»   » ‘ಬ್ಯಾಂಡಿಟ್‌ ಕ್ವೀನ್‌’ಗೆ ಶುಕ್ರದೆಶೆಯ ಕಾಲ

‘ಬ್ಯಾಂಡಿಟ್‌ ಕ್ವೀನ್‌’ಗೆ ಶುಕ್ರದೆಶೆಯ ಕಾಲ

Posted By: Staff
Subscribe to Filmibeat Kannada

\ಫೂಲನ್‌ ದೇವಿ ಹತ್ಯೆಯ ನಂತರ ಶೇಖರ್‌ ಕಪೂರ್‌ ಚಿತ್ರಿಸಿರುವ 'ಬ್ಯಾಂಡಿಟ್‌ ಕ್ವೀನ್‌" ಚಿತ್ರ ಉತ್ತರ ಭಾರತದ ಚಿತ್ರಮಂದಿರಗಳಲ್ಲಿ ಮತ್ತೆ ತೆರೆ ಕಂಡಿದ್ದು, ಭಾರೀ ಹಣ ಬಾಚುತ್ತಿದೆ. ಅದರಲ್ಲೂ ಉತ್ತರ ಪ್ರದೇಶದ ಥಿಯೇಟರ್‌ಗಳ ಮುಂದೆ ಜನರ ಸಾಲೋ ಸಾಲು.

ಉತ್ತರ ಪ್ರದೇಶದ 12 ಚಿತ್ರಮಂದಿರಗಳ ಮುಂದೆ ಜನ ಇನ್ನೂ ಕರಗುತ್ತಿಲ್ಲ. ಅಲಹಾಬಾದ್‌ನಲ್ಲಿ ಕಳೆದ ಒಂದೇ ವಾರ ಈ ಚಿತ್ರ 72 ಸಾವಿರ ರುಪಾಯಿ ರೊಕ್ಕ ಮಾಡಿದೆ. ಫೂಲನ್‌ ಹತ್ಯೆಯಾದ ನಂತರದ ಎರಡೇ ದಿನಗಳಲ್ಲಿ 45 ಸಾವಿರ ರುಪಾಯಿ ಜೇಬುತುಂಬಿದೆ. ಲಕ್ನೋದ ಅಲಂಕಾರ್‌ ಚಿತ್ರಮಂದಿರ 3 ದಿನಗಳಲ್ಲಿ 23 ಸಾವಿರ ದುಡ್ಡು ಬಾಚಿಕೊಂಡಿದೆ. ಹತ್ತಿರದಲ್ಲೇ ಇರುವ ಸುದರ್ಶನ್‌ ಟಾಕೀಸ್‌ ಅಲಂಕಾರನ್ನೂ ಮೀರಿಸಿ 24 ಸಾವಿರ ರುಪಾಯಿ ದುಡ್ಡು ಮಾಡಿದೆ. ಗ್ರಾಹಕರ ಸೆಳೆಯಲು ಉತ್ತರ ಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿರುವುದು 'ಬ್ಯಾಂಡಿಟ್‌ ಕ್ವೀನ್‌" ಗಳಿಕೆಗೆ ಒದಗಿ ಬಂದಿರುವ ಬೋನಸ್‌.

ಮಾಲಾ ಸೇನ್‌ ಕೃತಿ ಆಧಾರಿತ 'ಬ್ಯಾಂಡಿಟ್‌ ಕ್ವೀನ್‌" ಚಿತ್ರ ಸಾಕಷ್ಟು ವಿವಾದ ಸೃಷ್ಟಿಸಿತ್ತು. 1995ರಲ್ಲಿ ಸೆನ್ಸಾರ್‌ ಮಂಡಲಿ ಕೆಲವು ಬೆತ್ತಲೆ ಸನ್ನಿವೇಶಗಳು ಹಾಗೂ ಅಶ್ಲೀಲ ಸಂಭಾಷಣೆಗಳಿಗೆ ಕತ್ತರಿ ಹಾಕಿತು. ಶೇಖರ್‌ ಕಪೂರ್‌ ನ್ಯಾಯಾಲಯದ ಮೊರೆ ಹೋಗಿ, ಚಿತ್ರದ ಯಾವ ತುಣುಕಿಗೂ ಚ್ಯುತಿ ಬಾರದಂತೆ ಕೊನೆಗೂ ಸೆನ್ಸಾರ್‌ ಸರ್ಟಿಫಿಕೇಟ್‌ ಪಡೆದರು. ಫೂಲನ್‌ ಪಾತ್ರ ವಹಿಸಿದ್ದ ಸೀಮಾ ಬಿಸ್ವಾಸ್‌ ಅಷ್ಟು ಹೊತ್ತಿಗೆ ಮ್ಯಾಗಜೀನ್‌ಗಳ ಮುಖಪುಟ ಅಲಂಕರಿಸಿದ್ದರು.

ವರ್ಷ ಕಾಲದ ಇಷ್ಟೆಲ್ಲಾ ಸರ್ಕಸ್ಸಿನ ನಂತರ 1996ರ ಗಣ ರಾಜ್ಯೋತ್ಸವದ ದಿನ ಚಿತ್ರ ದೇಶಾದ್ಯಂತ ತೆರೆ ಕಂಡಿತು. ಆದರೆ ಶೇಖರ್‌ ಪರದಾಟ ತೀರಲಿಲ್ಲ. ಅದೇ ವರ್ಷ ಮೇ ತಿಂಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಂದಕ್ಕೆ ಸ್ಪಂದಿಸಿದ ಸುಪ್ರಿಂಕೋರ್ಟ್‌, ಚಿತ್ರಪ್ರದರ್ಶನಕ್ಕೆ ನಿಷೇಧ ಹೇರಿತು. ನಂತರ ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಚಿತ್ರ ಆಗೊಮ್ಮೆ ಈಗೊಮ್ಮೆ ಬಂದು ಹೋಗುವುದು ಮಾಮೂಲಾಗಿತ್ತು. ಆದರೆ ಈಗ ಫೂಲನ್‌ ಸಾವೇ ಸಿನಿಮಾಗೆ ವರದಾನವಾಗಿದೆ. ಉತ್ತರ ಪ್ರದೇಶದ ಸಿನಿಮಾ ಹಂಚಿಕದಾರ ಸಂಜಯ್‌ ಮೆಹ್ತಾ ಅವರಿಗೆ ಫೂಲನ್‌ ಸಾವೇ ನಗು ತಂದಿದೆ ! 

English summary
A new lease of life for Bandit Queen
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada