»   » ಪಾಟೀಲರಿಗೆ ಸಿನಿಮಾ ನಿರ್ಮಿಸಲು ದುಡ್ಡೆಲ್ಲಿಂದ ಬಂತು

ಪಾಟೀಲರಿಗೆ ಸಿನಿಮಾ ನಿರ್ಮಿಸಲು ದುಡ್ಡೆಲ್ಲಿಂದ ಬಂತು

Posted By: Staff
Subscribe to Filmibeat Kannada

ಬೆಂಗಳೂರು : ಬಿ.ಸಿ. ಪಾಟೀಲರ ಗ್ರಹಚಾರ ಪೂರಾ ಕೆಟ್ಟಂತೆ ಕಾಣಿಸುತ್ತದೆ. ಪೊಲೀಸ್‌ ಡ್ರೆಸ್ಸು ಸಿನಿಮಾದಲ್ಲೇ ಸಾಕು, ಎಂದು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದರೆ- ಪೊಲೀಸ್‌ ಇಲಾಖೆ ನೀಡಿದ್ದು ಅಮಾನತ್ತಿನ ಆದೇಶ. ಮೊನ್ನೆ ತಾನೆ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ಮೇರೆಗೆ ಪಾಟೀಲರ ವಿರುದ್ಧ ಅಲಸೂರು ಪೊಲೀಸ್‌ ಠಾಣೆಯಲ್ಲಿ ದೂರೂ ದಾಖಲಾಗಿತ್ತು . ಪ್ರಸ್ತುತ, ಪಾಟೀಲ್‌ ವಿರುದ್ಧ ಸಿಓಡಿ ತನಿಖೆ ಕತ್ತಿ ಬೀಸುತ್ತಿದೆ.

ಪಾಟೀಲರ ಮೇಲಿನ ಆರೋಪ ಗುರುತರವಾದದ್ದು . ಅವರು ಭೂಗತಲೋಕದ ಸಂಪರ್ಕ ಹೊಂದಿದ್ದಾರಂತೆ. ಅರ್ಥಾತ್‌ ಅವರು ನಿರ್ಮಿಸಿರುವ ಎಂಟು ಸಿನಿಮಾಗಳಿಗೆ ಭೂಗತಲೋಕ ಫೈನಾನ್ಸ್‌ ಮಾಡಿದೆಯಂತೆ. ಈ ಆರೋಪದ ಹಿನ್ನೆಲೆಯಲ್ಲಿ ಮಾಜಿ ಪೊಲೀಸ್‌, ಹಾಲಿ ಲಂಕೇಶ್‌ ಪಾಟೀಲ್‌ ವಿರುದ್ಧ ತನಿಖೆಗೆ ನಡೆಸುವಂತೆ ದಿನಕರ್‌ ಆದೇಶಿಸಿದ್ದಾರೆ.

ಪಾಟೀಲರನ್ನು ಅಮಾನತ್ತುಗೊಳಿಸಿರುವ ಹಿಂದೆ ಕೇವಲ ಕರ್ತವ್ಯಕ್ಕೆ ಗೈರು ಹಾಜರಿ- ಸುಳ್ಳು ವೈದ್ಯಕೀಯ ಪ್ರಮಾಣಪತ್ರದ ಕಾರಣಗಳು ಮಾತ್ರವಲ್ಲದೆ, ಇನ್ನೂ ಅನೇಕ ಗುರುತರ ಕಾರಣಗಳಿರುವುದನ್ನು ಈ ಸಿಓಡಿ ತನಿಖೆ ಖಚಿತಪಡಿಸುತ್ತಿದೆ. ಪಾಟೀಲರೀಗ, ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಕ್ಕಾಗಿ ಪೊಲೀಸ್‌ ತನಿಖೆ ಹಾಗೂ ಭೂಗತಲೋಕದ ನಂಟಿನ ಆರೋಪಕ್ಕಾಗಿ ಸಿಓಡಿ ತನಿಖೆ ಎದುರಿಸಬೇಕು. ತನಿಖೆ ಎಲ್ಲಾ ಕೋನಗಳಲ್ಲೂ ಸಾಗುತ್ತದೆ, ಮುಖ್ಯವಾಗಿ ಅವರಿಗೆ ಸಿನಿಮಾ ನಿರ್ಮಾಣಕ್ಕೆ ದುಡ್ಡು ಎಲ್ಲಿಂದ ಬಂತು ಎನ್ನುವ ಬಗ್ಗೆ - ಎಂದು ಸಿಓಡಿ ಮೂಲಗಳು ತಿಳಿಸಿವೆ.

ಪಾಟೀಲ್‌- ಸಿಓಡಿ ತನಿಖೆ ಬಗ್ಗೆ ಏನೇ ಇರಲಿ. ಕನ್ನಡ ಸಿನಿಮಾದ ಮೇಲೆ ಭೂಗತಲೋಕದ ನೆರಳಿದೆ ಅನ್ನುವ ಸುದ್ದಿಗೆ ಮತ್ತೊಂದು ಪುಕ್ಕ ಸೇರಿಕೊಂಡಿರುವುದಂತೂ ಪಕ್ಕಾ ಆತಂಕದ್ದು . ಈಗಾಗಲೇ ಮಾಫಿಯಾ ಕರಾಳಹಸ್ತದಲ್ಲಿ ಬಾಲಿವುಡ್‌ ನರಳುತ್ತಿದೆ. ಮುಂಬಯಿ ಪಾತಕ ಜಗತ್ತು ಬೆಂಗಳೂರಿಗೆ ಕಾಲಿಟ್ಟಿದೆ ಅನ್ನುವ ಸುದ್ದಿಯ ಬೆನ್ನಿನಲ್ಲೇ ಬಾಲಿವುಡ್‌ಗೆ ಅಂಟಿರುವ ಕಳಂಕ ಸ್ಯಾಂಡಲ್‌ವುಡ್‌ನತ್ತ ಹರಿಯುತ್ತಿದೆ. ದಿನಕರ್‌ ಇದೇ ತಿಂಗಳ 28 ಕ್ಕೆ ನಿವೃತ್ತರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಏನೆಲ್ಲಾ ನಡೆಯುತ್ತಿದೆ.

English summary
Detectives probing underworld links, source of finance for 8 Kannada films
Please Wait while comments are loading...