ಸುದೀಪ್ ವಿರುದ್ಧದ ಟ್ರೋಲ್ ಕುರಿತು ಸಿಎಂ ಪ್ರತಿಕ್ರಿಯೆ; ಕಿಚ್ಚನನ್ನು 'ಬಾಸ್' ಎಂದ ಬೊಮ್ಮಾಯಿ!
ಮೊನ್ನೆ ಏಪ್ರಿಲ್ 5ನೇ ತಾರೀಖು ಕಿಚ್ಚ ಸುದೀಪ್ ಇಡೀ ದಿನ ಸತತವಾಗಿ ಸುದ್ದಿಗೀಡಾಗಿದ್ದರು. ಹೌದು, ಆ ದಿನದ ಹಿಂದಿನ ರಾತ್ರಿಯಿಂದಲೇ ನಟ ಕಿಚ್ಚ ಸುದೀಪ್ ರಾಜಕೀಯ ಪ್ರವೇಶ ಮಾಡಲಿದ್ದಾರೆ, ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು. ಬೆಳ್ಳಂಬೆಳಗ್ಗೆಯೇ ಆಂಜನೇಯನ ದರ್ಶನ ಪಡೆದಿದ್ದ ಸುದೀಪ್ ಆ ದಿನದ ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಜತೆ ಸುದ್ದಿಗೋಷ್ಠಿಯನ್ನೂ ಸಹ ನಡೆಸಲಿದ್ದು, ಬಿಜೆಪಿ ಪಕ್ಷ ಸೇರುವುದು ಪಕ್ಕಾ ಎನ್ನಲಾಗಿತ್ತು.
ಆದರೆ ಸುದೀಪ್ ಅದಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿ ನಾನು ಯಾವ ಪಕ್ಷವನ್ನೂ ಸಹ ಸೇರುವುದಿಲ್ಲ, ನಾನು ಯಾರಿಗೂ ಸಹ ಚುನಾವಣೆ ಟಿಕೆಟ್ ಕೇಳಿಲ್ಲ, ನಾನು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಹಾಗೂ ನನಗೆ ಚುನಾವಣೆ ಎಂದರೆ ಇಷ್ಟವೂ ಸಹ ಇಲ್ಲ ಎಂಬುದನ್ನು ತಿಳಿಸಿದ್ದರು. ಹೀಗೆ ತಿಳಿಸಿದರೂ ಸಹ ಸುದ್ದಿಗೋಷ್ಠಿಯಲ್ಲಿ ಯಾವ ರೀತಿಯ ಘೋಷಣೆಯಾಗಬಹುದು ಎಂಬ ಕುತೂಹಲ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಇತ್ತು.

ಈ ಎಲ್ಲಾ ಕುತೂಹಲಗಳಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ತೆರೆ ಎಳೆದರು. ನಾನು ಯಾವ ಪಕ್ಷದ ಪರವೂ ನಿಲ್ಲುವುದಿಲ್ಲ, ಆದರೆ ನನ್ನ ಹಳೆಯ ಕಷ್ಟದ ದಿನಗಳಲ್ಲಿ ನನ್ನ ಸಹಾಯಕ್ಕೆ ನಿಂತಿದ್ದ ಬಸವರಾಜ ಬೊಮ್ಮಾಯಿ ಪರ ನಾನು ಈಗ ನಿಲ್ಲಬೇಕಿದೆ ಹಾಗೂ ಅವರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ ಎಂದು ಕಿಚ್ಚ ಸುದೀಪ್ ತಿಳಿಸಿದರು. ಈ ಮೂಲಕ ಕಿಚ್ಚ ಸುದೀಪ್ ತಾನು ಯಾವ ಪಕ್ಷದ ಪರವೂ ಅಲ್ಲ ಕೇವಲ ತನ್ನ ಆಪ್ತರಾದ ಬಸವರಾಜ ಬೊಮ್ಮಾಯಿ ಹಾಗೂ ಕೆಲ ಸ್ನೇಹಿತರ ಪರ ನಿಲ್ಲಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.
ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿಯವರೂ ಸಹ ಮಾತನಾಡಿ ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ನಾನು ಇರುವಂತಹ ಸ್ಥಾನ ಮತ್ತು ನನ್ನ ಪಕ್ಷಕ್ಕೆ ಬೆಂಬಲ ಕೊಡಲು ಬಂದಿದ್ದಾರೆ, ಅಂದರೆ ಅದರ ಅರ್ಥ ಕೇವಲ ತನ್ನ ಜತೆಗಿನ ಸಂಬಂಧಕ್ಕೆ ಗೌರವ ಕೊಟ್ಟು ಸುದೀಪ್ ಬೆಂಬಲ ನೀಡುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಬಸವರಾಜ ಬೊಮ್ಮಾಯಿ ನನಗೆ ಇವತ್ತಿಂದ ಅಲ್ಲ, ಮೊದಲಿಂದಲೂ ಸಹ ಸಂಬಂಧ ಇರೋದ್ರಿಂದ ಅವರ ಹತ್ತಿರ ಮಾತನಾಡಿದ್ದೀನಿ, ನೀನು ನಮ್ಮ ಪಕ್ಷವನ್ನು ಸೇರಿಕೊಳ್ಳದೇ ಇದ್ದರೂ ಸಹ ನಿನ್ನ ಪ್ರಚಾರ ನಮಗೆ ಅಗತ್ಯವಿದೆ ಅಂತ ಮಾತನಾಡಿದ್ದೀನಿ. ಅವರು ಏನು ಹೇಳಿದ್ರು ಅಂದ್ರೆ ನಾನು ನಿಮಗೋಸ್ಕರ ಬೆಂಬಲ ಕೊಡ್ತೀನಿ, ನೀವೇನು ಹೇಳ್ತೀರ ಅದನ್ನು ನಿಮಗೋಸ್ಕರ ಮಾಡಲು ಸಿದ್ಧವಿದ್ದೇನೆ ಎಂದಿದ್ದಾರೆ. ಅದರ ಅರ್ಥ ನನ್ನ ಜತೆಗೆ ನನ್ನ ಪಕ್ಷಕ್ಕೂ ಸಹ ಈ ಚುನಾವಣೆಯಲ್ಲಿ ಪ್ರಚಾರವನ್ನು ಅವರು ಮಾಡ್ತಾರೆ ಎಂದು ತಿಳಿಸಿದ್ದರು.

