ನಟಿ ಭಾವನಾರಿಂದ ಕೋರಿಕೆ. ವಿಧಿ ಇಲ್ಲದೆ ಕೈಲಾಗದಿದ್ದರೂ ರಾಜ್ಯಪಾಲರು ಮತ್ತೊಮ್ಮೆ ವೇದಿಕೆ ಏರಿದರು. ಮೂರು ಅತ್ಯತ್ತಮ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ವಿತರಿಸಿದ ಬಳಿಕ ಯುವರಾಜ ಚಿತ್ರದ ಗೀತೆಗೆ ನೃತ್ಯ. ಗಣ್ಯರು ಮತ್ತೊಮ್ಮೆ ಕೆಳಗಿಳಿದರು.

ನೃತ್ಯದ ಬಳಿಕ ಮಗದೊಮ್ಮೆ ಪ್ರಶಸ್ತಿ ಪ್ರದಾನ. ಪ್ರಶಸ್ತಿ ವಿತರಣೆ ಬಳಿಕ ಕುರಿಗಳು ಸಾರ್‌ ಕುರಿಗಳು ಚಿತ್ರದ ಕುಟ್ಟಿ ಕುಟ್ಟಿ ಮಲೆಯಾಳಿ ಕುಟ್ಟಿ ಗೀತೆಗೆ ಸುರಾನಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ. ನೃತ್ಯಕ್ಕೆ ವೇದಿಕೆ ಅಣಿಗೊಳಿಸಲು ಮತ್ತೊಮ್ಮೆ ರಾಜ್ಯಪಾಲರನ್ನು ವೇದಿಕೆಯಿಂದ ಕೆಳಗಿಳಿವಂತೆ ಸೂಚಿಸಲಾಯಿತು.

ಡ್ಯಾನ್ಸ್‌ ಮುಗಿದ ಬಳಿಕ ಮತ್ತೆ ಪ್ರಶಸ್ತಿ ಪ್ರದಾನ. ರಾಜ್ಯಪಾಲರಿಗೆ ವೇದಿಕೆ ಮೇಲೆ ಬರುವಂತೆ ಮತ್ತೊಮ್ಮೆ ಸವಿನಯ ಕೋರಿಕೆ. ಮೆಟ್ಟಿಲು ಹತ್ತಿ ಇಳಿದು, ಹತ್ತಿ ಇಳಿದು, ರಾಜ್ಯಪಾಲರಿಗೆ ಸುಸ್ತಾಗಿತ್ತು. ಕಷ್ಟಪಡುತ್ತಲೇ ಮತ್ತೊಮ್ಮೆ ವೇದಿಕೆ ಏರಿದರು. ಕುರ್ಚಿಯಲ್ಲಿ ಬಂದು ಕೂತರು. ಒಂದರ ಹಿಂದೊಂದರಂತೆ ಪ್ರಶಸ್ತಿ ಪ್ರದಾನ. ಎಲ್ಲ ಪ್ರಶಸ್ತಿ ವಿತರಿಸುವಾಗಲೂ ರಾಜ್ಯಪಾಲರು ಉಟ್‌ಪೈಸ್‌ ಶಿಕ್ಷೆ ಅನುಭವಿಸಿದರು.

ಇದಾದ ಬಳಿಕ ಎನ್‌ಎಂಕೆಆರ್‌ವಿ ಕಾಲೇಜು ವಿದ್ಯಾರ್ಥಿನಿಯರಿಂದ ನೃತ್ಯ. ವೇದಿಕೆಯಿಂದ ಇಳಿಯುವಂತೆ ಮತ್ತೊಮ್ಮೆ ಸೂಚನೆ. ಆ ಹೊತ್ತಿಗೆ ತಾಳ್ಮೆ ಕೆಟ್ಟಿದ್ದ ರಾಜ್ಯಪಾಲರು, ತಮ್ಮ ಅಸಹಾಯಕತೆ ತೋಡಿಕೊಂಡರು. ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ಡಿ.ವಿ. ಗುರುಪ್ರಸಾದ್‌ ಮೇಡಂ ವೇದಿಕೆಯ ಆ ಕಾರ್ನರ್‌ನಲ್ಲೇ ಕುಳಿತುಕೊಳ್ಳಿ ಎಂದು ಪ್ರಾರ್ಥಿಸಿದರು.

