3 ತಿಂಗಳಲ್ಲಿ ಮನೆ ಖಾಲಿ ಮಾಡ್ಬೇಕು: ಯಶ್ ಗೆ ಸಿವಿಲ್ ಕೋರ್ಟ್ ಆದೇಶ
Recommended Video

ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಖ್ಯಾತ ನಟ ಯಶ್ ಅವರ ತಾಯಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಬೆಂಗಳೂರಿನ 42ನೇ ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಆದೇಶಿಸಿದೆ.
2010ರ ಅಕ್ಟೋಬರ್ 16 ರಿಂದ ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸ ವಾಸವಿರುವ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ, ತೀರ್ಪು ನೀಡಿರುವ ನ್ಯಾಯಾಲಯ ಬಾಕಿ ನೀಡಬೇಕಿರುವ ಹಣ ಪಾವತಿಸಿ ಮನೆ ಖಾಲಿ ಮಾಡಿ ಕೊಡಬೇಕೆಂದು ಸೂಚಿಸಿದೆ. ನ್ಯಾಯಾಲಯ ಆದೇಶದ ಪ್ರಕಾರ ಬಾಕಿಯಿರುವ ಬಾಡಿಗೆ ಹಣ 9 ಲಕ್ಷದ 60 ಸಾವಿರ ಪಾವತಿಸಬೇಕು. ಮತ್ತು ಮನೆ ಮಾಲೀಕರಿಗೆ ನೀಡಿದ್ದ 4 ಲಕ್ಷ ಅಡ್ವಾನ್ಸ್ ಹಣವನ್ನ ಯಶ್ ಅವರ ತಾಯಿಗೆ ಮಾಲೀಕರು ಹಿಂತಿರುಗಿಸಬೇಕು ಎಂದು ಕೋರ್ಟ್ ಹೇಳಿದೆ.

ನಂ.755, 5 ನೇ ಕ್ರಾಸ್, 3 ನೇ ಬ್ಲಾಕ್, 3 ನೇ ಹಂತ, ಬನಶಂಕರಿಯಲ್ಲಿರುವ ನಿವಾಸದಲ್ಲಿ 2010 ರಿಂದ ನಟ ಯಶ್ ಮತ್ತು ಕುಟುಂಬ ಬಾಡಿಗೆಗೆ ವಾಸವಾಗಿದ್ದಾರೆ.
ಏನಿದು ಬಾಡಿಗೆ ವಿವಾದ.?
ಐದು ಬೆಡ್ ರೂಂ, ಒಂದು ಡೈನಿಂಗ್ ಹಾಲ್, ಒಂದು ಹಾಲ್, ಒಂದು ಅಡುಗೆ ಮನೆ, ದೇವರ ಕೋಣೆ ಒಳಗೊಂಡಿರುವ ಈ ಮನೆ ತಮಗೆ ಲಕ್ಕಿ ಎಂಬ ಕಾರಣಕ್ಕೆ ಖಾಲಿ ಮಾಡಲು ಯಶ್ ನಿರಾಕರಿಸಿದ್ದರು. ಮನೆಯನ್ನು ತಾವೇ ಕೊಂಡುಕೊಳ್ಳುತ್ತೇವೆ ಎಂದು ಮಾಲೀಕರನ್ನು ಒತ್ತಾಯಿಸುತ್ತಿದ್ದರು ಎನ್ನಲಾಗಿತ್ತು. ಆದ್ರೆ ಮನೆ ಮಾರಲು ಮನೆ ಮಾಲೀಕ ಸಿದ್ಧರಿರಲಿಲ್ಲ. ಆದ್ರೆ ಈ ಬಗ್ಗೆ ಈ ಹಿಂದೆ ಕೋರ್ಟ್ನಲ್ಲಿ ಕೇಸ್ ದಾಖಲಾದಾಗ ಪ್ರತಿಕ್ರಿಯೆ ನೀಡಿದ್ದ ನಟ ಯಶ್ ಕುಟುಂಬ, ಮನೆ ಮಾಲೀಕರ ಒಪ್ಪಿಗೆ ಪಡೆದು 40 ಲಕ್ಷ ಖರ್ಚು ಮಾಡಿ ಮನೆಯ ಇಂಟೀರಿಯರ್ ಡೆಕೋರೇಷನ್ ಮಾಡಲಾಗಿತ್ತು. ತಮಗೇ ಮಾರಾಟ ಮಾಡ್ತೀವಿ ಎಂದು ಮಾಲೀಕರು ಒಪ್ಪಿಕೊಂಡಿದ್ದರು. ಆದ್ರೆ ಈಗ ಮಾರಾಟ ಮಾಡಲು ಒಪ್ಪುತ್ತಿಲ್ಲ ಎಂದು ಆರೋಪಿಸಿದ್ದರು. ಆದ್ರೀಗ, ಕೋರ್ಟ್ ವಿಚಾರಣೆ ಮುಗಿಸಿ ತೀರ್ಪು ಪ್ರಕಟಿಸಿದ್ದು, ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಬೇಕು ಎಂದು ಆದೇಶಿಸಿದೆ.


Click it and Unblock the Notifications











