twitter
    For Quick Alerts
    ALLOW NOTIFICATIONS  
    For Daily Alerts

    ‘ಹೃತಿಕ್‌ ಅಪ್ರತಿಮ’-ಶ್ಯಾಮ್‌ ಬೆನೆಗಲ್‌

    By Super
    |

    ಭಾರತೀಯ ಪ್ಯಾರಲಲ್‌ ಸಿನಿಮಾ ಪಿತಾಮಹ ಶ್ಯಾಮ್‌ ಬೆನೆಗಲ್‌ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ದೇಶದ ಕಲಾ ಸಂಪತ್ತಿಗೆ ಕಳೆ ಕೊಡುವ ಸಲುವಾಗಿ ಹುಟ್ಟಿರುವ ಭಾರತದ ಮೊದಲ ಸ್ವತಂತ್ರ ನಿಧಿ ಸಂಗ್ರಹಣಾ ಸಂಸ್ಥೆ 'ಇಂಡಿಯಾ ಫೌಂಡೇಷನ್‌ ಫಾರ್‌ ಆರ್ಟ್ಸ್‌"ನ ನಿಧಿ ಸಂಗ್ರಾಹಕರೊಟ್ಟಿಗೆ ಮಾತಾಡುವುದು ಅವರ ಉದ್ದಿಶ್ಯವಾಗಿತ್ತು. ಸತ್ಯಜಿತ್‌ ರೇ ಸೊಸೈಟಿಯ ಟ್ರಸ್ಟಿಯೂ ಆಗಿರುವ ಬೆನೆಗಲ್‌ ಈ ಸಂದರ್ಭದಲ್ಲಿ ಆಡಿದ ಕೆಲ ಮಾತುಗಳು.....

    ಗೋವಿಂದ ನಗೆಯ ಬುಗ್ಗೆ. ಹಾಸ್ಯ ಪ್ರಜ್ಞೆ ಆತನಲ್ಲಿ ಹಾಸುಹೊಕ್ಕು. ಪ್ರತಿಭೆಯ ಖನಿ ಆತ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆತನೇ ನನ್ನ ಮುಂದಿನ ಚಿತ್ರದ ಹೀರೋ. ಕಥೆ ತಲೆಯಲ್ಲಿದೆ. ಸ್ಕಿೃಪ್ಟ್‌ ರೆಡಿ ಮಾಡುತ್ತಿದ್ದೇನೆ. ನವೆಂಬರ್‌ ಹೊತ್ತಿಗೆ ಸಿನಿಮಾ ಸೆಟ್ಟೇರಲಿದೆ. ಜನ ಹೊಟ್ಟೆ ಹುಣ್ಣಾಗುವಷ್ಟು ನಗಬೇಕು, ಅಂಥಾ ವಸ್ತು ಈ ಚಿತ್ರದ್ದು.

    ನನ್ನ ಕಾಲೇಜಿನ ದಿನಗಳಲ್ಲೇ ಫಿಲ್ಮ್‌ ಸೊಸೈಟಿ ಕಟ್ಟಿದೆ. ಸತ್ಯಜಿತ್‌ ರೇ ಅವರ ಚಿತ್ರವನ್ನು ಹೈದರಾಬಾದಿನ ತೆರೆಗೆ ತಂದು, ಮಗುವಿನಂತೆ ಕುಣಿದಿದ್ದೆ. ಸತ್ಯಜಿತ್‌ ರೇ ಅವರ ಎಲ್ಲಾ ಕೆಲಸಗಳನ್ನೂ ಬೆರಳ ತುದಿಗೆ ತಂದು ಕೊಡುವುದು ನನ್ನ ಗುರಿ. ಇದಕ್ಕೆ ಇಂಡಿಯಾ ಫೌಂಡೇಷನ್‌ ಫಾರ್‌ ಆರ್ಟ್ಸ್‌ ಧನ ಸಹಾಯ ಮಾಡಲಿದೆ. ಸತ್ಯಜಿತ್‌ ರೇ ಅವರ ಬಿಡಿ ಬರವಣಿಗೆಗಳನ್ನೆಲ್ಲಾ ಡಿಜಿಟಲೈಸ್‌ ಮಾಡುವ ಕೆಲಸಕ್ಕೆ ಕೈ ಹಾಕಿದ್ದೇನೆ. ಅದು ಆದಷ್ಟು ಬೇಗ ಪೂರ್ಣವಾದರೆ, ನಾನೇ ಭಾಗ್ಯವಂತ. ಈ ಕೆಲಸಕ್ಕೆ ಕೋಲ್ಕತಾದ ಸತ್ಯಜಿತ್‌ ರೇ ಸೊಸೈಟಿಯ ಎಲ್ಲರ ಸಹಕಾರವೂ ಇದೆ.

