ದೊಡ್ಮನೆ ಅಭಿಮಾನಿಗಳಿಗೆ ಮಾರ್ಚ್ ತಿಂಗಳಿಡೀ ಹಬ್ಬ, ಹಬ್ಬ ಅಬ್ಬಬ್ಬಾ
ಹೊಸ ವರ್ಷದಲ್ಲಿ ಕನ್ನಡದ ಯಾವುದೇ ದೊಡ್ಡ ಸಿನಿಮಾ ಇನ್ನು ತೆರೆಗಪ್ಪಳಿಸಿಲ್ಲ. ಈ ವರ್ಷವೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ದರ್ಶನ್ ನಟನೆಯ 'ಕಾಟೇರ' ಮಾತ್ರ. ಇದೀಗ ಮಾರ್ಚ್ ತಿಂಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ದೊಡ್ಮನೆ ಅಭಿಮಾನಿಗಳ ಪಾಲಿಗಂತೂ ಇಡೀ ಮಾರ್ಚ್ ತಿಂಗಳು ಹಬ್ಬವೇ ಸರಿ.
ಈ ವರ್ಷದ ಮಾರ್ಚ್ ತಿಂಗಳು ಕನ್ನಡ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಹೊತ್ತು ಬರ್ತಿದೆ. ಬಹುನಿರೀಕ್ಷಿತ ಸಿನಿಮಾಗಳು ಒಂದೊಂದು ವಾರದ ಅಂತರದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಜೊತೆಗೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮವೂ ಸೇರಿಕೊಳ್ಳಲಿದೆ. 'ಯುವ' ಟೈಟಲ್ ಸಾಂಗ್ ಬಿಡುಗಡೆಯೊಂದಿಗೆ ಮಾರ್ಚ್ ತಿಂಗಳು ಆರಂಭವಾದರೆ 'ಯುವ' ಸಿನಿಮಾ ಬಿಡುಗಡೆಯೊಂದಿಗೆ ತಿಂಗಳು ಮುಕ್ತಾಯಗೊಳ್ಳಲಿದೆ.

ಮಾರ್ಚ್ 2ಕ್ಕೆ 'ಯುವ' ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗುತ್ತಿದೆ. ಅಧಿಕೃತವಾಗಿ ಚಿತ್ರತಂಡವೇ ಈ ವಿಚಾರ ಘೋಷಣೆ ಮಾಡಿದೆ. 'ಒಬ್ಬನೇ ಶಿವ ಒಬ್ಬನೇ ಯುವ' ಎಂದು ಶುರುವಾಗುವ ಹಾಡನ್ನು ಚಾಮರಾಜನಗರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಗರದ ದೇವಸ್ಥಾನ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ಯುವ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ರಾಘಣ್ಣನ ಕಿರಿಯ ಪುತ್ರನ ಮೊದಲ ಸಿನಿಮಾ ನೋಡಲು ದೊಡ್ಮನೆ ಅಭಿಮಾನಿಗಳು ಕಾತರರಾಗಿದ್ದಾರೆ. ಸೆಟ್ಟೇರಿದ ದಿನದಿಂದಲೂ 'ಯುವ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ಮಾರ್ಚ್ 8ಕ್ಕೆ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ 'ಕರಟಕ ದಮನಕ' ಸಿನಿಮಾ ತೆರೆಗೆ ಬರಲಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸದ್ಯ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇಬ್ಬರೂ ಡ್ಯಾನ್ಸ್ ಕಿಂಗ್‌ಗಳು ಒಟ್ಟಿಗೆ ನಟಿಸಿರುವುದು ಬಹಳ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.

ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಆ ಸಂಭ್ರಮ ಹೆಚ್ಚಿಸಲು ಸೂಪರ್ ಹಿಟ್ 'ಜಾಕಿ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಸೂರಿ ನಿರ್ದೇಶನದ 'ಜಾಕಿ' ಸಿನಿಮಾ 14 ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 4K ವರ್ಷನ್‌ನಲ್ಲಿ ಚಿತ್ರವನ್ನು ಮತ್ತೆ ತೆರೆಗೆ ತರುವ ಸಾಹಸ ನಡೀತಿದೆ. ಅಭಿಮಾನಿಗಳು ಮತ್ತೆ ತೆರೆಮೇಲೆ 'ಜಾಕಿ' ಆರ್ಭಟ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಬಳಿ ಆಗಮಿಸಲಿದ್ದಾರೆ. ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ಸಂಭ್ರಮದಲ್ಲಿ 'ಯುವ' ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಅಥವಾ ಅಪ್ಪು ಹುಟ್ಟುಹಬ್ಬದ ವಿಶೇಷವಾಗಿ 'ಯುವ' ಟ್ರೈಲರ್ ಬಂದರೂ ಅಚ್ಚರಿ ಪಡಬೇಕಿಲ್ಲ.
ಮಾರ್ಚ್ 28ಕ್ಕೆ 'ಯುವ' ಸಿನಿಮಾ ತೆರೆಗಪ್ಪಳಿಸಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಹೊಂಬಾಳೆ ಸಂಸ್ಥೆ ನಿರ್ಮಾಣದ 'ಸಲಾರ್' ಸಿನಿಮಾ ಆ ದಿನ ತೆರೆಕಂಡಿದ್ದರಿಂದ ಸಹಜವಾಗಿಯೇ 'ಯುವ' ಮುಂದೆ ಬರಬೇಕಾಯಿತು. ಇತ್ತೀಚೆಗೆ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭಿಸಲಾಗಿದೆ. ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ.


Click it and Unblock the Notifications











