'ದಾದಾ ಸಾಹೇಬ್ ಪಾಲ್ಕೆ' ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮೃಣಾಲ್ ಸೇನ್ ವಿಧಿವಶ
ಕೊಲ್ಕತ್ತ, ಡಿಸೆಂಬರ್ 30: ಸಾಮಾಜಿಕ-ರಾಜಕೀಯ ಸೂಕ್ಷ್ಮ ಕತೆಗಳ ಚಿತ್ರ ನಿರ್ದೇಶಕರೆಂದು ಖ್ಯಾತರಾಗಿದ್ದ ಪಶ್ಚಿಮ ಬಂಗಾಳದ ಮೃಣಾಲ್ ಸೇನ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಬಂಗಾಲಿ, ಹಿಂದಿ, ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ದೇಶಿದ್ದ ಮೃಣಾಲ್ ಸೇನ್ ಅವರಿಗೆ ಪದ್ಮ ವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗಳು ಬಂದಿದ್ದುವು. 1955 ರಲ್ಲಿ ತಮ್ಮ ಮೊದಲ ಚಿತ್ರ ನಿರ್ದೇಶಿಸಿದ್ದ ಮೃಣಾಲ್ ಸೇನ್ ಸೂಕ್ಷ್ಮ ಸಂವೇದನೆಗಳ ನಿರ್ದೇಶಕ ಎಂದೇ ಖ್ಯಾತರಾಗಿದ್ದರು.
ಮೃಣಾಲ್ ಸೇನ್ ಅವರ ನಿಧನಕ್ಕೆ ಬಾಲಿವುಡ್ ಸೇರಿ, ಬಂಗಾಳಿ ಚಿತ್ರರಂಗ ಕಂಬನಿ ಮಿಡಿದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

1950-1970 ರ ವರೆಗೆ ಬಂದ ಹೊಸ ಧ್ವನಿಯ ಚಿತ್ರಗಳಲ್ಲಿ ಮೃಣಾಲ್ ಸೇನ್ ಅವರ ಚಿತ್ರಗಳು ಸಹ ನಿಲ್ಲುತ್ತವೆ. ಅವರ ನಿರ್ದೇಶನದ ಬೈಶೀ ಸೃಬನ್ (1960), ಬುಬನ್ ಶೋಬೆ (1969), ಮೃಗಯಾ (1976), ಒಕ ಊರಿ ಕಥಾ (1977), ಕಾರಿಜ್ (1982) ಬಹು ಖ್ಯಾತವಾಗಿದ್ದವು.
ಮೃಣಾಲ್ ಸೇನ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುವುದಿಲ್ಲ. ತಮ್ಮ ಪಾರ್ಥಿವ ಶರೀರಕ್ಕೆ ಹೂವು ಹಾಕಬಾರದು, ಅಂತಿಮ ದರ್ಶನಕ್ಕೆ ಇಡಬಾರದು ಎಂದು ಅವರು ಬದುಕಿದ್ದಾಗ ಕುಟುಂಬದ ಬಳಿ ಹೇಳಿದ್ದರು. ಅವರ ಮಗ ಚಿಕಾಗೋದಲ್ಲಿದ್ದು, ಅವರು ಆಗಮಿಸಿದ ನಂತರ ಅಂತಿಮ ಸಂಸ್ಕಾರ ಮಾಡಲಾಗುತ್ತದೆ.


Click it and Unblock the Notifications











