"ಸಾಯುವ ಮುನ್ನ ಆ ಹೀರೊ ಜೊತೆ ಸಿನ್ಮಾ ಮಾಡ್ಬೇಕು.. ನನ್ನ ಚಿತ್ರದಲ್ಲಿ ಅವ್ರು ವಿಲನ್ ಆಗ್ಬೇಕು": ಪ್ರಶಾಂತ್ ನೀಲ್
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 'ಉಗ್ರಂ' ರೀಮೇಕ್ ರೀತಿಯೇ ಕಾಣಿಸುತ್ತಿದ್ದರೂ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮೂಡಿ ಬಂದಿದೆ. ಪ್ರಭಾಸ್ ಅಭಿಮಾನಿಗಳು ಟ್ರೈಲರ್ ನೋಡಿ ಥ್ರಿಲ್ಲಾಗಿದ್ದಾರೆ. ಕೆಲ ವಿಚಾರಗಳು ಟ್ರೋಲ್ ಕೂಡ ಆಗುತ್ತಿದೆ. ಆದರೂ ಪ್ರೇಕ್ಷಕರು ಪ್ರಶಾಂತ್ ನೀಲ್ ಮೇಲೆ ನಂಬಿಕೆಯಿಂದ ಇದ್ದಾರೆ.
ಡಿಸೆಂಬರ್ 22ಕ್ಕೆ 'ಸಲಾರ್' ಮೊದಲ ಭಾಗ ತೆರೆಗಪ್ಪಳಿಸಲಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. 200 ಕೋಟಿ ರೂ. ಬಜೆಟ್‌ನಲ್ಲಿ ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಿಸಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಆರಂಭವಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಆಂಗ್ಲ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಟ ಹಾಗೂ ಆತನೊಟ್ಟಿಗೆ ಕೆಲಸ ಮಾಡುವ ಕನಸಿನ ಬಗ್ಗೆ ಮಾತನಾಡಿದ್ದಾರೆ.

ಪ್ರಶಾಂತ್ ನೀಲ್ ನಾನು, ಅಮಿತಾಭ್ ಬಚ್ಚನ್ ದೊಡ್ಡ ಅಭಿಮಾನಿ. ಅವರ ಸಿನಿಮಾ ನಿರ್ದೇಶನ ಮಾಡುವುದು ನನ್ನ ಕನಸು ಎಂದಿದ್ದಾರೆ. PTIಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ನೀಲ್ ಮಾತನಾಡಿದ್ದಾರೆ. "ನನ್ನ ಎಲ್ಲಾ ಸಿನಿಮಾಗಳಿಗೆ ಅಮಿತಾಭ್ ಬಚ್ಚನ್ ದೊಡ್ಡ ಸ್ಫೂರ್ತಿ. ಅವರು ನಾಯಕನಾಗಿ ನಟಿಸಿದ ಸಾಕಷ್ಟು ಚಲನಚಿತ್ರಗಳಿವೆ. ಆದರೆ ಆ ಸಿನಿಮಾಗಳಲ್ಲಿ ಅವ್ರು ಖಳನಾಯಕ ಸಹ ಆಗಿದ್ದರು. ಆ ಕಾಲದಲ್ಲಿ ಅದು ಒಂದು ಅಪರೂಪದ ಜಾನರ್ ಆಗಿತ್ತು. ಗ್ರೇ ಪಾತ್ರಗಳನ್ನು ಅವ್ರು ನಿರ್ವಹಿಸಿದ ರೀತಿ , ಬೇರೆ ಯಾರೂ ಮಾಡಿಲ್ಲ ಎಂದು ನನಗೆ ಅನ್ನಿಸುತ್ತದೆ" ಎಂದಿದ್ದಾರೆ.
"ಅಮಿತಾಭ್ ಬಚ್ಚನ್ ಖಳನನ್ನು ಹೀರೋ ಆಗಿ ಕಾಣುವಂತೆ ಮಾಡಿದ್ದರು. ಹಾಗಾಗಿ ನನ್ನ ಸಿನಿಮಾಗಳಲ್ಲಿ ನಾನು ಅದನ್ನು ಮಾಡಲು ಪ್ರಯತ್ನಿಸುತ್ತೇನೆ. ನನ್ನ ಪಾತ್ರಗಳನ್ನು ಸಾಧ್ಯವಾದಷ್ಟು ನೆಗೆಟಿವ್ ಆಗಿ ಕಾಣುವಂತೆ ಮಾಡಲು ಪ್ರಯತ್ನಿಸುತ್ತೇನೆ, ಧನಾತ್ಮಕ ಪಾತ್ರಗಳನ್ನು ಸಹ ಮಾಡಲು ಪ್ರಯತ್ನಿಸುತ್ತೇನೆ. ನಾಯಕ ನನ್ನ ಚಿತ್ರದ ದೊಡ್ಡ ವಿಲನ್ ಆಗಿರಬೇಕು. ಅಗ್ನಿಪಥ್ ನನ್ನ ನೆಚ್ಚಿನ ಸಿನಿಮಾ" ಎಂದಿದ್ದಾರೆ.

"ನಾನು ಸಾಯುವ ಮುನ್ನ, ಅಮಿತಾಭ್ ಬಚ್ಚನ್ ಅವರೊಂದಿಗೆ ಸಿನಿಮಾ ಮಾಡಲು ಬಯಸುತ್ತೇನೆ. 70, 80 ಮತ್ತು 90 ರ ದಶಕದಲ್ಲಿ ನಾನು ಚಿತ್ರರಂಗದ ವಿದ್ಯಾರ್ಥಿಯಾಗಿದ್ದಾಗ ನಾನು ಅವರನ್ನು ಹೊರತುಪಡಿಸಿ ಬೇರೆ ಯಾರ ಬಗ್ಗೆಯೂ ಯೋಚಿಸುತ್ತಿರಲಿಲ್ಲ. ಅಮಿತಾಭ್ ಬಚ್ಚನ್‌ಗೆ ಸಿನಿಮಾ ಮಾಡಬೇಕು ಎಂಬುದು ನನ್ನ ದೊಡ್ಡ ಕನಸು. ನಾನು ಅವರನ್ನು ನನ್ನ ಸಿನಿಮಾದ ದೊಡ್ಡ ಖಳನಾಯಕನನ್ನಾಗಿ ಮಾಡಬೇಕು. ನಾನು ಅದನ್ನು ಬೇರೆ ರೀತಿಯಲ್ಲಿ ಮಾಡುವುದಿಲ್ಲ. ಅವರು ನನ್ನೊಟ್ಟಿಗೆ ಸಿನಿಮಾ ಮಾಡಲು ಒಪ್ಪಿಕೊಂಡರೆ ಅದು ನನ್ನ ಜೀವನದ ದೊಡ್ಡ ಗೌರವವಾಗುತ್ತದೆ" ಎಂದು ಪ್ರಶಾಂತ್ ತಿಳಿಸಿದ್ದಾರೆ.
'ಉಗ್ರಂ' ಸಿನಿಮಾ ಮಾಡಿ ಚಿತ್ರರಂಗ ಪ್ರವೇಶಿಸಿದ ಪ್ರಶಾಂತ್ ನೀಲ್ ಬಳಿಕ 'KGF' ಸರಣಿ ಸಿನಿಮಾಗಳನ್ನು ನಿರ್ದೇಶಿಸಿದರು. 'KGF' ಸರಣಿಯಿಂದ ನೀಲ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಂಡಿದ್ದಾರೆ. ಬಾಲಿವುಡ್ ನಿರ್ಮಾಪಕರು ಕೂಡ ನೀಲ್ ಕಾಲ್‌ಶೀಟ್ ಕೇಳುವಂತಾಗಿದೆ. ಸದ್ಯ 'ಸಲಾರ್' ಶೂಟಿಂಗ್ ಮುಗಿಸಿರುವ ನಿರ್ದೇಶಕರು ಸಿನಿಮಾ ರಿಲೀಸ್ ಓಡಾಟದಲ್ಲಿದ್ದಾರೆ. ಬಳಿಕ ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
'ಸಲಾರ್' ಸೀಕ್ವೆಲ್ ಕೂಡ ಪ್ರಶಾಂತ್ ನೀಲ್ ಕಟ್ಟಿಕೊಡಬೇಕಿದೆ. ಪ್ರಭಾಸ್ ಜೊತೆ ಮತ್ತೊಂದು ಸಿನಿಮಾ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಇದೆ. 'KGF'-3 ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆ ದಟ್ಟವಾಗಿದೆ. ನನಗೂ ಒಂದೇ ತರಹದ ಸಿನಿಮಾ ಮಾಡಿ ಸಾಕಾಗಿದೆ. ಬೇರೆ ತರಹದ ಜಾನರ್ ಸಿನಿಮಾಗಳನ್ನು ಮಾಡಲು ಆಸೆ ಇದೆ ಪ್ರಶಾಂತ್ ನೀಲ್ ಹೇಳಿದ್ದಾರೆ.


Click it and Unblock the Notifications











