'ಅಯೋಗ್ಯ'ನ ಹೋರಾಟಕ್ಕೆ ಸಂದ ಜಯ: ಹೈದರಾಬಾದ್ ನಲ್ಲಿ ಕನ್ನಡ ಚಿತ್ರ ಪ್ರದರ್ಶನ
ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಚೊಚ್ಚಲ ಸಿನಿಮಾ... ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಚಿತ್ರಕ್ಕೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಬಿಡುಗಡೆ ಆದ ಒಂಬತ್ತು ದಿನಗಳಲ್ಲಿ ಹತ್ತು ಕೋಟಿ ಕಲೆಕ್ಷನ್ ಮಾಡಿದೆ.
ಭರಪೂರ ಮನರಂಜನೆ ನೀಡುತ್ತಿರುವ 'ಅಯೋಗ್ಯ' ಚಿತ್ರದ ಶೋಗಳು ಕರ್ನಾಟಕದಲ್ಲಿ ಕಮ್ಮಿ ಆಗಿವೆ. ಅದಕ್ಕೆ ಕಾರಣ, ಪರಭಾಷಾ ಚಿತ್ರಗಳ ಹಾವಳಿ. ಇಲ್ಲಿ ತಲೆ ಬಿಸಿ ಇದ್ದದ್ದೇ ಎಂದು ಬೇರೆ ರಾಜ್ಯಗಳಲ್ಲಿ 'ಅಯೋಗ್ಯ' ಚಿತ್ರವನ್ನ ಬಿಡುಗಡೆ ಮಾಡಲು ಚಿತ್ರತಂಡ ಮುಂದಾದಾಗ ಅಲ್ಲಿ ಎದುರಿಸಿದ್ದು ಅವಮಾನ.!
ಹೈದರಾಬಾದ್ ನಲ್ಲಿ ಕೇವಲ ಎರಡು ಶೋಗಳನ್ನು ಪ್ರದರ್ಶನ ಮಾಡಲು ಅಲ್ಲಿನ ಫಿಲ್ಮ್ ಚೇಂಬರ್ ಪರ್ಮಿಶನ್ ಕೊಡ್ಬೇಕಂತೆ.

ಇದನ್ನೆಲ್ಲ ನೋಡಿ ಬೇಸೆತ್ತ ಚಿತ್ರತಂಡ, ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿತು. ಸಮಸ್ಯೆ ಅರಿತ ವಾಣಿಜ್ಯ ಮಂಡಳಿ ಅಧ್ಯಕ್ಷರು, ತೆಲುಗಿನ ಫಿಲ್ಮ್ ಚೇಂಬರ್ ಗೆ ಫೋನ್ ಮಾಡಿ ವಿವಾದವನ್ನ ಬಗೆಹರಿಸಿದರು.
ಪಿ.ವಿ.ಆರ್ ನಲ್ಲಿ 'ಅಯೋಗ್ಯ'ನಿಗೆ ಒಂಬತ್ತು ಶೋ ನೀಡಲು ಅಲ್ಲಿನ ವಾಣಿಜ್ಯ ಮಂಡಳಿ ಒಪ್ಪಿಕೊಂಡಿದ್ಯಂತೆ. ಅಲ್ಲದೇ, 10-15 ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 'ಅಯೋಗ್ಯ' ಪ್ರದರ್ಶನ ಮಾಡುವುದಾಗಿ ಅಲ್ಲಿನ ವಾಣಿಜ್ಯ ಮಂಡಳಿ ಭರವಸೆ ನೀಡಿದ್ಯಂತೆ.
''ಇದು ನಮ್ಮ ಗೆಲುವು. ಕನ್ನಡಿಗರ ಗೆಲುವು. ನಮ್ಮ ವಾಣಿಜ್ಯ ಮಂಡಳಿ ಅಧ್ಯಕ್ಷರು ಅಲ್ಲಿಯವರ ಬಳಿ ಮಾತನಾಡಿದರು. ಅವರು ನಮಗೆ ಶೋ ಕೊಡಲು ಒಪ್ಪಿಕೊಂಡಿದ್ದಾರೆ'' ಎಂದು ಸಂತಸದಿಂದಲೇ 'ಫಿಲ್ಮಿಬೀಟ್ ಕನ್ನಡ' ಜೊತೆಗೆ ನಿರ್ದೇಶಕ ಮಹೇಶ್ ಮಾತನಾಡಿದರು.
ಒಟ್ನಲ್ಲಿ, 'ಅಯೋಗ್ಯ'ನಿಗೆ ಆಗುತ್ತಿದ್ದ ಅನ್ಯಾಯವನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಡೆದಿದೆ.


Click it and Unblock the Notifications