ಹೀಗೆ ಅಂದು ಈ ಇಬ್ಬರು ನೀಡಿದ್ದ ಈ ಹೇಳಿಕೆಗಳು ತೀವ್ರವಾಗಿ ಟ್ರೋಲ್ ಆಗಿದ್ದವು. ಪಕ್ಷ ಸೇರದೇ ಆ ಪಕ್ಷದ ಕೆಲವರ ಬಗ್ಗೆ ಪ್ರಚಾರ ಮಾಡುವುದೆಂದರೆ ಪಕ್ಷ ಸೇರಿದಂತೆಯೇ ಲೆಕ್ಕ, ಎರಡಕ್ಕೂ ಯಾವ ವ್ಯತ್ಯಾಸವೂ ಸಹ ಇಲ್ಲ ಎಂದು ನೆಟ್ಟಿಗರು ಸುದೀಪ್ ಕಾಲೆಳೆದಿದ್ದರು. ಪ್ರಕಾಶ್ ರಾಜ್ ಸೇರಿದಂತೆ ಹಲವು ಮಂದಿ ಸುದೀಪ್ ನಂಬಿಕೆಗೆ ವಿರೋಧವಾಗಿ ನಡೆದುಕೊಂಡಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಹೀಗೆ ಸುದೀಪ್ ಮೇಲೆ ಹೀನಾಯವಾಗಿ ಟ್ರೋಲ್ ಆಗುತ್ತಿರುವ ಕುರಿತು ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾಧ್ಯಮದವರು ಪ್ರಶ್ನೆ ಹಾಕಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ಅದಕ್ಕೆ ನಾನೇನು ಮಾಡ್ಲಪ್ಪ ಎಂದು ಉತ್ತರಿಸಿದರು. ಹಾಗೂ ಕಾಂಗ್ರೆಸ್‌ನ ಕೆಎನ್ ರಾಜಣ್ಣ ಸಹ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆಯುತ್ತೇನೆ ಎನ್ನುತ್ತಿದ್ದಾರೆ, ಇದಕ್ಕೆ ಏನು ಹೇಳ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿದ ಬಸವರಾಜ ಬೊಮ್ಮಾಯಿ "ಕರೆಯಲಿ. ಹೋಗೋದು ಬಿಡೋದು ಅವರ ಇಷ್ಟ. ಆದರೆ ಮೊನ್ನೆ ಬಾಸ್ ಸ್ಪಷ್ಟವಾಗಿ ಹೇಳಿದ್ದಾರೆ. ಯಾರು ಕಷ್ಟಕಾಲದಲ್ಲಿ ಇದ್ದರೋ ಅವರ ಸಲುವಾಗಿ ಬಂದಿದ್ದೇನೆ. ಮಿಕ್ಕವರು ಯಾರೂ ಬಂದಿಲ್ಲ ಎನ್ನುವ ರೀತಿ ಹೇಳಿದ್ದಾರೆ" ಎಂದರು.
ಹಾಗೂ ಕೊನೆಯದಾಗಿ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿದೆ ಎಂಬುದರ ಕುರಿತು ಸಹ ಮಾತನಾಡಿದ ಬಸವರಾಜ ಬೊಮ್ಮಾಯಿ ಅದೆಲ್ಲಾ ಆದಮೇಲೆನೇ ಅವರು ಪತ್ರಿಕಾಗೋಷ್ಠಿಗೆ ಬಂದಿದ್ದು ಎಂದು ಹೇಳಿ ಮಾತನ್ನು ಮುಗಿಸಿದರು. ಸದ್ಯ ಬಸವರಾಜ ಬೊಮ್ಮಾಯಿ ಅವರು ಸುದೀಪ್ ಅವರನ್ನು ಬಾಸ್ ಎಂದು ಉಲ್ಲೇಖಿಸಿರುವ ಹೇಳಿಕೆಯನ್ನು ಹಂಚಿಕೊಳ್ಳುತ್ತಿರುವ ಸುದೀಪ್ ಅಭಿಮಾನಿಗಳು ವಿಡಿಯೊವನ್ನು ವೈರಲ್ ಮಾಡಿದ್ದಾರೆ.


Click it and Unblock the Notifications











