'ಎದ್ದೇಳು ಮಂಜುನಾಥ- 2' ಚಿತ್ರ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ; ನಿರ್ಮಾಪಕರ ಪ್ರತಿಕ್ರಿಯೆ
ದಿವಂಗತ ಗುರುಪ್ರಸಾದ್ ನಿರ್ದೇಶಿಸಿ ನಟಿಸಿದ್ದ 'ಎದ್ದೇಳು ಮಂಜುನಾಥ'- 2 ಸಿನಿಮಾ ಈ ವಾರ ಬಿಡುಗಡೆ ಆಗಬೇಕಿದೆ. ಆದರೆ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಸಿನಿಮಾ ಬಿಡುಗಡೆ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಸಿನಿಮಾ ರಿಲೀಸ್ ತಡೆ ಕೋರಿ ಗುರುಪ್ರಸಾದ್ ಪತ್ನಿ ಸುಮಿತ್ರಾ ಕೋರ್ಟ್ ಮೆಟ್ಟಿಲು ಏರಿದ್ದರು.
ಮೈಸೂರು ರಮೇಶ್ ಹಾಗೂ ರವಿ ದೀಕ್ಷಿತ್ ಎಂಬುವವರು 'ಎದ್ದೇಳು ಮಂಜುನಾಥ'- 2 ಚಿತ್ರ ನಿರ್ಮಾಣ ಮಾಡಿದ್ದಾರೆ. ಗುರುಪ್ರಸಾದ್ ಎರಡನೇ ಪತ್ನಿ ಸುಮಿತ್ರಾ ಅವರ ಪರ ಹಿರಿಯ ವಕೀಲ ದಿಲೀಪ್ ಕುಮಾರ್ ಐ ಎಸ್ ವಾದ ಮಂಡಿಸಿದ್ದರು. ಇದೇ ಶುಕ್ರವಾರ ( ಫೆಬ್ರವರಿ 21) ಬಿಡುಗಡೆ ಆಗಬೇಕಿದ್ದ ಚಿತ್ರಕ್ಕೆ ಸಿಟಿ ಸಿವಿಲ್ ಕೋರ್ಟ್ ಶಾಕ್ ನೀಡಿದೆ. ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ನಿರ್ಮಾಪಕ ರಮೇಶ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

'ಎದ್ದೇಳು ಮಂಜುನಾಥ'- 2 ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡದಂತೆ ನಿರ್ಮಾಪಕರು ಕೇವಿಯಟ್ ಅರ್ಜಿ ಸಲ್ಲಿಸಿದ್ದೇವೆ. ನಮ್ಮ ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಎದುರಾಗಲ್ಲ ಎನ್ನುವ ಭರವಸೆಯನ್ನು ನಿರ್ಮಾಪಕರು ವ್ಯಕ್ತಪಡಿಸಿದ್ದಾರೆ. ಗುರುಪ್ರಸಾದ್ ಅವರ ಪತ್ನಿ ಸುಮಿತ್ರಾ ಸುಲಿಗೆ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅವರ ವಾದದಲ್ಲಿ ಯಾವುದೇ ಅರ್ಥ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗುರುಪ್ರಸಾದ್ ಸಿನಿಮಾ ಮಾಡುವುದಾಗಿ ಹೇಳಿ 40 ಲಕ್ಷ ಹಣ ಪಡೆದಿದ್ದರು. ಆದರೆ ಸಾಯುವ ಮುನ್ನ ಫುಟೇಜ್ ಎಲ್ಲಾ ಡಿಲೀಟ್ ಮಾಡಿದ್ದರು. ಬಳಿಕ ನಾವು ಹೇಗೋ ಅದನ್ನು ರಿಕವರಿ ಮಾಡಿಸಿದೆವು. ಅವರ ಕುಟುಂಬದವರಿಗೆ ಸಹಾಯವಾಗಲಿ ಎಂದು ಸಿನಿಮಾ ಕಂಪ್ಲೀಟ್ ಮಾಡಿ ಬಿಡುಗಡೆ ಮಾಡೋಣ ಎಂದುಕೊಂಡೆವು. ಫಿಲ್ಮ್ ಚೇಂಬರ್‌ಗೆ ಕರೆಸಿ ಒಂದು ಮೀಟಿಂಗ್ ನಡೀತು.
ಸಿನಿಮಾ ಮುಗಿಸಲು ಇನ್ನು 30 ಲಕ್ಷ ರೂ. ಬೇಕು. ಅದನ್ನು ನಾನೇ ಕೊಡ್ತೀನಿ. ಆದರೆ ಸಿನಿಮಾದಿಂದ ಬಂದ ಲಾಭದಲ್ಲಿ 51ರಷ್ಟು ಹಣವನ್ನು ಗುರುಪ್ರಸಾದ್ ಕುಟುಂಬಕ್ಕೆ ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದೆವು. ಆದರೆ ಇತ್ತೀಚೆಗೆ 4 ಲಕ್ಷ ರೂ. ಹಣ ಕೇಳಿ ಸುಮಿತ್ರಾ ಮೆಸೇಜ್ ಮಾಡಿದ್ದರು. ಲಾಭ ಬಂದರೆ ಹಣ ಕೊಡುವುದಾಗಿ ನಾನು ಸುದ್ದಿಗೋಷ್ಠಿಯಲ್ಲಿ ಕೂಡ ಹೇಳಿದ್ದೀನಿ. ಆದರೆ ಈಗ ಕೋರ್ಟ್‌ಗೆ ಹೋಗಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.
ಕೋರ್ಟ್ ಹೇಳಿದರೂ ನಾನು ಸುಮಿತ್ರಾ ಅವರಿಗೆ ಒಂದು ರೂಪಾಯಿ ಕೊಡುವುದಿಲ್ಲ. ಈ ಸಿನಿಮಾದಿಂದ ನನಗೆ ಅಂದಾಜು 1 ಕೋಟಿ ರೂ. ನಷ್ಟ ಆಗಬಹುದು. ಆದರೂ ಕೂಡ ನಾನು ಸುಖಾಸುಮ್ಮನೆ ಆಕೆಗೆ ಹಣ ಕೊಡಲ್ಲ. ಸಿನಿಮಾ ಬಿಡುಗಡೆ ಆಗಲಿ, ಕೊಟ್ಟ ಮಾತಿನಂತೆ ನಾನು ಹಣ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











