»   » ಗಾನಕೋಗಿಲೆ ಆಶಾಭೋಸ್ಲೆಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

ಗಾನಕೋಗಿಲೆ ಆಶಾಭೋಸ್ಲೆಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

Posted By: Staff
Subscribe to Filmibeat Kannada

ನವದೆಹಲಿ : ಬುಧವಾರ ಇಲ್ಲಿ ನಡೆದ 48ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಮುನ್ನುಡಿ ನಿರ್ದೇಶಕ ಪಿ. ಶೇಷಾದ್ರಿ, ಮತದಾನ ಚಿತ್ರದ ನಿರ್ದೇಶಕ ಟಿ.ಎನ್‌. ಸೀತಾರಾಂ ಹಾಗೂ ಮುನ್ನಡಿ ಚಿತ್ರದ ಅಭಿನಯಕ್ಕಾಗಿ ಎಚ್‌.ಜಿ. ದತ್ತಾತ್ರೇಯ ಅವರು ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರಿದಂ ಪ್ರಶಸ್ತಿ ಸ್ವೀಕರಿಸಿದರು.

ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳ ವಿಭಾಗದಲ್ಲಿ ಮುನ್ನಡಿ ಮತ್ತು ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರವೆಂದು ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿ ಆಧಾರಿತ ಚಲನಚಿತ್ರ ಮತದಾನ ಪ್ರಶಸ್ತಿಗೆ ಪಾತ್ರವಾಗಿದ್ದರೆ, ದತ್ತಣ್ಣ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.

ಪಿ. ಶೇಷಾದ್ರಿ ರಜತ ಕಮಲ ಮತ್ತು 30 ಸಾವಿರ ರುಪಾಯಿ ನಗದು ಬಹುಮಾನವನ್ನೂ, ಟಿ.ಎನ್‌. ಸೀತಾರಾಂ ರಜತ ಕಮಲ ಮತ್ತು 20 ಸಾವಿರ ರುಪಾಯಿ ಬಹುಮಾನ ಸ್ವೀಕರಿಸಿದರು. ಅಂತೆಯೇ ಮುನ್ನುಡಿ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ತುಮಕೂರಿನ ಜಿ.ಎಸ್‌. ಸೋಮಶೇಖರ್‌ ಹಾಗೂ ಮತದಾನ ನಿರ್ಮಾಪಕರಲ್ಲೊಬ್ಬರಾದ ಎಚ್‌. ಜಿ. ನಾರಾಯಣ್‌ ಅವರು ರಜತ ಕಮಲದ ಜೊತೆಗೆ ಅನುಕ್ರಮವಾಗಿ 30 ಮತ್ತು 20 ಸಾವಿರ ರುಪಾಯಿಗಳ ಪ್ರಶಸ್ತಿ ಪಡೆದರು.

2000 ಸಾಲಿನ ಈ ಪ್ರಶಸ್ತಿಗಳಲ್ಲಿ ಅಕ್ಕಮಹಾದೇವಿ ಕುರಿತ ಮತ್ತೊಂದು ಚಿತ್ರಕ್ಕೂ ಪ್ರಶಸ್ತಿ ದೊರೆತಿದೆ. ಹನ್ನೆರಡನೆಯ ಶತಮಾನದ ಶರಣೆ ಮತ್ತು ಕವಯತ್ರಿ ಅಕ್ಕಮಹಾದೇವಿಯ ಜೀವನವನ್ನು ಪ್ರತಿಬಿಂಬಿಸುವ ಸರ್ವೋತ್ತಮ ಮಾನವಶಾಸ್ತ್ರೀಯ ಚಲನಚಿತ್ರವೆಂಬ ಹೆಗ್ಗಳಿಕೆ ಪಾತ್ರವಾದ ಈ ಚಿತ್ರದ ಹೆಸರು '"ಸ್ಕಿೃಬಲ್ಸ್‌ ಆನ್‌ ಅಕ್ಕ". ಈ ಚಿತ್ರದ ನಿರ್ಮಾಪಕಿ ಮಧುಶ್ರೀ ದತ್ತಾ, ನಿರ್ಮಾಪಕಿ ಫ್ಲೇವಿಯಾ ಆ್ಯಗ್ನೇಸ್‌ ಅವರು ರಜತ ಕಮಲ ಮತ್ತು 10 ಸಾವಿರ ರುಪಾಯಿಗಳ ನಗದು ಬಹುಮಾನ ಪಡೆದರು.

ಆಶಾ ಭೋಸ್ಲೆಗೆ ಫಾಲ್ಕೆ ಪ್ರಶಸ್ತಿ: ಈ ಬಾರಿಯ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ, ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುಕಾರ್‌ ಚಿತ್ರದ ಅಭಿನಯಕ್ಕಾಗಿ ಅನಿಲ್‌ ಕಪೂರ್‌, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ದಮನ್‌ ಚಿತ್ರದ ಅಭಿನಯಕ್ಕಾಗಿ ರವೀನಾ ಟಂಡನ್‌ ಪಡೆದರು.

English summary
Film awards 2000 Distribution function at new delhi
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada