»   » ಕನ್ನಡ ನಿರ್ದೇಶಕರ ತೋಟದಿ ಬೆಳಗಿದ ಮಹೇಶ್‌ಭಟ್‌-ಪ್ರಿಯದರ್ಶನ್‌

ಕನ್ನಡ ನಿರ್ದೇಶಕರ ತೋಟದಿ ಬೆಳಗಿದ ಮಹೇಶ್‌ಭಟ್‌-ಪ್ರಿಯದರ್ಶನ್‌

Posted By: Staff
Subscribe to Filmibeat Kannada

ಇಂಗ್ಲಿಷ್‌ ಭಾಷೆ ಚೆನ್ನಾಗಿದೆ, ನಿಜ. ಹಾಗಂತ ಕನ್ನಡದ ಮೇಲೆ ಸವಾರಿ ಮಾಡಲು ಅದನ್ನು ಬಿಡಬೇಡಿ. ಕನ್ನಡಿಗರೆಲ್ಲಾ ಇಂಗ್ಲಿಷ್‌ ಮಾತಾಡೋದನ್ನ ಬಿಟ್ಟುಬಿಡಿ ಅಂತ ನಾನು ಹೇಳುವುದಿಲ್ಲ. ಆದರೆ ಅದು ಅಗತ್ಯಕ್ಕೆ ಮೀರಿ ಯಾಕೆ ಬೇಕು ಹೇಳಿ?

ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಮುಖ್ಯಮಂತ್ರಿಗಳ ಎದುರಿಗೆ ಕಡ್ಡಿ ಮುರಿದಂತೆ ಕೇಳಿದ್ದು ಹೀಗೆ. ಸಂದರ್ಭ : ಗುರುವಾರ ಸಂಜೆ ನಡೆದ ಕನ್ನಡ ಚಿತ್ರ ನಿರ್ದೇಶಕರ ಒಕ್ಕೂಟದ 17 ಮತ್ತು 18ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ. ನಂಬರ್‌ ಒನ್‌ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಕುರಿತ ಶಹಭಾಸ್‌ಗಿರಿ ಮಾತುಗಳ ನಡುವೆ ಸದ್ದು ಮಾಡಿದ್ದು ನಿಸಾರರ ಕನ್ನಡ ಕಳಕಳಿ ಹಾಗೂ ಒಕ್ಕೂಟದ ಅಧ್ಯಕ್ಷ ಸಿಂಗ್‌ ಬಾಬು ರೀಮೇಕ್‌ ವಿರೋಧಿ ಸೊಲ್ಲು.

ಇಂಗ್ಲಿಷ್‌ ಭಾಷೆಯಲ್ಲಿ ಆಮಂತ್ರಣ ಪತ್ರಗಳನ್ನು ಕೊಡುವ ಕನ್ನಡಿಗರ ಕಾರ್ಯಕ್ರಮಗಳಿಗೆ ನಾನು ಹೋಗುವುದಿಲ್ಲ. ಕೆಲವೊಮ್ಮೆ ಇಂಗ್ಲಿಷ್‌ ಬಳಕೆ ಎಷ್ಟು ಅಸಂಬದ್ಧವಾದ ಅರ್ಥವನ್ನು ಕೊಡುತ್ತದೆ ಅನ್ನುವುದಕ್ಕೆ ಉದಾಹರಣೆಗೆ- Sou ಮತ್ತು Su. ಇಂಗ್ಲಿಷ್‌ನಲ್ಲಿ ಪ್ರಾಯಕ್ಕೆ ಬಂದ ಹುಡುಗಿಗೆ Sou ಅನ್ನುತ್ತಾರೆ. ಚಲಾವಣೆ ಇಲ್ಲದ ನಾಣ್ಯಕ್ಕೆ Su ಅನ್ನುತ್ತಾರೆ. ಅದನ್ನು ಆಮಂತ್ರಣ ಪತ್ರಿಕೆಗಳಲ್ಲಿ ಹಾಕುತ್ತಾರೆ. ಎಂಥಾ ವಿಪರ್ಯಾಸ ಎಂದರು ನಿಸಾರ್‌.

