»   » ಬಚ್ಚನ್ ಮನೆ ಮೇಲೆ ರಾಜ್ ಠಾಕ್ರೆ ಬೆಂಬಲಿಗರ ದಾಳಿ

ಬಚ್ಚನ್ ಮನೆ ಮೇಲೆ ರಾಜ್ ಠಾಕ್ರೆ ಬೆಂಬಲಿಗರ ದಾಳಿ

Subscribe to Filmibeat Kannada

ಮುಂಬೈ, ಫೆ.04 : ಮಹಾರಾಷ್ಟ್ರವನ್ನು ನಿರ್ಲಕ್ಷಿಸುತ್ತಾರೆಂದು ಆರೋಪಿಸಿ ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಅಮಿತಾಭ್ ಬಚ್ಚನ್ ಅವರ ಮನೆಯ ಮೇಲೆ ಇಂದು ಬೆಳಿಗ್ಗೆ ಬಾಟಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ರಾಜಕಾರಣಿ ಅಮರಸಿಂಗ್ ಅವರ ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತಿರುವ ಅಮಿತಾಭ್ ಬಚ್ಚನ್ ಮಹಿಳಾ ಕಾಲೇಜನ್ನು ಮಹಾರಾಷ್ಟ್ರದಲ್ಲಿ ತೆರೆಯುವ ಬದಲು ಉತ್ತರ ಪ್ರದೇಶದಲ್ಲಿ ತೆರೆಯಲು ಉದ್ದೇಶಿಸಿರುವುದನ್ನು ವಿರೋಧಿಸಿ ನವನಿರ್ಮಾಣ ಸೇನೆಯ ನಾಯಕ ರಾಜ್ ಅವರು ಅಮಿತಾಭ್‌ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಭಾನುವಾರ ಕೂಡ ಇದೇ ವಿಷಯದಲ್ಲಿ ಸಮಾಜವಾದಿ ಮತ್ತು ನವನಿರ್ಮಾಣ ಸೇನೆಯ ನಡುವೆ ಮಾತಿನ ಚಕಮಕಿ ನಡೆದಿತ್ತು.

ಜುಹೂದಲ್ಲಿರುವ ಬಚ್ಚನ್ ಅವರ ನಿವಾಸ 'ಪ್ರತೀಕ್ಷಾ' ಮೇಲೆ ದಾಳಿ ನಡೆದಿರುವುದನ್ನು ಪೊಲೀಸರು ಅಲ್ಲಗಳೆಯುತ್ತಿದ್ದರೂ ಬೆಳಿಗ್ಗೆ 1.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ಕೆಲ ಸೇನೆಯ ಕಾರ್ಯಕರ್ತರು ಬಾಟಲಿ ಎಸೆದಿದ್ದನ್ನು ಸ್ಥಳದಲ್ಲೇ ಇದ್ದ ಕೆಲ ಪತ್ರಕರ್ತರು ದೃಢಪಡಿಸಿದ್ದಾರೆ. ಇನ್ನು ಹೆಚ್ಚಿನ ಘರ್ಷಣೆ ನಡೆಯದಿರಲೆಂದು ಹೆಚ್ಚಿನ ಪೊಲೀಸ್ ರಕ್ಷಣೆಯನ್ನು ಬಚ್ಚನ್‌ಗೆ ಒದಗಿಸಲಾಗಿದೆ.

ಭಾನುವಾರ ಸಮಾಜವಾದಿ ಪಕ್ಷದ ಪತ್ರಿಕಾಗಾಷ್ಠಿಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರು ನಡೆಸಿದ ದಾಂಧಲೆಗಾಗಿ ಅವರ ವಿರುದ್ಧ ಅಮರ್ ಸಿಂಗ್ ಅವರು ರಾಜ್ ಠಾಕ್ರೆ ಮತ್ತಿತರರ ವಿರುದ್ಧ ದಕ್ಷಿಣ ಮುಂಬೈನ ಆಜಾನ್ ಮೈದಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿನ್ನೆಯ ಘರ್ಷಣೆಯಲ್ಲಿ ಎರಡು ಸಿನೆಮಾ ಚಿತ್ರಮಂದಿರ ಮತ್ತು ಐದಾರು ಕಾರುಗಳಿಗೆ ಹಾನಿ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೇನೆಯ 15 ಮತ್ತು ಸಮಾಜವಾದಿ ಪಕ್ಷದ 5 ಕಾರ್ಯಕರ್ತರನ್ನು ಬಂಧಿಸಲಾಗಿದೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada