Baahubali: ಮೈಸೂರಿನಲ್ಲಿ 'ಬಾಹುಬಲಿ' ಪ್ರಭಾಸ್ ಮೇಣದ ಪ್ರತಿಮೆ.. ನಿರ್ಮಾಪಕ ಆಕ್ರೋಶ
ಪ್ರಭಾಸ್ ನಟನೆಯ 'ಬಾಹುಬಲಿ' ಸರಣಿ ಸಿನಿಮಾ ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಪ್ರಭಾಸ್‌ಗೆ ಇಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಮೈಸೂರು ವ್ಯಾಕ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ ಮೇಣದ ಪ್ರತಿಮೆಯನ್ನು ತಯಾರಿಸಿ ಇಟ್ಟಿದ್ದಾರೆ ಎನ್ನಲಾಗುತ್ತಿರುವ ಫೋಟೊಗಳು ವೈರಲ್ ಆಗ್ತಿದೆ. ಇದಕ್ಕೆ ಚಿತ್ರದ ನಿರ್ಮಾಪಕ ಚಕಾರ ಎತ್ತಿದ್ದಾರೆ.
ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ 'ಬಾಹುಬಲಿ' ಲುಕ್ ಮೇಣದ ಪ್ರತಿಮೆ ನಿರ್ಮಿಸಲಾಗಿದೆ. ಆ ಮ್ಯೂಸಿಯಂನಲ್ಲಿ ಪ್ರತಿಮೆ ನಿರ್ಮಾಣವನ್ನು ಎಲ್ಲರೂ ಪ್ರತಿಷ್ಠೆಯಾಗಿ ಭಾವಿಸುತ್ತಾರೆ. ಅಲ್ಲಿ ಬಾಲಿವುಡ್ ಸ್ಟಾರ್‌ಗಳ ಮೇಣದ ಪ್ರತಿಮೆಗಳೇ ಹೆಚ್ಚಾಗಿ ರಾರಾಜಿಸುತ್ತದೆ. ಇತ್ತೀಚೆಗೆ ದಕ್ಷಿಣದ ಕಲಾವಿದರು ಪ್ರತಿಮೆಗಳು ಜಾಗ ಮಾಡಿಕೊಳ್ತಿವೆ.

ಮೈಸೂರಿನಲ್ಲಿ ಮ್ಯೂಸಿಯಂನಲ್ಲಿ ಪ್ರಭಾಸ್ ಪ್ರತಿಮೆ ಇಟ್ಟಿರುವುದಕ್ಕೆ ಸ್ವತಃ ಬಾಹುಬಲಿ ಚಿತ್ರದ ನಿರ್ಮಾಪಕ ಶೋಬು ಯರ್ಲಗಡ್ಡ ಅಸಮಾಧಾನ ಹೊರ ಹಾಕಿದ್ದಾರೆ. ಮ್ಯೂಸಿಯಂನಲ್ಲಿ ಬಾಹುಬಲಿ ಲುಕ್‌ನಲ್ಲಿರುವ ಪ್ರಭಾಸ್ ಪ್ರತಿಮೆ ಫೋಟೊಗಳು ವೈರಲ್ ಆಗ್ತಿದೆ. ಪ್ರತಿಮೆ ನೋಡಲು ಬಾಹುಬಲಿ ರೀತಿ ಇದೆ. ಆದರೆ ಲುಕ್ ಮಾತ್ರ ಪ್ರಭಾಸ್ ರೀತಿ ಇಲ್ಲ. ಕ್ರಿಕೆಟಿಗ ಡೇವಿಡ್ ವಾರ್ನರ್ ರೀತಿ ಕಾಣುತ್ತಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಲೈಸೆನ್ಸ್ ಇಲ್ಲದೇ ಈ ರೀತಿ ಪ್ರತಿಮೆ ನಿರ್ಮಿಸಿದ್ದು ತಪ್ಪು ಎಂದು ಶೋಬು ಯರ್ಲಗಡ್ಡ ಟ್ವೀಟ್ ಮಾಡಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಈ ಮೇಣದ ಪ್ರತಿಮೆ ವಿಚಾರ ಚಿತ್ರದ ನಿರ್ಮಾಪಕರವರೆಗೆ ತಲುಪಿದೆ. ಅದಕ್ಕೆ ಶೋಬು ಕೋಪ ವ್ಯಕ್ತಪಡಿಸಿದ್ದು ಕೂಡಲೇ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಇಲ್ಲದೇ ಇದ್ದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. "ಇದು ಅಧಿಕೃತವಾಗಿ ಪರವಾನಗಿ ಪಡೆದು ಮಾಡಿರುವುದಲ್ಲ ಹಾಗೂ ನಮ್ಮ ಅನುಮತಿ ಅಥವಾ ನಮ್ಮ ಗಮನಕ್ಕೂ ತರದೇ ಮಾಡಲಾಗಿದೆ. ಇದನ್ನು ತೆಗೆದುಹಾಕಲು ನಾವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಬರೆದಿದ್ದಾರೆ.