ಈ ಮಧ್ಯೆ ನೀರೂಪಕಿ ಭಾವನಾ ರಾಜ್ಯಪಾಲರ ಇನ್‌ಸಿಯಲ್‌ ತಪ್ಪಾಗಿ (ವಿಎಸ್‌ ಬದಲಿಗೆ ಎಸ್‌.ವಿ) ಎಂದದ್ದನ್ನು ಬಿಟ್ಟರೆ ಮಿಕ್ಕಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಇವರೊಂದಿಗೆ ಸಾಹಿತಿ ಕಾಯ್ಕಿಣಿ ಸೊಗಸಾದ ನಿರೂಪಣೆ ನೀಡಿದರು.

ಯಾವ ಹೂವು ಯಾರ ಮುಡಿಗೊ..: ಶಾಪ ಚಿತ್ರದ ಪ್ರಶಸ್ತಿ ವಾಸ್ತವವಾಗಿ ಅಶೋಕ್‌ ಪಾಟೀಲ್‌ಗೆ ಸಂದಿದ್ದರೂ ಕೂಡ ಅವರ ಸೋದರ ಬಿ.ಸಿ. ಪಾಟೀಲ್‌ ಬಂದು ಎರಡು ಬಾರಿಯೂ ಪ್ರಶಸ್ತಿ ಪಡೆದರು. ರಾಜ್ಯಪಾಲರಿಂದ ಪದಕವನ್ನೂ ಕೊರಳಿಗೆ ಹಾಕಿಸಿಕೊಂಡರು. ಅಶೋಕ್‌ ಪಾಟೀಲ್‌ ಪರಿಚಯ ವೇದಿಕೆಯಲ್ಲಿ ನಡೆಯುತ್ತಿದ್ದರೆ, ಬಿ.ಸಿ. ಪಾಟೀಲ್‌ ಯಾವ ಮುಲಾಜೂ ಇಲ್ಲದೆ ತಾವೇ ಅಶೋಕ್‌ ಪಾಟೀಲ್‌ ಎಂಬಂತೆ ಪ್ರಶಸ್ತಿ ಸ್ವೀಕರಿಸಿ, ಪ್ರೇಕ್ಷಕರತ್ತ ಕೈಬೀಸಿದರು.

ಎರಡನೇ ಬಾರಿ ಅಶೋಕ್‌ ಪಾಟೀಲ್‌ರಿಗೆ ಬಂದಿದ್ದ ಪ್ರಶಸ್ತಿಯನ್ನು ಸ್ವೀಕರಿಸಲು ಬಿ.ಸಿ. ಪಾಟೀಲ್‌ ವೇದಿಕೆಗೆ ಬಂದಾಗ, ನಿರೂಪಕ ಕಾಯ್ಕಿಣಿ ಅವರು ಅಶೋಕ್‌ ಪಾಟೀಲ್‌ ಬದಲಿಗೆ ಅವರ ಸೋದರ ಬಿ.ಸಿ. ಪಾಟೀಲ್‌ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ ಎಂದು ಕ್ಲಾರಿಫಿಕೇಷನ್‌ ನೀಡಿದರು.