    ಸತ್ಯಜಿತ್‌ ರೇ ಬಹುಮುಖ ಪ್ರತಿಭೆಗಳ ಮೊತ್ತ. ಆತ ಒಳ್ಳೆ ಕತೆಗಾರ, ಲಿಪಿಕಾರ. ಅವರದು ಮುದ್ದಾದ ಬರವಣಿಗೆ. ಅವರಿಗೆ ಚೆನ್ನಾಗಿ ನಟಿಸಲೂ ಬರುತ್ತಿತ್ತು. ನಿರ್ದೇಶನವಂತೂ ಅದ್ಭುತ. ಅವರ ಎಲ್ಲಾ ಕೆಲಸಗಳನ್ನು ಪುಟ್ಟ ಕಂಪ್ಯೂಟರ್‌ನ ತೆರೆ ಮೇಲೆ ಒಂದೆರಡು ಕೀಲಿ ಟೈಪಿಸಿಯೇ ಓದಬಹುದಾದರೆ ? ಇನ್ನು ಕೆಲವೇ ದಿನಗಳಲ್ಲಿ ಇದು ಸಾಧ್ಯವಾಗಲಿದೆ. ಸಂಶೋಧಕರಿಗೆ ಹಾಗೂ ರೇ ಅವರ ಅಭಿಮಾನಿಗಳಿಗೆ ಇದೊಂದು ಮರೆಯಲಾಗದ ಕೊಡುಗೆ.

    ಬೆನೆಗಲ್‌ ಏನಂತ ನಿಮಗೆ ಗೊತ್ತೆ?

    ಅರವತ್ತರ ದಶಕದ ಅಂತ್ಯದಲ್ಲಿ ಗಂಭೀರವಾದ ಡಾಕ್ಯುಮೆಂಟರಿ ಚಿತ್ರಗಳನ್ನು ನಿರ್ಮಿಸಿದ ಬೆನೆಗಲ್‌, ಬ್ರೇಕ್‌ ದಕ್ಕಿಸಿಕೊಳ್ಳಲು ತೀರಾ ಹೆಣಗಾಡಲಿಲ್ಲ. ಯಾಕೆಂದರೆ ಪ್ರತಿಭೆ ಇವರಲ್ಲಿ ಘನೀರ್ಭವಿಸಿತ್ತು. 1974ರಲ್ಲಿ ಇವರು ಚಿತ್ರಿಸಿದ ಅಂಕುರ್‌ ಹಿಂದಿ ಚಿತ್ರ ಬಾಲಿವುಡ್‌ನ ಹೊಸ ಇತಿಹಾಸದ ಪುಟಗಳಲ್ಲೊಂದು. ಈಚೆಗೆ ಬಿಡುಗಡೆಯಾದ ಜುಬೇದಾ ರೂವಾರಿಯೂ ಇವರೇ. ಸಾಕಷ್ಟು ಹೋಂವರ್ಕ್‌ ಮಾಡಿದ ನಂತರ ವರ್ಷಕ್ಕೋ ಎರಡು ವರ್ಷಕ್ಕೋ ಒಂದು ಚಿತ್ರ ಮಾಡೋದು ಇವರ ಪಾಲಿಸಿ. ಹರೀಬರೀ, ಸಮರ್‌ ಬೆಂಗಳೂರಿನಲ್ಲಿ ತೆರೆ ಕಾಣದ ಇವರ ಚಿತ್ರಗಳು!

    ಹೃತಿಕ್‌ ರೀತಿ ಯಾರೂ ಎಂಟ್ರಿ ಕೊಟ್ಟಿಲ್ಲ : ಶಬಾನಾ ಆಜ್ಮಿ, ನಾಸರುದ್ದೀನ್‌ ಶಾ, ಓಂ ಪುರಿ, ಕುಲ್‌ಭೂಷಣ್‌ ಕರ್‌ಬಂದಾ, ಸ್ಮಿತಾ ಪಾಟೀಲ್‌ ಮೊದಲಾದ ಕಲಾ ನಟರಿಗೆ ದಿಗ್ದರ್ಶನ ಮಾಡಿದ ಬೆನೆಗಲ್‌ಗೆ ಈಗಿನ ತಾರಾಬಳಗವೇ ನೆಚ್ಚು. ಹೃತಿಕ್‌ ರೋಷನ್‌ ರೀತಿ ಬೇರೆ ಯಾವುದೇ ನಟ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿಲ್ಲ. ತನ್ನೆಲ್ಲಾ ಸಾಮರ್ಥ್ಯವನ್ನು ಮೊದಲ ಚಿತ್ರದಲ್ಲೇ ಧಾರೆ ಎರೆದ ಅತ್ಯುತ್ತಮ ನಟ ಹೃತಿಕ್‌. ನನ್ನ ಅನುಭವದಲ್ಲೇ ಇಂಥಾ ಎಂಟ್ರಿಯನ್ನು ನೋಡಿರಲಿಲ್ಲ ಎನ್ನುತ್ತಾರೆ ಬೆನೆಗಲ್‌.

    ಮುದ ಕೊಟ್ಟ ಲಗಾನ್‌ : ಶಾರುಖ್‌ ಖಾನ್‌, ಅಮೀರ್‌ ಖಾನ್‌, ಹೃತಿಕ್‌ ರೋಷನ್‌, ಕರಿಶ್ಮಾ ಕಪೂರ್‌, ಕರೀನಾ ಕಪೂರ್‌, ಮಾಧುರಿ ದೀಕ್ಷಿತ್‌- ಇವರೆಲ್ಲರಲ್ಲಿನ ನಟನಾ ಕೌಶಲ್ಯ ಶ್ಯಾಮ್‌ಗೆ ಮೆಚ್ಚಾಗಿದೆ. ಲಗಾನ್‌ ಚಿತ್ರವನ್ನು ತಮ್ಮ ಈ ಮಾತಿಗೆ ಶ್ಯಾಮ್‌ ಉದಾಹರಿಸುತ್ತಾರೆ. ಒಂದು ಚಿತ್ರ ನೇರ ನಿಮ್ಮ ಹೃದಯಕ್ಕೆ ತಟ್ಟಿದರೆ ಅದೇ ಅದರ ಯಶಸ್ಸು. ಲಗಾನ್‌ನಲ್ಲಿ ಈ ಅಂಶವಿದೆ. ಚಿತ್ರದ ಒಂದೊಂದೂ ಕ್ಷಣವೂ ಮುದ ಕೊಡುತ್ತದೆ. ಅದು ಅತ್ಯದ್ಭುತ.

    ಹೆಂಗಸರು ಹಾಗೂ ಕಲಾತ್ಮಕ ಚಿತ್ರಗಳು : ನಾನು ಚಿತ್ರದಲ್ಲಿ ತೋರಿಸುವ ಹೆಂಗಸರ ಪಾತ್ರಗಳು ನನ್ನ ಅನುಭವ ಮೂರ್ತಿಗಳೇ ಆಗಿರುತ್ತಾರೆ. ಲಿಂಗಭೇದದ ಈ ಜಗತ್ತಿನಲ್ಲಿ ಹೆಣ್ಣು ತನ್ನ ಕಾಲ ಮೇಲೆ ನಿಂತುಕೊಳ್ಳಲು ಹೆಣಗಾಡಬೇಕು. ತನ್ನದೇ ಆದ ಅಸ್ತಿತ್ವ ಕಂಡುಕೊಳ್ಳುವುದು ಅಸಾಧ್ಯ ಎಂದೇ ಹೇಳಬಹುದು. ಕಲಾತ್ಮಕ ಚಿತ್ರಗಳು ಕಡಿಮೆ ಬಜೆಟ್‌ನವು. ನಟ-ನಟಿಯರಿಗೆ ಕೊಡಲೂ ನಮ್ಮ ಬಳಿ ಸಾಕಷ್ಟು ಹಣ ಇರುವುದಿಲ್ಲ. 20 ವರ್ಷಗಳ ಹಿಂದೆ ಕಲಾತ್ಮಕ ಚಿತ್ರಗಳಿಗೆ ಗೌರವ ಇರುತ್ತಿತ್ತು. ಈಚೀಚೆಗೆ ಅದೂ ಮಾಯವಾಗುತ್ತಿದೆ...

    ಬೆನೆಗಲ್‌ ಮನಸ್ಸು ಇನ್ನಷ್ಟು ವಿಷಯಗಳನ್ನು ಬಿಚ್ಚಿಡಲು ಅಣಿಯಾಗಿದ್ದರೂ, ಸಮಯ ಅವಕಾಶ ಕೊಡಲಿಲ್ಲ. ಸತ್ಯಜಿತ್‌ ರೇ ಹೆಸರನ್ನೇ ಮತ್ತೆ ಮತ್ತೆ ಹೇಳಿ ಹೊರಟುಹೋದರು.

    English summary
    Shyam Benegal to degitalise Satyajit Rays works
    Thursday, July 4, 2013, 13:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X