ಅವರ ಮುಂದಿನ ಸಿನಿಮಾಗಳ ಶೂಟಿಂಗ್‌ ಉತ್ತರ ಕರ್ನಾಟಕದಲ್ಲೇ.

By ಅನಘ

'ಬಳ್ಳಾರಿ ಸೀಮೆಯಲ್ಲಿ ಹುಬ್ಬಳ್ಳಿ ಹುಡುಗನೊಬ್ಬ ದುಡಿಮೇನೆ ದ್ಯಾವರೆಂದ ಹಾಯ್‌ ರಬ್ಬ...." ಬಿ.ಸಿ.ಪಾಟೀಲರ 'ಶಿವಪ್ಪನಾಯ್ಕ" ಸೋತಿದ್ದರೂ ಈ ಹಾಡು ಗೆದ್ದಿದೆ. ಈ ಹಾಡಿನ ಮೂಲಕ ಅವರು ಕೈಹಾಕಿರುವುದು, ಕನ್ನಡ ಸಿನಿಮಾಗಳಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿ ಬಿಂಬಿಸುವುದು.

ತಮ್ಮ ಹೊಸ ವೆಂಚರ್‌ ಸೂರ್ಯ ಐಪಿಎಸ್‌ ಚಿತ್ರ ಪ್ರಚುರ ಪಡಿಸುವ ಅಭಿಯಾನದಲ್ಲಿ ಮುಳುಗಿರುವ ಪಾಟೀಲ್‌, ಅವಳಿ ನಗರಗಳಲ್ಲಿ ನಿಂತು ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಕಂಗಳಲ್ಲಿ ತೋರುತ್ತಿದ್ದರು. 'ಗಾಂಧಿನಗರದ ಮಂದಿಗೆ ಉತ್ತರ ಕರ್ನಾಟಕದ ಬಂಡವಾಳ ಬೇಕು. ಬಾಕ್ಸ್‌ ಆಫೀಸಿನ ಗಲ್ಲಾ ತುಂಬಿಸಲು ಉತ್ತರ ಕರ್ನಾಟಕದ ಜನ ಬೇಕು. ಆದರೆ ಅಲ್ಲಿನ ಸಂಸ್ಕೃತಿಯನ್ನು ತೆರೆಗೆ ತರುವುದು ಬೇಡ. ಅಲ್ಲಿನ ಕಲಾವಿದರು ಬೆಳೆಯೋದು ಒಂದು ಪವಾಡವೇ ಆಗಿ ಬಿಟ್ಟಿದೆ" ಕೊಂಚ ಗರಮ್ಮಾಗೇ ಹೇಳಿದರು ಪಾಟೀಲ್‌.

ಏನು ಕೇಳಿದರೂ, ಪಾಟೀಲರ ಮಾತಿನ ದಾರಿ ಕೊಂಕಣ ಸುತ್ತಿ ಬಂದರೂ ನಿಲ್ಲುತ್ತಿದ್ದುದು ಉತ್ತರ ಕರ್ನಾಟಕದಲ್ಲೇ. ಅವರ ತವರು ಮನೆಯೂ ಅದೇ ಅಲ್ಲವೇ? ಅಕ್ಕ ಪಕ್ಕ ನಿಂತ ಪ್ರೇಕ್ಷಕ ಉತ್ತರ ಕರ್ನಾಟಕದ ಬಗ್ಗೆ ಪಾಟೀಲರ ಉಕ್ಕು ಪ್ರೀತಿ ಕಂಡು ಮನದಲ್ಲೇ ನಗುತ್ತಿದ್ದ. 'ವರ್ಷಕ್ಕೆ ಕಡಿಮೆ ಅಂದರೂ ನಾಲ್ಕೈದು ಸಿನಿಮಾ ನಿರ್ಮಿಸಿ, ನಿರ್ದೇಶಿಸಬೇಕೆಂಬುದು ನನ್ನ ಆಸೆ. ಈ ಎಲ್ಲಾ ಸಿನಿಮಾಗಳನ್ನು ಉತ್ತರ ಕರ್ನಾಟಕದಲ್ಲೇ ಶೂಟ್‌ ಮಾಡುತ್ತೇನೆ. ಮುಂಬೈ ಕರ್ನಾಟಕದಲ್ಲಿ ಹಿಂದಿ ಸಿನಿಮಾದೇ ಭರಾಟೆ. ಹೈದರಾಬಾದ್‌ ಕರ್ನಾಟಕದಲ್ಲಿ ತೆಲುಗು ಬಿಡ್ಡರ ಉತ್ಸವ. ಈ ಜನರು ಕನ್ನಡ ಸಿನಿಮಾ ನೋಡುವಂತೆ ಮಾಡಬೇಕಾದ ಸಮಯ ಇದು. ಆ ಕೆಲಸವನ್ನು ನಾನು ಮಾಡುತ್ತೇನೆ" ಪಾಟೀಲರ ಮಾತಿನಲ್ಲಿ ದೊಡ್ಡದೊಂದು ಛಲವಿತ್ತು.

ಕೊನೆಗೆ ಉತ್ತರ ಕರ್ನಾಟಕದವರ ಅಳಲನ್ನು ತಮ್ಮದೇ ಅನುಭವದ ಮೂಲಕ ಪಾಟೀಲ್‌ ಹೇಳಿಕೊಂಡದ್ದು ಹೀಗೆ... 'ನಮ್ಮ ಗಾಂಧಿನಗರಕ್ಕೆ ಉತ್ತರ ಕರ್ನಾಟಕದ ನಿರ್ಮಾಪಕರ ಬಂಡವಾಳ ಬೇಕು. ಆದರೆ ಅಲ್ಲಿನ ಪ್ರತಿಭೆಗಳೆಂದರೆ ಅಷ್ಟಕ್ಕಷ್ಟೆ. ನಾಯಕ-ನಾಯಕಿಯರಿಂದ ಹಿಡಿದು ತಂತ್ರಜ್ಞರವರೆಗೆ ಯಾರನ್ನೂ ಬೆಳೆಯೋಕೆ ಬಿಡಲ್ಲ. ಇನ್ನು ನಿರ್ಮಾಪಕರ ಮತ್ತು ಫೈನಾನ್ಷಿಯರ್‌ಗಳ ಕತೆ ದೇವರಿಗೇ ಪ್ರೀತಿ. ಪೂರ್ಣಸತ್ಯ ಸಿನಿಮಾ ಮಾಡಿ ನಾನು ಸಾಕಷ್ಟು ಕಳಕೊಂಡೆ. ಅನುಭವಿಸಿದ ನಷ್ಟ ತುಂಬಿಕೊಳ್ಳಲು ಮನೆ ಮಾರಿದೆ. ದಾವಣಗೆರೆಯ ಆಸ್ತಿಯನ್ನೂ ಮಾರಬೇಕಾಯ್ತು.

ಸಿನಿಮಾದಲ್ಲಿ ಕೈಸುಟ್ಟುಕೊಂಡ ಕಾರಣಕ್ಕೇ ಪೊಲೀಸ್‌ ಕೆಲಸ ಬಿಡಲಿಲ್ಲ. ಆಮೇಲೆ ಆದದ್ದು ನಿಮಗೇ ಗೊತ್ತಿದೆ. ಈಗ ನಾನು ಸಿನಿಮಾದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಶಿವಪ್ಪನಾಯ್ಕ ಚಿತ್ರ ಪೂರ್ಣವಾಗಿ ಬಳ್ಳಾರಿಯಲ್ಲೇ ಶೂಟ್‌ ಮಾಡಿದ್ದು. ನನ್ನ ಮುಂದಿನ ಚಿತ್ರಗಳನ್ನೂ ಉತ್ತರ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಚಿತ್ರಿಸಬೇಕೆಂದಿದ್ದೇನೆ. ಕನ್ನಡ ಸಿನಿಮಾಗಳಿಗೆ ಸಾಕಷ್ಟು ಪ್ರೋತ್ಸಾಹ ಈಗಲೂ ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಟ್ಟಿರುವ ಸಬ್ಸಿಡಿ ಕುರಿತ ಆಶ್ವಾಸನೆಗಳು ಇನ್ನೂ ಈಡೇರಿಲ್ಲ ".

ಪಾಟೀಲರೇ... ನಿಮಗೆ ನಮ್ಮದೊಂದು ಮಾತು : ಸಿನಿಮಾ ಚರ್ವಿತ ಚರ್ವಣವಾಗದಿರಲಿ. ಅದೇ ರಾಗ ಅದೇ ಹಾಡನ್ನು ಬಿಡಿ. ಈಗ ಸೂರ್ಯ ಐಪಿಎಸ್‌ಗೆ ಕೈಹಾಕಿದ್ದೀರಿ. ನಮ್ಮಲ್ಲಿ ಸಾಂಗ್ಲಿಯಾನ ಎಂಬ ಪೊಲೀಸರ ಸಿನಿಮಾ ಗೆದ್ದಿದೆ ನಿಜ. ಆದರೆ, ಐಪಿಎಸ್‌ ಕೆಂಪಯ್ಯ ಮಕ್ಕಾಡೆ ಮಲಗಿದ್ದು ನಿಮಗೆ ಗೊತ್ತೇ ಇದೆಯಲ್ಲ. ಬಿ ಮತ್ತು ಸಿ ಥಿಯೇಟರ್‌ಗಳ ಪ್ರೇಕ್ಷಕ ವರ್ಗವನ್ನೇ ಯಾಕೆ ಗಮನದಲ್ಲಿಟ್ಟುಕೊಳ್ಳುತ್ತೀರಿ?

ಅಮೆರಿಕೆಯಲ್ಲಿ ಕಲಿತಿರುವ ನಿಮ್ಮ ತಮ್ಮ ಅಶೋಕ್‌ ಪಾಟೀಲ್‌ ಬಳಿ ಖಂಡಿತ ಸರಕಿದೆ. ಶಾಪ ಚಿತ್ರದಲ್ಲಿ ಅದನ್ನವರು ಸಾಬೀತು ಮಾಡಿದ್ದಾರೆ. ವುಡ್‌ ಲ್ಯಾಂಡ್ಸ್‌ ಷೂ ಹಾಕಿಕೊಂಡು ಸೈಕಲ್‌ ರಿಕ್ಷಾ ತುಳಿಯುವುದನ್ನು ಬಿಟ್ಟು ಅವರಿಂದಲೇ ಯಾಕೆ ಇನ್ನೊಂದು ಒಳ್ಳೆ ಸಿನಿಮಾ ಮಾಡಿಸಬಾರದು?!

English summary
B.C.Patils North Karnataka Preeti...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X