ಇನ್ನು ವೈರಲ್ ಫೋಟೊದಲ್ಲಿ ಸರ್. ಎಂ ವಿಶ್ವೇಶ್ವರಯ್ಯ ಅವರು ಪ್ರತಿಮೆ ಇರುವುದನ್ನು ಗಮನಿಸಬಹುದು. ಒಟ್ನಲ್ಲಿ ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. 2015ರಲ್ಲಿ 'ಬಾಹುಬಲಿ ದಿ ಬಿಗಿನಿಂಗ್' ಸಿನಿಮಾ ರಿಲೀಸ್ ಆಗಿತ್ತು. ಎರಡು ವರ್ಷಗಳ ಬಳಿಕ 'ಬಾಹುಬಲಿ ದಿ ಕನ್ಲೂಷನ್' ಸಿನಿಮಾ ಬಂದು ದಾಖಲೆ ಬರೀತು.
ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ 'ಬಾಹುಬಲಿ' ಸರಣಿ ಸಿನಿಮಾಗಳು ಬರೆದ ದಾಖಲೆಗಳು ಅಷ್ಟಿಷ್ಟಲ್ಲ. ರಾಜಮೌಳಿ ನಿರ್ದೇಶನದ ಎಪಿಕ್ ಆಕ್ಷನ್ ಎಂಟರ್‌ಟೈನರ್ ಸಂಚಲನ ಸೃಷ್ಟಿಸಿತ್ತು. ಪ್ರಭಾಸ್ ಜೊತೆಗೆ ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾಕೃಷ್ಣನ್, ಸತ್ಯರಾಜ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದರು. ಮೊದಲ ಭಾಗದಲ್ಲಿ ಕಿಚ್ಚ ಸುದೀಪ್ ಕೂಡ ಅತಿಥಿ ಪಾತ್ರದಲ್ಲಿ ಮಿಂಚಿದ್ದರು.
ಪ್ರಸಾದ್ ದೇವಿನೇನಿ ಹಾಗೂ ಶೋಬು ಯರ್ಲಗಡ್ಡ ಬಹುಕೋಟಿ ವೆಚ್ಚದಲ್ಲಿ 'ಬಾಹುಬಲಿ' ಸರಣಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ದೊಡ್ಡಮೊತ್ತದ ಲಾಭ ಗಳಿಸಿದ್ದರು. 2017ರಲ್ಲಿ ಬ್ಯಾಂಕಾಕ್‌ನ ಪ್ರತಿಷ್ಠಿತ ಮೇಡಂ ಟ್ಯುಸಾಡ್ಸ್ ಮ್ಯೂಸಿಯಂನಲ್ಲಿ ಬಾಹುಬಲಿ ಪಾತ್ರಧಾರಿ ಪ್ರಭಾಸ್ ಮೇಣದ ಪ್ರತಿಮೆ ಅನಾವರಣವಾಗಿತ್ತು. ಈ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ದಕ್ಷಿಣ ಭಾರತದ ಮೊದಲ ನಟ ಎನ್ನುವ ಖ್ಯಾತಿಗೆ ನಟ ಪ್ರಭಾಸ್ ಪಾತ್ರರಾಗಿದ್ದರು.
'ಬಾಹುಬಲಿ' ಸರಣಿ ಸಿನಿಮಾಗಳಿಂದ ಪ್ರೇರಿತರಾಗಿ ಇತ್ತೀಚೆಗೆ ಸೀಕ್ವೆಲ್ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ದಕ್ಷಿಣದ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. 'KGF' ಸರಣಿ ಚಿತ್ರಕ್ಕೂ 'ಬಾಹುಬಲಿ' ಸಿನಿಮಾ ಪ್ರೇರಣೆಯಾಗಿತ್ತು.


Click it and Unblock the Notifications











