ಕನ್ನಡಿಗರದ್ದು ಅತೀ ಆಯ್ತು ಎಂದ ಬೆಂಗಳೂರಿನ ಈ ನಟ; ಇವನೂ ರಶ್ಮಿಕಾ ತರಾನೇ ಅಂತ ಕಿಡಿಕಾರಿದ ನೆಟ್ಟಿಗರು
ಕನ್ನಡಿಗರು ಹಾಗೂ ಉತ್ತರ ಭಾರತದ ಜನರ ಮಧ್ಯೆ ದೊಡ್ಡ ಮಟ್ಟದಲ್ಲಿ ಕಿತ್ತಾಟ ನಡೆಯುತ್ತಲೇ ಇದೆ. ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ ಸೇರಿದಂತೆ ಹಲವು ಭಾಗದಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಲೇ ಇರುತ್ತಲೇ ಇರುತ್ತಾರೆ. ಕೆಲಸ ಹುಡುಕಿಕೊಂಡು, ಇಲ್ಲೇ ಸಂಸಾರನೂ ಶುರು ಮಾಡುತ್ತಾರೆ. ಆದರೆ, ಇಲ್ಲಿನ ಸಂಸ್ಕೃತಿ ಮತ್ತು ಭಾಷೆ ಮಾತ್ರ ಬೇಡ.
ಯುಪಿ, ಬಿಹಾರದಂತಹ ರಾಜ್ಯಗಳಿಂದ ಬಂದು ದಶಕಗಳ ಕಾಲ ಕರ್ನಾಟಕದಲ್ಲೇ ಇದ್ದು ಕನ್ನಡಿಗರ ಬಳಿ ಕನ್ನಡದಲ್ಲಿ ವ್ಯವಹರಿಸಲು ಅಸಡ್ಡೆ ತೋರುತ್ತಾರೆ. ಕನ್ನಡದಲ್ಲಿ ಮಾತಾಡುವುದಕ್ಕೆ ಹೇಳಿದರೆ ಹಂಗಾಮ ಮಾಡುತ್ತಾರೆ ಅನ್ನೋದು ಕನ್ನಡಿಗರ ಆರೋಪ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಕನ್ನಡ ಮಾತಾಡಲ್ಲ ಎಂಬ ಕಾರಣಕ್ಕೆ ಉತ್ತರ ಭಾರತದ ಮಂದಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ.

ಈಗ ಬೆಂಗಳೂರು ಮೂಲದ ಬಾಲಿವುಡ್ ನಟನೊಬ್ಬ ಕನ್ನಡಿಗರ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿರುವ ಹಿಂದಿ ಭಾಷಿಗರ ಜೊತೆ ಕನ್ನಡಿಗರು ನಡೆದುಕೊಳ್ಳುತ್ತಿರುವುದು ಅತಿಯಾಯ್ತು ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ಮತ್ಯಾರೂ ಅಲ್ಲ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿರುವ ಅಪ್ಪಟ ಕನ್ನಡಿಗ ಗುಲ್ಶನ್ ದೇವಯ್ಯ. ಹಿಂದಿ ಭಾಷೆಯ ಹಲವು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿರುವ ನಟ. ಕೆಲವು ದಿನಗಳ ಹಿಂದಷ್ಟೇ ಡಿಜಿಟಲ್ ಕಾಮೆಂಟರಿ ಕ್ಲಿಪ್ಸ್ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಅದರಲ್ಲಿ ಕನ್ನಡಿಗರ ನಡೆಯನ್ನು ಟೀಕಿಸಿದ್ದು, ನೆಟ್ಟಿಗರ ಕಣ್ಣುಗಳು ಕೆಂಪಾಗುವಂತೆ ಮಾಡಿದೆ. ಅಷ್ಟಕ್ಕೂ ಕನ್ನಡಿಗರ ಬಗ್ಗೆ ಈ ನಟ ಏನು ಹೇಳಿದ್ದಾರೆ. ತಿಳಿಯಲು ಮುಂದೆ ಓದಿ.
ಬಾಲಿವುಡ್ ನಟ ಗುಲ್ಶನ್ ದೇವಯ್ಯ ಡಿಜಿಟಲ್ ಕಾಮೆಂಟರಿ ಕ್ಲಿಪ್ಸ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ತಾನು ಕನ್ನಡದಲ್ಲಿ ಮಾತಾಡುತ್ತೇನೆ. ಓದುವುದಕ್ಕೂ ನನಗೆ ಬರುತ್ತೆ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಕನ್ನಡಿಗರಿಗೆ ಖುಷಿಯಿದೆ. ಆದರೆ, ಕರ್ನಾಟಕದಲ್ಲಿ ಕನ್ನಡಿಗರು ಅನ್ಯಭಾಷಿಗರೊಂದಿಗಿನ ವರ್ತನೆ ಅತಿ ಆಯ್ತು ಎಂದು ಹೇಳಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ. ಅದೇ ಅಲ್ಲ, ಕನ್ನಡಿಗರಂತೆ ಹಿಂದಿ ಭಾಷೆಯ ಹೇರಿಕೆಯನ್ನು ಅನುಭವಿಸುತ್ತಿರುವ ಬೇರೆ ಭಾಷೆಯ ಜನರು ಕೂಡ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ಆರಂಭದಲ್ಲಿ ಗುಲ್ಶನ್ ದೇವಯ್ಯ ಬೆಂಗಳೂರಿನಲ್ಲಿ ಕನ್ನಡಿಗರು ವರ್ಸಸ್ ಹಿಂದಿ ಜನರ ನಡುವಿನ ಕಿತ್ತಾಟದ ಬಗ್ಗೆ ಹೀಗೆ ಹೇಳುತ್ತಾರೆ.

"ಐಟಿ ಬಂದ್ಮೇಲೆ ಹೊರಗಿನಿಂದ ಜನರು ಬರುವುದಕ್ಕೆ ಶುರು ಮಾಡಿದರು. ಅಂದರೆ, ಓದಲು ಬರೆಯಲು ಬರುವ ಜನರು ಬಂದರು. ಕೆಲಸ ಮಾಡಲು ಕೆಲವು ಅರ್ಹತೆಗಳು ಬೇಕು. ನಿಮಗೆ ಬೇಕಿರೋ ಇಂಜಿನಿಯರ್‌ಗಳು ಲೋಕಲ್‌ನಲ್ಲಿ ಕಡಿಮೆ ಸಿಗುತ್ತಾರೆ. ಉಳಿದವರನ್ನು ಎಲ್ಲಿಂದ ತರುತ್ತೀರ? ಭಾರತದಲ್ಲಿ ನೀವು ಎಲ್ಲಿ ಬೇಕಾದರೂ ಹೋಗಿ ಕೆಲಸ ಮಾಡಬಹುದು. ಹಾಗಾಗಿ ಇಲ್ಲಿಗೆ ಬಂದರು. ನಾವು ಸ್ವಲ್ಪ ಹಿಂದಿ ಮಾತಾಡುತ್ತೇವೆ. ಆದರೆ, ಉತ್ತರ ಭಾರತದಲ್ಲಿ ಕನ್ನಡ ಬರುವುದೇ ಇಲ್ವಲ್ಲ. ಅದು ಕಷ್ಟ ಅನಿಸುತ್ತಿದೆ." ಎಂದು ಹೇಳುತ್ತಾರೆ. ಇಲ್ಲಿವರೆಗೂ ಯಾವುದೇ ಸಮಸ್ಯೆಯಿಲ್ಲ.
