ಹಿರಿಯ ನಟರಾದ ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲಿ 2022-23 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ಮತ್ತು ಡಿಂಗ್ರಿ ನಾಗರಾಜ್‌ಗೆ ಪ್ರಶಸ್ತಿ ಲಭಿಸಿದೆ. ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಿರಿಯ ಕಲಾವಿದರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬ್ಯಾಂಕ್ ಜನಾರ್ಧನ್ ಹಾಗೂ ಡಿಂಗ್ರಿ ನಾಗರಾಜ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಸಂತಸ ತಂದಿದೆ. ಸೋಶಿಯಲ್ ಮೀಡಿಯಾದಲ್ಲೂ ಅಭಿನಂದನೆಗಳು ಮಹಾಪೂರವೇ ಹರಿದು ಬರ್ತಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಸಿನಿಮಾ, ಸಂಗೀತ, ಕ್ರೀಡೆ, ನ್ಯಾಯಾಂಗ, ರಂಗಭೂಮಿ, ಶಿಕ್ಷಣ, ಪರಿಸರ, ತಂತ್ರಜ್ಞಾನ, ಮಾಧ್ಯಮ, ಸೇರಿದಂತೆ ಹಲವು ವಿಭಾಗಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸಾಧಕರ ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಗಂಡಗಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಶಸ್ತಿ ಪುರಸ್ಕೃತರು ಮತ್ತು ಪ್ರಶಸ್ತಿ ಪಡೆದ ಸಂಘ ಸಂಸ್ಥೆಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ.
68 ಸಾಧಕರು ಹಾಗೂ 10 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ಘೋಷಿಸಿದೆ. ಈ ಬಾರಿ 13 ಮಹಿಳೆಯರು, 54 ಪುರುಷರು ಮತ್ತು ಒಬ್ಬರು ಮಂಗಳಮುಖಿಗೆ ರಾಜ್ಯೋತ್ಸವ ಪ್ರಶಸ್ ಲಭಿಸಿದೆ. ಇಬ್ಬರು ಶತಾಯುಷಿಗಳು ಈ ಪಟ್ಟಿಯಲ್ಲಿರುವುದು ವಿಶೇಷ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು 5 ಲಕ್ಷ ರೂ. ನಗದು ಮತ್ತು 25 ಗ್ರಾಂ ಚಿನ್ನದ ಪದಕ ಸಿಗಲಿದೆ.
ನಾಳೆ (ನವೆಂಬರ್ 1) ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಲಾಗುತ್ತದೆ. ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಬ್ಯಾಂಕ್ ಜನಾರ್ಧನ್ ಬಣ್ಣ ಹಚ್ಚಿ ನಟಿಸಿದ್ದಾರೆ. ಆರಂಭದಲ್ಲಿ ಕಾಶಿನಾಥ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿದ ಬ್ಯಾಂಕ್ ಜನಾರ್ಧನ್ ಬಳಿಕ ಉಪೇಂದ್ರ ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿದರು. ತಮ್ಮ ಹಾಸ್ಯ ಪಾತ್ರಗಳಿಂದ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. 'ಅಜಗಜಾಂತರ', 'ಗೌರಿ ಗಣೇಶ', 'ತರ್ಲೆ ನನ್ಮಗ', 'ರೂಪಾಯಿ ರಾಜ', 'ಶ್', 'ಮೇಕಪ್' ಹೀಗೆ ಹಲವು ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧನ್ ನಟಿಸಿ ಗೆದ್ದಿದ್ದಾರೆ.
ನೂರಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. 'ಉಂಡೇನಾಮ' ಚಿತ್ರದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವಕಾಶಗಳು ಕಮ್ಮಿ ಆಗಿದ್ದವು. ಇತ್ತೀಚೆಗೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಬ್ಯಾಂಕ್ ಜನಾರ್ಧನ್ ಚಿಕಿತ್ಸೆ ಪಡೆದಿದ್ದರು.
ಬ್ಯಾಂಕ್ ಜನಾರ್ಧನ್ ರೀತಿಯಲ್ಲೇ ಹಾಸ್ಯ ಪಾತ್ರಗಳಿಂದ ಪ್ರೇಕ್ಷಕರ ಮನಗೆದ್ದ ಮತ್ತೊಬ್ಬ ನಟ ಡಿಂಗ್ರಿ ನಾಗರಾಜ್. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಅವರು 165ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಪುತ್ರ ರಾಜ್‌ವರ್ಧನ್ ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ್ ಇಬ್ಬರಿಗೂ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಅವಕಾಶಗಳು ಕಮ್ಮಿ ಆಗಿದೆ.


Click it and Unblock the Notifications











