ಕನ್ನಡದ ಸಿನಿಮಾಕ್ಕೆ 'ಅಧೀರ'ನ ಶುಭ ಹಾರೈಕೆ, 'ಪುಷ್ಪ'ನ ಜನಕನೂ ಸಾಥ್!
'ಕೆಜಿಎಫ್' ಸಿನಿಮಾ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾದ ಗರಿಮೆಯನ್ನು ಹೆಚ್ಚಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಪ್ರಸ್ತುತ ಭಾರತದ ಸಿನಿಮಾ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗಳಿಗೆ ವಿಶೇಷ ಗೌರವವನ್ನು ತಂದುಕೊಡುವಲ್ಲಿ 'ಕೆಜಿಎಫ್' ಪಾತ್ರ ಬಹಳ ಪ್ರಮುಖವಾದುದು.
'ಕೆಜಿಎಫ್' ಹಾದಿಯಲ್ಲಿಯೇ ಕೆಲವು ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗಲು ಹೊರಟಿದ್ದು, ವಿವಿಧ ರಾಜ್ಯಗಳಲ್ಲಿ ಆ ಸಿನಿಮಾಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿವೆ. '777 ಚಾರ್ಲಿ' ಸಿನಿಮಾ ಈಗಾಗಲೇ ಗೆದ್ದಿದ್ದು, ಇದೀಗ ಇದೇ ಹಾದಿಯಲ್ಲಿ 'ವಿಕ್ರಾಂತ್ ರೋಣ' ಸಹ ಮುನ್ನುಗ್ಗುತ್ತಿದೆ. ಇದೇ ಸಾಲಿಗೆ ಸೇರಲು ಹೊರಟಿದೆ ಕನ್ನಡದ ಹೊಸ ಸಿನಿಮಾ 'ಬನಾರಸ್'.
ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಾಯಕರಾಗಿ ನಟಿಸಿರುವ "ಬನಾರಸ್" ಸಿನಿಮಾ ಸಹ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಸಿನಿಮಾಕ್ಕೆ ವಿವಿಧ ರಾಜ್ಯಗಳ ಸ್ಟಾರ್‌ಗಳಿಂದ ಉತ್ತಮ ಪ್ರಸಂಶೆ ಮತ್ತು ಬೆಂಬಲ ವ್ಯಕ್ತವಾಗುತ್ತಿದೆ.

'ಬನಾರಸ್' ಸಿನಿಮಾದ 'ಮಾಯಾಗಂಗೆ' ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಹಾಗೂ ಮಲೆಯಾಳಂ ನಲ್ಲಿ ಏಕಕಾಲಕ್ಕೆ "ಮಾಯಾಗಂಗೆ" ಹಾಡು ಬಿಡುಗಡೆಯಾದ ನಂತರ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಚೆನ್ನೈನಲ್ಲಿ ತಮಿಳಿನಲ್ಲಿ ಈ ಹಾಡನ್ನು ನಟ ವಿಶಾಲ್, ಹೈದರಾಬಾದ್ ನಲ್ಲಿ ನಿರ್ದೇಶಕ ಸುಕುಮಾರ್ ಹಾಗೂ ಮುಂಬೈನಲ್ಲಿ ನಿರ್ದೇಶಕ
ಮಧುರ್ ಭಂಡಾರಕರ್ ಬಿಡುಗಡೆ ಮಾಡಿದರು. ಮುಂಬೈನ ಸಮಾರಂಭಕ್ಕೆ ಖ್ಯಾತ ನಟ ಸಂಜಯ್ ದತ್ ಅವರು ಆಗಮಿಸಿ, ಝೈದ್ ಖಾನ್ ಅವರಿಗೆ ಶುಭ ಕೋರಿದ್ದಾರೆ.

ಕರ್ನಾಟಕದ ಹೊರಗೂ ನಮ್ಮ "ಬನಾರಸ್" ಚಿತ್ರಕ್ಕೆ ಹಾಗೂ "ಮಾಯಾಗಂಗೆ" ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಂತಹ ಅದ್ಭುತ ಪ್ರತಿಕ್ರಿಯೆಗೆ ನನ್ನ ಮನ ತುಂಬಿ ಬಂದಿದೆ ಎನ್ನುತ್ತಾರೆ ಸಿನಿಮಾದ ನಾಯಕ ಝೈದ್ ಖಾನ್.
'ಬನಾರಸ್' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸೋನಾಲ್ ಮೊಂತೆರೊ ಈ ಚಿತ್ರದ ನಾಯಕಿ. ಸಿನಿಮಾದ ಬಿಡುಗಡೆ ದಿನಾಂಕ ಇದೀಗಷ್ಟೆ ಘೋಷಣೆ ಆಗಬೇಕಿದೆ.


Click it and Unblock the Notifications











