For Quick Alerts
ALLOW NOTIFICATIONS  
For Daily Alerts

  ಸಿನಿಮಾ ರಂಗದಲ್ಲಿ 40 ವರ್ಷ ಉಳಿಯುವುದು ತಮಾಷೆಯಾ?

  By Super
  |

  'ಎಂಭತ್ತರ ದಶಕ. ಜನ ಕೆಬಿ ಸಿನಿಮಾ ಅಂತ ಥಿಯೇಟರ್‌ಗೆ ಬರುತ್ತಿದ್ದರು. ಕುತೂಹಲಕ್ಕೆಂದು ನಾನೇ ಥಿಯೇಟರ್‌ನಲ್ಲಿ ಕೂತು ಜನ ನನ್ನ ಬಗ್ಗೆ ಮಾತಾಡೋದನ್ನ ಕೇಳಿದ್ದೇನೆ. ಇವತ್ತು ಕೆಬಿ, ಎಬಿ ಅಥವಾ ಎಕ್ಸ್‌ವೈಝಡ್‌ ಯಾರೇ ಆಗಲಿ. ಸಿನಿಮಾ ಬರೀ ಟೈಮ್‌ಪಾಸ್‌. ಖೇದವಾಗುತ್ತದೆ'.

  ಕಮಲ ಹಾಸನ್‌ ಮತ್ತು ರಜನೀಕಾಂತ್‌ ಎಂಬ ತಾರೆಗಳನ್ನು ಹುಟ್ಟು ಹಾಕಿದ ದಕ್ಷಿಣ ಭಾರತದ ಮಹಾನ್‌ ನಿರ್ದೇಶಕ ಕೆ.ಬಾಲಚಂದರ್‌ ಮಾತಿದು. ಇವರ ವಯಸ್ಸು 70. ಸಿನಿಮಾ ಉದ್ದಿಮೆಯಲ್ಲಿ ನಿರ್ದೇಶಕರಾಗಿ 40 ವರ್ಷಗಳ ಅನುಭವವಿದೆ. ಇದೀಗ ಇವರ ನಿರ್ದೇಶನದ 100ನೇ ಚಿತ್ರ ತೆರೆ ಕಂಡಿದೆ. ಈ ತಮಿಳು ಸಿನಿಮಾದ ಹೆಸರು ಪಾರ್ಥಾಲೇ ಪರವಶಂ. ಭಾರತದ ಚಿತ್ರರಂಗದಲ್ಲಿ ಇದೀಗ ಈತನದೇ ಮಾತುಕತೆ.


  ಇಂಥಾ ಇಳಿವಯಸ್ಸಲ್ಲೂ ಅವರು ಹೇಳುತ್ತಾರೆ- ಕಲಿತಿದ್ದು ಕರದಗಲ, ಕಲಿಯದುದು ಕಡಲಗಲ
  ಪ್ರತಿ ಸಿನಿಮಾಗೂ ನಾನು ಹೊಸ ನಿರ್ದೇಶಕ. ದಶಕಗಳು ಕಳೆದಂತೆ ಜನಾಭಿರುಚಿ ಬದಲಾಗುತ್ತದೆ. ಕಾಲಾಯ ತಸ್ಮೈ ನಮಃ. ಜನಕ್ಕೆ ಬೇಕಾದ್ದನ್ನು ಕೊಡಬೇಕು. ಅದರೊಳಗೇ ನನ್ನತನ ತೋರಬೇಕು. ನಾಲ್ಕು ವರ್ಷವಾಗಿತ್ತು, ಸಿನಿಮಾ ಪ್ರಪಂಚದಿಂದ ಹೊರಗುಳಿದು. ಕಲ್ಕಿ ಸಿನಿಮಾ ನಂತರ ತಮಿಳು ಟಿವಿ ಸೀರಿಯಲ್‌ಗಳ ಲೋಕದಲ್ಲಿ ಮುಳುಗಿಹೋದೆ.

  ಈ ನಾಲ್ಕೇ ವರ್ಷದಲ್ಲಿ ಉದ್ದಿಮೆ ಸಾಕಷ್ಟು ಬದಲಾಗಿದೆ ಎನಿಸುತ್ತಿದೆ. ಅದಕ್ಕೇ ನನ್ನ ಸಿನಿಮಾದ ನಾಯಕ ಮಾಧವನ್‌. ಸಿಮ್ರನ್‌, ಸ್ನೇಹ, ನಾನೇ ಅವಕಾಶ ಕೊಟ್ಟ ಕಮಿಡಿಯನ್‌ ವಿವೇಕ್‌, ಕುಣಿತದ ಹೊಸ ಸೆನ್ಸೆಷನ್‌ ಲಾರೆನ್ಸ್‌ ನನ್ನ ನೂರನೇ ಚಿತ್ರದ ನಟನಾ ಬಳಗ. ಯುವಕರಲ್ಲಿ ಸಂಗೀತದ ಹುಚ್ಚೆಬ್ಬಿಸಿರುವ ಎ.ಆರ್‌.ರೆಹಮಾನ್‌ ಸಂಗೀತವಿದೆ.

  ಭಾವನೆಯ ಪಾಶ : ಎಪ್ಪತ್ತು ಎಂಭತ್ತರ ದಶಕದಲ್ಲಿ ಸ್ಯಾಂಡಲ್‌ವುಡ್‌ನಲ್ಲೂ ಕೆ.ಬಾಲಚಂದರ್‌ ಅಲೆ ಎದ್ದಿತ್ತು. ತಪ್ಪಿದ ತಾಳ, ಬೆಂಕಿಯಲ್ಲಿ ಅರಳಿದ ಹೂವು, ಎರಡು ರೇಖೆಗಳು, ಮುಗಿಲ ಮಲ್ಲಿಗೆ, ಸುಂದರ ಸ್ವಪ್ನಗಳು ಸಾಲು ಸಾಲಾಗಿ ಯಶಸ್ವಿಯಾದ ಬಾಲಚಂದರ್‌ ನಿರ್ದೇಶನದ ಕನ್ನಡ ಚಿತ್ರಗಳು. ಹೆಂಗಸು, ಪ್ರೀತಿ ವಸ್ತುಗಳನ್ನುಳ್ಳ ಚಿತ್ರಗಳ ಮೂಲಕ ಭಾವನೆಯ ಪಾಶ ಹಾಕಿ ಪ್ರೇಕ್ಷಕನ ಹಿಡಿದಿಟ್ಟವರು ಬಾಲಚಂದರ್‌. ಏಕ್‌ ದೂಜೇ ಕೇ ಲಿಯೇ ಎಂಬ ಇವರ ಹಿಂದಿ ಚಿತ್ರ ಇವತ್ತಿಗೂ ಹಸುರು. ಅದರಲ್ಲಿನ ಮುದ್ದು ಕಮಲ ಹಾಸನ್‌ನ ನೋಡಿದ ಬಾಲಿವುಡ್‌ನವರು, ಆ ಕಾರಣಕ್ಕಾಗೇ ಕಮಲ್‌ನನ್ನು ಒಬ್ಬ ಹಿಂದಿ ನಾಯಕನಾಗಿ ಸ್ವೀಕರಿಸಿದರು.

  ಕಮಲ್‌ ಸಾಣೆಗೊಡ್ಡಿಕೊಂಡದ್ದು ಬಾಲಚಂದರ್‌ ನಿರ್ದೇಶನದ 22 ಸಿನಿಮಾಗಳಲ್ಲಿ. ರಜನಿಕಾಂತ್‌ ಕೂಡ ಬಾಲಚಂದರ್‌ ಅವರನ್ನು ಇವತ್ತಿಗೂ ನೆನೆಯುತ್ತಾರೆ. ರಜನಿ ಸೂಪರ್‌ ಸ್ಟಾರ್‌. ಇನ್ನು ಕಮಲ್‌ ಹಿಂದೂಮುಂದೂ ನೋಡದೆ ಸಿನಿಮಾ ಉದ್ದಿಮೆಯಲ್ಲಿ ಕೋಟ್ಯಂತರ ರುಪಾಯಿ ಹಣ ಹೂಡಬಲ್ಲ ಮಟ್ಟಿಗೆ ಬೆಳೆದು ಬಿಟ್ಟಿದ್ದಾರೆ. ಇತ್ತೀಚೆಗೆ ತೆರೆ ಕಂಡಿರುವ ಅಭಯ್‌ (ತಮಿಳಿನ ಅಳವಂದಾನ್‌) ಇದಕ್ಕೆ ನಿದರ್ಶನ.

  ರೆಹಮಾನ್‌ ಜಾಣ : ಇಳಯರಾಜಾರ ಸಂಗೀತ ಮೆಚ್ಚುತ್ತಿದ್ದವರು ಬಾಲಚಂದರ್‌. ರೆಹಮಾನ್‌ ಯಾಕೆ ಬೇಕಾಯಿತು ಎಂಬ ಪ್ರಶ್ನೆಗೆ ಅವರು ಕೊಡುವ ಉತ್ತರ- 'ರೋಜಾ ಚಿತ್ರ ನಿರ್ಮಿಸಿದ್ದು ನಾನು. ಅದರ ಮೂಲಕ ಪರಿಚಿತರಾದವರು ರೆಹಮಾನ್‌. ನಾನು ನಿರ್ದೇಶಿಸಿದ ಡ್ಯೂಯೆಟ್‌ ಚಿತ್ರದ ಸಂಗೀತ ಸೂಪರ್‌ ಹಿಟ್‌ ಆಗಿತ್ತು. ಅದಕ್ಕೆ ಸಂಗೀತ ಸಂಯೋಜಿಸಿದ್ದವರು ಇದೇ ರೆಹಮಾನ್‌. ಬದಲಾದ ಕಾಲಕ್ಕೆ ಬೇಕಾದ ಸಂಗೀತ ಹೊಸೆಯಬಲ್ಲ ಜಾಣ ಆತ. ಅವರ ಪಾಡಿಗೆ ಅವರನ್ನು ಬಿಟ್ಟುಬಿಟ್ಟೆ. ಡಬ್ಬಲ್‌ ಓಕೆ ಆದ ನಂತರವೇ ಅವರು ಟ್ಯೂನ್‌ಗಳನ್ನು ನನಗೆ ಕೇಳಿಸಿದ್ದು'.

  ಬ್ರೇವೋ ಬಾಲ್‌...
  ಬಾಲಚಂದರ್‌ 100ನೇ ಚಿತ್ರ ತೆರೆ ಕಂಡ ಗಳಿಗೆಯಲ್ಲಿ ಇವರ ಬಗ್ಗೆ ಚಿತ್ರರಂಗದ ಕೆಲವರು ಆಡಿರುವ ಮಾತುಗಳು ಹೀಗಿವೆ-

  ಅವರ ಸುಮಾರು 20 ಚಿತ್ರಗಳು 25 ವಾರ ಯಶಸ್ವಿಯಾಗಿ ಓಡಿವೆ. ಸಂಭಾಷಣಾಕಾರರಾಗೇ ಅವರು ಚಿತ್ರರಂಗಕ್ಕೆ ಬಂದಿದ್ದವರು. ಒಂದೇ ಒಂದು ಸಾಲಿನ ಸಂಭಾಷಣೆಯಲ್ಲೇ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವರು. ಅದು ಅವರದೇ ಆದ ಸ್ಟೈಲ್‌. ಅವರ ಚಿತ್ರಗಳಲ್ಲಿ ಹಾಡು ಸುಖಾ ಸುಮ್ಮನೆ ಮೂಡುವುದಿಲ್ಲ. ಚಿತ್ರದ ಅವಿಭಾಜ್ಯ ಅಂಶಗಳವು- ಚಿತ್ರ ನಿರ್ಮಾಪಕ ಜಿ.ವೆಂಕಟೇಶ್ವರನ್‌.
  ಒಂದು ಜನರೇಷನ್‌ ಜನರ ರುಚಿ ಭರಿಸುವುದೇ ಕಷ್ಟ. ಅಂಥಾದರಲ್ಲಿ ಬಾಲಚಂದರ್‌ ಮೂರ್ನಾಲ್ಕು ಜನರೇಷನ್‌ಗಳ ಹಾದು ಬಂದವರು. ಕಾಲಕ್ಕೆ ತಕ್ಕಂತೆ ಜನರ ಅಭಿರುಚಿಗೆ ಸ್ಪಂದಿಸುತ್ತಾ, ಹೊಸತನ್ನು ಹೆಣೆಯುತ್ತಾ ಬಂದಿರುವುದೇ ಅವರ ಸಾಧನೆ- ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌.
  ಸಿನಿಮಾ ಪ್ರಪಂಚದಲ್ಲಿ ಹೊಸ ವೇದಿಕೆಗಳನ್ನು ಕಟ್ಟಿದ ಸೃಜನಶೀಲ ಆತ. 20 ವರ್ಷಗಳ ಹಿಂದೆಯೇ ಅವರು ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದರು. ಅಷ್ಟು ಪ್ರಖರವಾಗಿತ್ತು ಅವರ ಬೆಳವಣಿಗೆ- ಹಾಸ್ಯನಟ ವಿವೇಕ್‌.

  'ವಯಸ್ಸಾಗುತ್ತಿದೆ. ಆದರೂ ಮನಸ್ಸು ಸಿನಿಮಾ ಬಿಡಲು ಒಲ್ಲೆ ಅನ್ನುತ್ತಿದೆ. ಜನಬೆಂಬಲ ಸಾಕಷ್ಟಿದೆ. ಕೈಲಾಗುವವರೆಗೆ ಸಿನಿಮಾ ನಿರ್ದೇಶಿಸಲು ನಾನು ಸದಾ ಸಿದ್ಧ' ನಗುತ್ತಾರೆ ಬಾಲಚಂದರ್‌.

  ಅಂದಹಾಗೆ, ಈತ ಮನಸ್ಸು ಮಾಡಿದ್ದರೆ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಬಹುದಿತ್ತು. 'ಏಕ್‌ ದೂಜೇ ಕೇ ಲಿಯೇ' ಆ ಮಟ್ಟಿನ ಹೆಸರು ತಂದಿತ್ತಿತ್ತು. ಆದರೆ ಹಾಗ್ಯಾಕೆ ಆಗಲಿಲ್ಲ ? ಓವರ್‌ ಟು ಬಾಲ್‌... 'ಬಾಲಿವುಡ್ಡಿನ ಜಾಯಮಾನ ನನಗೆ ಒಗ್ಗಲಿಲ್ಲ. ನಮಗೆ ಸಂಜೆ ಆಗುವ ಹೊತ್ತಲ್ಲಿ ಮುಂಬಯಿಯಲ್ಲಿ ಬೆಳಕಾಗುತ್ತದೆ. ಉದ್ದಿಮೆ ಮಾತಾಡುವುದೇ ಆಗ. ಅದೂ ಕುಡಿತದ ನಡುವೆಯೇ ಆಗಬೇಕು. ನನಗೆ ಕುಡಿಯುವ ಅಭ್ಯಾಸವಿಲ್ಲ. ಹೀಗಾಗಿ ಬಾಲಿವುಡ್‌ಗೂ ನನಗೂ ಆಗಿಬರಲಿಲ್ಲ. ನಮ್ಮೂರೇ ನನಗೆ ಚೆಂದ' !

  English summary
  kannada Edition of Oneindia.in - K.Balachandar : 100 not out!

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more