ಆದರೆ, 90ರ ದಶಕದ ಒಂದು ಕಥೆ ಹೇಳುವುದಕ್ಕೆ ಶುರು ಮಾಡುತ್ತಾರೆ. ಅಲ್ಲಿಂದ ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ಆ ಕಥೆ ಹೀಗಿದೆ. "ಬೆಂಗಳೂರಿನಲ್ಲಿ ಏರ್‌ಫೋರ್ಸ್ ಇದೆ. ಇದು 90ರ ದಶಕದ ಕಥೆ. ಒಮ್ಮೆ ಬಸ್‌ನಲ್ಲಿ ಹೋಗುವಾಗ ಜಗಳ ಆಯ್ತು. ಉತ್ತರ ಭಾರತದವರು (ಏರ್ ಪೋರ್ಸ್) ಮಗುವಿನೊಂದು ಕೂತಿದ್ದರು. ಅವರು ಮಗುವಿಗೆ ಅವರು ಟಿಕೆಟ್ ತೆಗೆದುಕೊಂಡಿದ್ದರು. ಆಗ ಕನ್ನಡಿಗನೊಂದಿಗೆ ಜಗಳ ಆಯ್ತು. ಅವನು ಮಗುವನ್ನು ತೊಡೆಯ ಮೇಲೆ ಕೂರಿಸಿಕೊಳ್ಳಿ. ನಾನು ಸೀಟ್‌ನಲ್ಲಿ ಕೂರುತ್ತೇನೆ ಎಂದು ಹೇಳುತ್ತಾನೆ. ಅದಕ್ಕವನು ನಾನು ಮಗುವಿಗೆ ಟಿಕೆಟ್ ತೆಗೆದುಕೊಂಡಿದ್ದೇನೆ. ಅವನ ಸೀಟ್‌ನಲ್ಲಿ ಅವನು ಕೂರುತ್ತಾನೆ ಎನ್ನುತ್ತಾರೆ. ಇವನು ನೀನು ಬೆಂಗಳೂರಿನಲ್ಲಿ ಇದ್ದೀಯ ಕನ್ನಡದಲ್ಲಿ ಮಾತಾಡು ಅಂತ ಶುರು ಮಾಡುತ್ತಾನೆ. ಅವರು ಏರ್‌ಫೋರ್ಸ್‌ನಲ್ಲಿ ಇದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಆಗ ಜಗಳ ಶುರುವಾಯ್ತು. ನನಗೆ ತುಂಬಾ ಬೇಸರ ಅನಿಸಿತು. ನಾನು ಅದಕ್ಕೆಲ್ಲ ಬೆಂಬಲ ಕೊಡುವುದಿಲ್ಲ." ಎಂದು ಗುಲ್ಶನ್ ದೇವಯ್ಯ ಹೇಳುತ್ತಾರೆ.
ಇಲ್ಲಿಗೆ ನಿಂತಿಲ್ಲ. ಭಾಷೆ ಬಾರದವರಿಗೆ ಕನ್ನಡದಲ್ಲಿ ಕೆಟ್ಟದಾಗಿ ಬೈಯ್ಯುತ್ತಾರೆ ಎಂದು ಮತ್ತೊಂದು ಉದಾಹರಣೆ ಕೊಡುತ್ತಾರೆ. "ಓದುವುದಕ್ಕೆ ಅಂತ ಬಂದ ಆಫ್ರಿಕಾದವರಿಗೆ ಕೆಟ್ಟ ಕೆಟ್ಟದಾಗಿ ಬೈಯ್ಯುತ್ತಿದ್ದರು. ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್ ಇತ್ತಲ್ವಾ? ಅದಕ್ಕೆ ಕೀನ್ಯಾ, ನೈಜೀರಿಯಾದಿಂದ ಬರುತ್ತಿದ್ದರು. ಇಂಜಿನಿಯರಿಂಗ್ ಕಾಲೇಜ್ ಇದ್ದ ಕಡೆ ನಾನು ಇದ್ದೆ. ಆಗ ಪೆಟ್ರೋಲ್ ಹಾಕಿಸುವುದಕ್ಕೆ ಹೋದಾಗ, ಪೆಟ್ರೋಲ್ ಹಾಕುವವರು ಕೆಟ್ಟ ಕೆಟ್ಟದಾಗಿ ಬೈಯ್ಯುತ್ತಿದ್ದರು. ಅದು ತುಂಬಾನೇ ಕೆಟ್ಟದು. ಆತರ ಆಗಬಾರದು. ನಾನು ಕರ್ನಾಟಕ, ಕನ್ನಡವನ್ನು ಟೀಕೆ ಮಾಡುತ್ತಿಲ್ಲ. ಯಾಕಂದ್ರೆ ನಾನು ಅಲ್ಲಿಯವನು. ಪ್ರತಿಯೊಂದು ವಿಷಯವನ್ನು ಇಟ್ಕೊಂಡು ಅಷ್ಟೊಂದು ಹೆಮ್ಮೆ ಪಡುವುದು ಒಳ್ಳೆಯದಲ್ಲ. ಎಲ್ಲದಕ್ಕೂ ಒಂದು ಲಿಮಿಟ್ ಅಂತ ಇರುತ್ತೆ. ಕಂಟ್ರೋಲ್‌ನಲ್ಲಿ ಇರಬೇಕು." ಎಂದು ಡಿಜಿಟಲ್ ಕಾಮೆಂಟರಿ ಕ್ಲಿಪ್ಸ್ ಜೊತೆ ಮಾತಾಡಿದ್ದಾರೆ.
ಇದಕ್ಕೆ ಕಾಮೆಂಟ್‌ಗಳು ಕಮ್ಮಿಯೇನಿಲ್ಲ. ಕನ್ನಡಿಗರು ಸೇರಿದಂತೆ ಬೇರೆ ಭಾಷೆಯ ಜನರು ಕೂಡ ಆಕ್ರೋಶ ಹೊರ ಹಾಕಿದ್ದಾರೆ. "ಇವನು ಕೂಡ ರಶ್ಮಿಕಾ ತರಾನೇ. ಕನ್ನಡ ಬರುತ್ತೆ ಅಂತ ಹೇಳಿಕೊಳ್ಳುತ್ತಾನೆ. ಕನ್ನಡದ ಒಂದು ಚಿಕ್ಕ ಸೀರಿಯಲ್‌ನಲ್ಲೂ ನಟಿಸಿಲ್ಲ." ಎಂದು ಒಬ್ಬರು ಟೀಕಿಸಿದ್ದಾರೆ. ಇನ್ನೊಬ್ಬರು " ಏನೋ ಕೆಲಸಕ್ಕೆ ಬಾರದನ್ನು ಮಾತಾಡಬೇಡ. ನಿಮಗೆ ಲೋಕಲ್ ಜನರಿಗೆ ಗೌರವ ಕೊಡುವುದು ಗೊತ್ತಿಲ್ಲ. ಆದರೆ, ಬೆಂಗಳೂರಿನ ಇಮೇಜ್ ಮಾತ್ರ ಬೇಕು" ಎಂದು ಕಿಡಿಕಾಡಿದ್ದಾರೆ. ಇನ್ನೊಬ್ಬರು "ಮಿಸ್ಟರ್ ದೇವಯ್ಯ ನೀವು ಕೊಟ್ಟಿರುವ ಹೇಳಿಕೆಯಿಂದ ನಾನು ನಿಮ್ಮ ವೆಸ್ ಸೀರಿಸ್ ಹಾಗೂ ಸಿನಿಮಾಗಳನ್ನು ನೋಡದೇ ಇರಲು ನಿರ್ಧರಿಸಿದ್ದೇನೆ" ಎಂದಿದ್ದಾರೆ. ಇನ್ನೊಬ್ಬರು "ನಾನು ಪಶ್ಚಿಮ ಬಂಗಾಳದವಳು. ಇಲ್ಲೂ ಕೂಡ ಬೆಂಗಳೂರಿನಂತೆ ಹಿಂದಿ ಭಾಷೆಯನ್ನು ಹೇರುವುದಕ್ಕೆ ಹೊರಟಿದ್ದಾರೆ." ಎಂದು ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