ನಿಸಾರರ ಮಾತುಗಳ ಮೆಚ್ಚಿಕೊಂಡ ಮುಖ್ಯಮಂತ್ರಿಗಳು ಆಡಳಿತದಲ್ಲಿ ಕನ್ನಡದ ಆಮಂತ್ರಣ ಪತ್ರಗಳನ್ನೇ ಪ್ರಕಟಿಸುವುದಾಗಿ ಹೇಳಿದರು. ಸರ್ಕಾರಕ್ಕೂ ಸಿನಿಮಾಕ್ಕೂ ಪ್ರಣಯ ಸಂಬಂಧವಿದೆ. ಹೆಸರಘಟ್ಟದಲ್ಲಿ 300ರಿಂದ 400 ಎಕರೆ ಜಾಗೆಯಲ್ಲಿ ಫಿಲ್ಮ್‌ ಸಿಟಿ ಸ್ಥಾಪಿಸಲು ಬ್ಲೂಪ್ರಿಂಟ್‌ ತಯಾರಿಸಿ, ವಾರ್ತಾ ಸಚಿವಾಲಯವನ್ನು ಭೇಟಿ ಮಾಡಿ. ನಿಮ್ಮ ಕೆಲಸ ಆಗುತ್ತದೆ ಎಂದು ಸಿಂಗ್‌ ಬಾಬು ಆಗ್ರಹಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ಮಹೇಶ್‌ಭಟ್‌, ಪ್ರಿಯದರ್ಶನ್‌ಗೆ ಸನ್ಮಾನ
ಕನ್ನಡ ಚಿತ್ರ ನಿರ್ದೇಶಕರು ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಈ ವರ್ಣರಂಜಿತ ಸಂಜೆಯಲ್ಲಿ ಸನ್ಮಾನದ ಪುಳಕಕ್ಕೆ ಪಾತ್ರರಾದವರು ಪ್ರಸಿದ್ಧ ಹಿಂದಿ ಸಿನಿಮಾ ನಿರ್ದೇಶಕ ಮಹೇಶ್‌ಭಟ್‌ ಹಾಗೂ ಮಲಯಾಳಂ ನಿರ್ದೇಶಕ ಪ್ರಿಯದರ್ಶನ್‌. ಸನ್ಮಾನಕ್ಕೆ ಪಾತ್ರರಾದ ಇಬ್ಬರೂ ಬೆಂಗಳೂರಿನೊಂದಿಗಿನ ತಮ್ಮ ನಂಟನ್ನು ನೆನಪಿಸಿಕೊಂಡಿದ್ದು ವಿಶೇಷ.

ಪಶ್ಚಿಮ ಆಂಜನೇಯ ಗುಡಿ ಬೀದಿಯ ರಸ್ತೆಯಲ್ಲಿ ಪ್ರೊ.ಯು.ಜಿ.ಕೃಷ್ಣಮೂರ್ತಿ ಅವರೊಂದಿಗಿನ ಸಹವಾಸದ ನೆನಪುಗಳನ್ನು , ನಿನಗೆ ಉಜ್ವಲ ಭವಿಷ್ಯವಿದೆ ಎಂದು ಕೃಷ್ಣಮೂರ್ತಿ ಅವರು ಹೇಳಿದುದನ್ನು ಮೆಲುಕು ಹಾಕಿದ ಮಹೇಶ್‌ಭಟ್‌, ಬೆಂಗಳೂರು ನನಗೆ ಅನೇಕ ಪಾಠಗಳನ್ನು ಕಲಿಸಿದೆ ಎಂದರು. ಬಾಲಿವುಡ್‌ಗೆ ಸರಿಸಮವಾಗಿ ಸ್ಯಾಂಡಲ್‌ವುಡ್‌ ಬೆಳೆದಿದೆ. ಮನರಂಜನಾ ರಾಜಧಾನಿಯಾಗುವ ಆಸೆ ಬೆಂಗಳೂರಿಗಿದೆ. ಯಾವಾಗಲೂ ದೊಡ್ಡ ಕನಸುಗಳನ್ನು ಕಾಣಬೇಕು. ನಾನು ಇಲ್ಲಿಂದ ಮಧುರ ಸ್ಮೃತಿಗಳೊಂದಿಗೆ ವಾಪಸ್ಸಾಗುತ್ತಿದ್ದೇನೆ ಎಂದರು.

ಪ್ರಿಯದರ್ಶನ್‌ ಅವರದ್ದು ಪುಟ್ಟ ಭಾಷಣ. ವಿಶ್ವ ಸುಂದರಿ ಸ್ಪರ್ಧೆಯ ಸಂದರ್ಭದಲ್ಲಿ ತಾವು ಬೆಂಗಳೂರಿನಲ್ಲಿದ್ದುದನ್ನು ನೆನಪಿಸಿಕೊಂಡ ಅವರು, ಈ ಸನ್ಮಾನದಿಂದ ತಮಗೆ ಥ್ರಿಲ್‌ ಆಗಿದೆ ಎಂದರು. ಈ ಗೌರವಕ್ಕೆ ನಾನು ಅರ್ಹನೇ ಅಲ್ಲವೇ ಎನ್ನುವ ಜಿಜ್ಞಾಸೆ ತಮಗೆ ಕಾಡುತ್ತಿರುವುದಾಗಿ ಪ್ರಿಯದರ್ಶನ್‌ ವಿನಯ ಪ್ರದರ್ಶಿಸಿದರು.

ಸಿಎಂ ಕೃಷ್ಣ ಅವರೀಗ ಮೆಗಾಸ್ಟಾರ್‌
ಕಳೆದ ವರ್ಷ ಸೂಪರ್‌ಸ್ಟಾರ್‌ ಎನಿಸಿಕೊಂಡಿದ್ದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ದೇಶದ ಶ್ರೇಷ್ಠ ಮುಖ್ಯಮಂತ್ರಿ ಎಂದು ಎರಡನೇ ಬಾರಿ ಆಯ್ಕೆಯಾಗುವ ಮೂಲಕ ಮೆಗಾ ಸ್ಟಾರ್‌ ಎನಿಸಿಕೊಂಡಿದ್ದಾರೆ ಎಂದು ನಿರ್ದೇಶಕರ ಸಂಘದ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಸಚಿವ ಶಿವಣ್ಣ, ಪ್ರತಿಯಾಂದಕ್ಕೂ ಸರ್ಕಾರವನ್ನು ಅವಲಂಬಿಸಬೇಡಿ ಎಂದು ಉದ್ಯಮಕ್ಕೆ ಕಿವಿಮಾತು ಹೇಳಿದರು.

ಕಲಾವಿದರಾದ ಬಿ.ಸರೋಜಾದೇವಿ, ಸೌಂದರ್ಯ, ವಿನಯಾ ಪ್ರಸಾದ್‌, ಬಿ.ವಿ.ರಾಧ, ಗಿರಿಜಾ ಲೋಕೇಶ್‌, ಸುದೀಪ್‌ ಹಾಗೂ ಉದ್ಯಮದ ಕೆಸಿಎನ್‌ ಚಂದ್ರಶೇಖರ್‌, ಸಾ.ರಾ.ಗೋವಿಂದು, ಎಸ್‌.ಎ.ಚಿನ್ನೇಗೌಡ, ರಹಮಾನ್‌, ತ್ಯಾಗರಾಜ್‌, ತಲ್ಲಂ ನಂಜುಂಡಶೆಟ್ಟಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

English summary
English should not do Savari on Kannada : K.S.Nissar Ahmed
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada