ರಿಷಬ್ 'ಕಾಂತಾರ'-1 ಚಿತ್ರಕ್ಕೆ ಸಂಕಷ್ಟ; ದೈವರಾಧನೆ ಪ್ರದರ್ಶಿಸದಂತೆ ವಿಹೆಚ್‌ಪಿ, ಭಜರಂಗದಳ ವಾರ್ನಿಂಗ್
ಕನ್ನಡ ಚಿತ್ರರಂಗದಲ್ಲಿ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ರಿಷಬ್ ಶೆಟ್ಟಿ ಈ ಸಿನಿಮಾ ಮೂಲಕ ತುಳುನಾಡಿನ ಆಚಾರ ವಿಚಾರವನ್ನು ಪ್ರಪಂಚಕ್ಕೆ ಪರಿಚಯಿಸಿ ಗೆದ್ದಿದ್ದರು. ದೈವಾರಾಧನೆಯನ್ನು ಭಕ್ತಿಪೂರ್ವಕವಾಗಿ ಹಾಗೂ ತುಳುನಾಡಿನ ಕಾರ್ಣಿಕವನ್ನು ತೆರೆಗೆ ತಂದು ಮೆಚ್ಚುಗೆ ಪಡೆದುಕೊಂಡಿದ್ದರು. ಇದೀಗ ಚಿತ್ರದ ಪ್ರೀಕ್ವೆಲ್ ಮಾಡಲು ಮುಂದಾಗಿದ್ದಾರೆ.
'ಕಾಂತಾರ' ಚಾಪ್ಟರ್-1 ಚಿತ್ರಕ್ಕೆ ಈಗಾಗಲೇ ಮುಹೂರ್ತ ನೆರವೇರಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಆದರೆ ಚಿತ್ರದಲ್ಲಿ ದೈವಾರಾಧನೆ ಪ್ರದರ್ಶನ ಮಾಡಬಾರದು ಎನ್ನುವ ಆಗ್ರಹವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. 'ಕಾಂತಾರ' ಸಿನಿಮಾ ನಂತರ ಕರಾವಳಿ ದೈವಾರಾದನೆ ಎಷ್ಟು ಪ್ರಸಿದ್ಧಿ ಪಡೆಯಿತ್ತೋ ಅಷ್ಟೇ ಅವಹೇಳನಕ್ಕೆ ಒಳಗಾಯಿತು ಎನ್ನುವ ವಾದವೂ ಇದೆ. ಸದ್ಯ ಸಿನಿಮಾ, ಧಾರಾವಾಹಿ ಹಾಗೂ ಸಭಾ ಕಾರ್ಯಕ್ರಮದಲ್ಲಿ ದೈವಾರಾಧನೆಗೆ ಅಪಮಾನ ಆಗುತ್ತಿದೆ ಅಂತ ದೈವಾರಾಧಕರು ಖಂಡಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ಕೂಡ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ದೈವಾರಾಧನೆಯನ್ನು ಯಾರು ಅನುಕರಿಣೆ ಮಾಡಲು ಹೋಗಬೇಡಿ. ರೀಲ್ಸ್, ಡ್ಯಾನ್ಸ್ ಅಂತೆಲ್ಲಾ ಅದಕ್ಕೆ ಅಪಚಾರ ಮಾಡಬೇಡಿ. ನಾವು ಸಾಕಷ್ಟು ಶ್ರದ್ಧಾ ಭಕ್ತಿಯಿಂದ ಅದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ನೀವು ಅದನ್ನು ಪ್ರದರ್ಶಿಸಿ ಅಪಮಾನ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಕೆಲವರು ಇದನ್ನು ಕೇಳುತ್ತಿಲ್ಲ. ಪದೇ ಪದೇ ಈ ತಪ್ಪು ಮಾಡುತ್ತಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ 'ಕಾಂತಾರ' ಪ್ರೀಕ್ವೆಲ್ ಬರುತ್ತಿದ್ದು ಆ ಚಿತ್ರದಲ್ಲಿ ಕೂಡ ದೈವಾರಾಧನೆ ವಿಚಾರಗಳು ಇರುವ ಸಾಧ್ಯತೆಯಿದೆ. ಆದರೆ ದೈವಾರಾಧನೆ ಪ್ರದರ್ಶನದ ಸರಕಲ್ಲ, ಅದನ್ನು ಪ್ರದರ್ಶನ ಮಾಡಿದರೆ ಮುತ್ತಿಗೆ ಹಾಕುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್ವೆಲ್ ಎಚ್ಚರಿಕೆ ನೀಡಿದ್ದಾರೆ.
ಸಿನಿಮಾ, ಧಾರಾವಾಹಿ, ರೀಲ್ಸ್ ಎಲ್ಲೆಲ್ಲೂ ದೈವಾರಾಧನೆಗೆ ಅಪಮಾನ ಆಗುತ್ತಿದೆ ಎಂದು ದೈವಾರಾಧಕರು ಖಂಡಿಸುತ್ತಾ ಬರುತ್ತಿದ್ದಾರೆ. ಸದ್ಯ ಅವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಬೆಂಬಲ ನೀಡಿದ್ದು, ದೈವಾರಾಧನೆಗೆ ಅಪಮಾನ ಆದ್ರೆ ಸಹಿಸುದಿಲ್ಲ ಎಂದಿದ್ದಾರೆ.

'ಕಾಂತಾರ' ಸಿನಿಮಾ ಬಳಿಕ ಕೆಲವರು ದೈವದ ವೇಷ ತೊಟ್ಟು ನರ್ತಿಸಲು ಆರಂಭಿಸಿದ್ದಾರೆ. ಇದು ದೈವಾರಾಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ದೈವಾರಾಕರು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇತ್ತೀಚಿಗೆ ಕನ್ನಡ ಖಾಸಗಿ ವಾಹಿನಿಯ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲೂ ದೈವಾರಾಧನೆ ದೃಶ್ಯ ತೋರಿಸಿದ್ದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಸದಸ್ಯರು ಈ ಬಗ್ಗೆ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಸದ್ಯ ದೈವಾರಾಧಕರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕೂಡ ಸಾಥ್ ನೀಡಿದೆ. ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. "ರಿಷಬ್ ಶೆಟ್ಟಿ ಅವರಿಗೂ ಹೇಳುತ್ತಿದ್ದೇವೆ. ಮುಂದೆ ಸಿನಿಮಾದಲ್ಲಿ ದೈವರಾಧನೆಯ ಪ್ರದರ್ಶನವಾಗಬಾರದು. ಆಗೊಮ್ಮೆ ಆದರೆ ನಮ್ಮ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತದೆ. ಸಿನಿಮಾ, ಧಾರಾವಾಹಿಗಳಲ್ಲಿ ದೈವಾರಾಧನೆ ದೃಶ್ಯಗಳು ಕಂಡುಬಂದರೆ ಬೆಂಗಳೂರಿನಲ್ಲಿ ಮುತ್ತಿಗೆ ಹಾಕುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ಹಲವು ಭಾಷೆಗಳಿಗೆ ಡಬ್ ಆಗಿ ತೆರೆಗಪ್ಪಳಿಸಿತ್ತು. 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿತ್ತು. ಮುಂದಿನ ವರ್ಷ ಪ್ರೀಕ್ವೆಲ್ ತೆರೆಗೆ ಬರಲಿದೆ.


Click it and Unblock the Notifications