ಕಾನೂರು ಹೆಗ್ಗಡಿತಿಯ ನಿರ್ದೇಶನಕ್ಕಾಗಿ ಪ್ರಶಸ್ತಿ ಸ್ವೀಕರಿಸಲು ಬರಬೇಕಿದ್ದ ಗಿರೀಶ್‌ ಕಾರ್ನಾಡ್‌ರ ಅನುಪಸ್ಥಿತಿಯಲ್ಲಿ ಐ.ಎಂ. ವಿಠಲಮೂರ್ತಿ ಪ್ರಶಸ್ತಿ ಸ್ವೀಕರಿಸಿದರು. ಸಪತ್ನೀಕರಾಗಿ ಕಾರ್ಯಕ್ರಮಕ್ಕೆ ಬಂದಿದ್ದ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನಾಗಲೀ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಕೆ.ಸಿ.ಎನ್‌. ಚಂದ್ರಶೇಖರ್‌ ಅವರನ್ನಾಗಲೀ ವೇದಿಕೆಗೆ ಒಮ್ಮೆಯೂ ಬರಮಾಡಿಕೊಳ್ಳದಿದ್ದುದು ಪ್ರೇಕ್ಷಕರಿಗೆ ಆಶ್ಚರ್ಯ ತಂದಿತು.

ಈ ಮಧ್ಯೆ ಕೆಲವು ಪ್ರಶಸ್ತಿ ವಿತರಿಸುವಾಗ ನಟ ರಮೇಶ್‌ ಹಾಗೂ ನಟಿ ಮಾಲಾಶ್ರೀ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಎಲ್ಲರೂ ಬಳಲಿರುವ ರಾಜ್ಯಪಾಲರ ಬದಲಿಗೆ ರಮೇಶ್‌ ಹಾಗೂ ಮಾಲಾಶ್ರೀ ಅವರಿಂದ ಪ್ರಶಸ್ತಿ ಪ್ರದಾನ ಮಾಡಿಸುತ್ತಾರೆ ಎಂದು ನಿರೀಕ್ಷಿಸಿದ್ದು ಸುಳ್ಳಾಯ್ತು.

ರಮೇಶ್‌ ಹಾಗೂ ಮಾಲಾಶ್ರೀ ಅವರು, ಪ್ರಶಸ್ತಿಗಳನ್ನು ರಾಜ್ಯಪಾಲರಿಗೆ ತಂದು ಕೊಡುವ ಪರಿಚಾರಕರ ಕೆಲಸವನ್ನಷ್ಟೇ ನಿರ್ವಹಿಸಿದರು. ಈ ಮಧ್ಯೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ಪುಟ್ಟ ಟೇಬಲ್‌ ಇಲ್ಲದಿದ್ದುದೂ ಕೂಡ ದೊಡ್ಡ ಕೊರತೆಯಾಗಿ ಕಂಡಿತು.

ಪ್ರಶಸ್ತಿ ವಿಜೇತರಿಗೆ ಫಲಪುಷ್ಪಗಳನ್ನು ನೀಡಿದಾಗ ಅದನ್ನು ಇಡಲೂ ಒಂದು ಪುಟ್ಟ ಟೇಬಲ್‌ ಇರಲಿಲ್ಲ. ಪ್ರಶಸ್ತಿ ಪಡೆದ ಲೀಲಾವತಿ, ವಿಜಯಭಾಸ್ಕರ್‌ ಎಲ್ಲರೂ ತಾವು ಸ್ವೀಕರಿಸಿದ ಹಣ್ಣು ಗಳನ್ನು ಬಗ್ಗಿ ನೆಲದ ಮೇಲಿಟ್ಟು ಮತ್ತೆ ಪ್ರಶಸ್ತಿ ಫಲಕ ಸ್ವೀಕರಿಸುತ್ತಿದ್ದುದು ನೋಡುಗರಿಗೆ ಇರುಸುಮುರುಸು ಉಂಟು ಮಾಡಿತು. ಇಷ್ಟಾದರೂ ಕಾರ್ಯಕ್ರಮ ಪ್ರಾಯೋಜಕರು, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬುದು ವಿಶೇಷ.

(ಇನ್‌ಫೋ ಇನ್‌ಸೈಟ್‌)

English summary
side lights : Kannada Cinema award fuction-Government of karnataka

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada