ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಮೂರಲ್ಲ, ಐದು ಸಿನಿಮಾ ರಿಲೀಸ್
ಮತ್ತೊಂದು ವಾರ ಕಳೆಯುತ್ತಾ ಬಂತು. ವೀಕೆಂಡ್ ಬರುತ್ತಿದ್ದಂತೆ ಸಿನಿರಸಿಕರು ಈ ವಾರ ಯಾವ ಸಿನಿಮಾಗಳು ರಿಲೀಸ್ ಆಗ್ತಿದೆ ಎಂದು ಕಾಯುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ದೊಡ್ಡ ಸಿನಿಮಾಗಳ ಅಬ್ಬರ ಕಮ್ಮಿ ಆಗಿದೆ. ಆಗೊಮ್ಮೆ ಈಗೊಮ್ಮೆ ಸ್ಟಾರ್‌ಗಳ ಸಿನಿಮಾ ತೆರೆಗೆ ಬರ್ತಿವೆ.
ಈ ಶುಕ್ರವಾರ ಕನ್ನಡದಲ್ಲಿ ಒಂದಲ್ಲ ಎರಡಲ್ಲ 5 ಸಿನಿಮಾಗಳು ರಿಲೀಸ್ ಆಗ್ತಿದೆ. ಅದರಲ್ಲಿ 3 ಸಿನಿಮಾಗಳು ನಿರೀಕ್ಷೆ ಹುಟ್ಟಾಕ್ಕಿವೆ. ಅದರಲ್ಲೂ ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಹೆಚ್ಚು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ - ರಚಿತಾರಾಮ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಡಾರ್ಲಿಂಗ್ ಕೃಷ್ಣ ನಟನೆಯ 'ಶುಗರ್ ಫ್ಯಾಕ್ಟರಿ', ರಾಜ್ ಬಿ. ಶೆಟ್ಟಿ ಸಾರಥ್ಯದ 'ಸ್ವಾತಿಮುತ್ತಿನ ಮಳೆ ಹನಿಯೇ' ಕೂಡ ಗಮನ ಸೆಳೆದಿದೆ.

'ಪಾಪ್‌ಕಾರ್ನ್ ಮಂಕಿಟೈಗರ್' ಬಳಿಕ ದುನಿಯಾ ಸೂರಿ ಕಟ್ಟಿಕೊಟ್ಟಿರುವ ಸಿನಿಮಾ 'ಬ್ಯಾಡ್ ಮ್ಯಾನರ್ಸ್'. ಅಭಿಷೇಕ್ ಅಂಬರೀಶ್ 'ಅಮರ್' ಸಿನಿಮಾ ಸೋಲಿನ ಬಳಿಕ ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಟಫ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿ ಅಬ್ಬರಿಸಿದ್ದಾರೆ.
OTT releases this week: ಈ ವಾರ 25ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್.. ಲಿಸ್ಟ್‌ನಲ್ಲಿ 4 ಹಿಟ್ಸ್
'ಬ್ಯಾಡ್ ಮ್ಯಾನರ್ಸ್' ಪಕ್ಕಾ ಸೂರಿ ಟ್ರೀಟ್‌ಮೆಂಟ್ ಇರುವ ಸಿನಿಮಾ. ಚರಣ್ ರಾಜ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಮಾಸ್ತಿ, ಅಮ್ರಿ ಸಂಭಾಷಣೆ ಚಿತ್ರಕ್ಕಿದೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ತಾರಾಗಣದಲ್ಲಿದ್ದಾರೆ. ಸುಧೀರ್ ಕೆ. ಎಂ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ದೀಪಕ್ ಅರಸ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ' ಚಿತ್ರದ ಬಗ್ಗೆಯೂ ನಿರೀಕ್ಷೆಯಿದೆ. ಚಿತ್ರದಲ್ಲಿ ಕೃಷ್ಣನಿಗೆ ನಾಯಕಿಯರಾಗಿ ಸೋನಲ್ ಮಂತೆರೋ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ಮಿಂಚಿದ್ದಾರೆ. ಇದು ಈ ಕಾಲದ ಲವ್, ಡೇಟಿಂಗ್, ಬ್ರೇಕಪ್ ಕುರಿತಾದ ಕತೆ. ಮೂವರು ನಾಯಕಿಯರಲ್ಲಿ ಯಾರು ಕೊನೆಗೆ ನಾಯಕನ ಕೈ ಹಿಡಿಯುತ್ತಾರೆ ಅನ್ನೋದು ಸಸ್ಪೆನ್ಸ್. ಕಬೀರ್ ರಫಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.

'ಶುಗರ್ ಫ್ಯಾಕ್ಟರಿ' ಹಾಗೂ 'ಬ್ಯಾಡ್ ಮ್ಯಾನರ್ಸ್' ಜೊತೆಗೆ ರಾಜ್. ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಸ್ವಾತಿಮುತ್ತಿನ ಮಳೆ ಹನಿಯೇ' ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಈ ಚಿತ್ರವನ್ನು ನಟಿ ರಮ್ಯಾ ನಿರ್ಮಾಣ ಮಾಡಿದ್ದಾರೆ. ಮಿಥುನ್ ಮುಕುಂದನ್ ಸಂಗೀತದಲ್ಲಿ ಸಾಂಗ್ಸ್ ಗಮನ ಸೆಳೆದಿದೆ. ಇತ್ತೀಚೆಗೆ ಬಂದ ಟ್ರೈಲರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಚಿತ್ರದಲ್ಲಿ ಸಿರಿ ರವಿಕುಮಾರ್ ನಾಯಕಿಯಾಗಿ ಮಿಂಚಿದ್ದಾರೆ.
ಈ ಮೂರು ಸಿನಿಮಾಗಳ ಜೊತೆಗೆ 'ಎಲೆಕ್ಟ್ರಾನಿಕ್ ಸಿಟಿ' ಹಾಗೂ 'ಸ್ಕೂಲ್ ಡೇಸ್' ಎನ್ನುವ ಮತ್ತೆರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ನಗರದ ಪ್ರತಿಷ್ಠಿತ ಬಡಾವಣೆಯ ಹೆಸರನ್ನೇ ಟೈಟಲ್ ಆಗಿ ಇಟ್ಟು ಆರ್. ಚಿಕ್ಕಣ್ಣ ಎಂಬುವವರು 'ಎಲೆಕ್ಟ್ರಾನಿಕ್ ಸಿಟಿ' ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಆರ್ಯನ್ ಶೆಟ್ಟಿ, ದಿಯಾ ಆಶ್ಲೇಶ, ರಕ್ಷಿತ ಕೆರೆಮನೆ ಹಾಗೂ ರಶ್ಮಿ ಚಿತ್ರದ ತಾರಾಗಣದಲ್ಲಿದ್ದಾರೆ. ಐಟಿ ಉದ್ಯೋಗಿಗಳ ಕಥೆಯನ್ನೇ ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸುತ್ತಾ ಸುತ್ತುವ 'ಸ್ಕೂಲ್ ಡೇಸ್' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಆಶೀರ್ವಾದಕ್ಕಾಗಿ ಕಾಯುತ್ತಿದೆ. ಉಮೇಶ್ ಎಸ್. ಹಿರೇಮಠ ನಿರ್ಮಾಣದ ಈ ಚಿತ್ರಕ್ಕೆ ಸಂಜಯ್ .ಹೆಚ್ ಆಕ್ಷನ್ ಕಟ್ ಹೇಳಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲೇ ಇಡೀ ಸಿನಿಮಾ ಮೂಡಿಬಂದಿದೆ.


Click it and Unblock the Notifications











