ಕನ್ನಡಿಗರಿಗೆ ಅವಮಾನ, ಪ್ರಕರಣ ರದ್ದು ಕೋರಿ ಮನವಿ ಮಾಡಿದ ಸೋನು ನಿಗಂ..!
ಕನ್ನಡ .. ಕನ್ನಡ .. ಕನ್ನಡ .. ಎಂದು ಕನ್ನಡಿಗರನ್ನು ಕೆಣಕಿದ್ದವರು ಸೋನು ನಿಗಮ್. ಕನ್ನಡ ಚಿತ್ರರಂಗದ ಕುರಿತು ಅಭಿಮಾನದ ಮಾತುಗಳನ್ನಾಡುತ್ತಿದ್ದ, ಕಾಲ .. ಕಾಲಕ್ಕೆ .. ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡುತ್ತಿದ್ದ ಸೋನು ನಿಗಂ ಮಾತನಾಡುವಾಗ ಕನ್ನಡಿಗರ ಕನ್ನಡಾಭಿಮಾನವನ್ನು ಕಾಶ್ಮೀರದಲ್ಲಿ ಆದ ಘಟನೆಗೆ ಹೋಲಿಸಿದ್ದರು.ಕನ್ನಡಿಗರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಮಾತನಾಡಿದ್ದರು.
ತಾವಾಡಿದ ಮಾತುಗಳಿಗೆ ಕ್ಷಮೆಯನ್ನು ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಕನ್ನಡಿಗರ ಆಕ್ರೋಶವನ್ನು ಇನ್ನೂ ಹೆಚ್ಚಿಸಿದ್ದರು. ಕನ್ನಡಿಗರ ಕೋಪ-ತಾಪ ಕಡಿಮೆಯಾದ ಕಾರಣ ಕೊನೆಗೆ ಮನಸಿಲ್ಲದ ಮನಸಿಂದ ಕ್ಷಮೆಯನ್ನು ಕೇಳಿದ್ದರು. ಕ್ಷಮಿಸಿ ಕರ್ನಾಟಕ ನನ್ನ ಅಂಹಕಾರಕ್ಕಿಂತ ನಿಮ್ಮ ಮೇಲಿನ ಪ್ರೀತಿ ದೊಡ್ಡದು ಎಂದು ಹೇಳಿದ್ದರು.

ಇನ್ನು ಇದೇ ಸಮಯದಲ್ಲಿ ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 351, 352 ಮತ್ತು 353ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ, ಶಾಂತಿಗೆ ಭಂಗವನ್ನು ಮಾಡುವ ಉದ್ದೇಶ, ಉದ್ದೇಶಪೂರ್ವಕ ಅವಮಾನ, ಪ್ರಚೋದಿಸುವ ಮತ್ತು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಹೇಳಿಕೆಗಳನ್ನು ನೀಡಿದ ಆರೋದಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸೋನು ನಿಗಮ್ ಅವರಿಗೆ ಉತ್ತರ ನೀಡುವಂತೆ ನೋಟಿಸ್ ಕಳುಹಿಸಿದ್ದರು. ನೋಟಿಸ್‌ಗೆ ಉತ್ತರ ನೀಡಲು ಏಳು ದಿನಗಳ ಕಾಲ ಗಡುವು ಕೂಡ ನೀಡಿದ್ದರು. ಆದರೆ ಇದಕ್ಕೆ ಇನ್ನು ಸೋನು ನಿಗಮ್ ಉತ್ತರ ನೀಡಿಲ್ಲ.
ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ದಾಖಲಾಗಿರುವ ದೂರನ್ನು ರದ್ದು ಮಾಡುವಂತೆ ಕೋರಿ ಸೋನು ನಿಗಮ್ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಸೋನು ನಿಗಂ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ಮೇ 15 ರಂದು ನಡೆಯಲಿದೆ ಎಂದು ವರದಿಯಾಗಿದೆ.
ಇನ್ನುಳಿದಂತೆ ಬೆಂಗಳೂರಿನಲ್ಲಿ ಆದ ವಿವಾದದ ಕುರಿತು ಮೊದಲ ಬಾರಿ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಸೋನು ನಿಗಂ 'ಕನ್ನಡ.. ಕನ್ನಡ' ಎಂದು ಪ್ರೀತಿಯಿಂದ ಕರೆಯುವುದಕ್ಕೂ 'ಕನ್ನಡ.. ಕನ್ನಡ' ಎಂದು ಧಮ್ಕಿ ಹಾಕುವುದಕ್ಕೂ ತುಂಬಾನೇ ವ್ಯತ್ಯಾಸ ಇದೆ ಎಂದು ಹೇಳಿದ್ದರು.
ನಾನು ಹಾಡು ಹಾಡುತ್ತಿದ್ದ ಸಮಯದಲ್ಲಿ ಕೆಳಗಡೆ ನಾಲ್ಕೈದು ಗೂಂಡಾಗಳು ಇದ್ದರು, ಕೂಗಾಡುತ್ತಿದ್ದರು ಎಂದಿರುವ ಸೋನು ನಿಗಂ ಅಲ್ಲಿದ್ದ ಸುಮಾರು ಜನ ಅವರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು, ವಾತಾವರಣ ಹಾಳು ಮಾಡಬೇಡಿ ಎಂದು ಮನವಿಯನ್ನು ಮಾಡುತ್ತಿದ್ದರು, ಆದರೆ..ಅವರು ಸುಮ್ಮನಾಗಲಿಲ್ಲ, ಹೀಗಾಗಿ ಪಹಲ್ಗಾಮ್‌ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸುವುದು ಅನಿವಾರ್ಯವಾಗಿತ್ತು ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಆ ನಂತರ ಕನ್ನಡ ಚಿತ್ರರಂಗ ಸೋನು ನಿಗಮ್ ಅವರಿಂದ ಕನ್ನಡ ಚಿತ್ರರಂಗದಿಂದ ದೂರ ಇಡುವ ತೀರ್ಮಾನಕ್ಕೆ ಬಂದ ನಂತರ ಕನ್ನಡಿಗರನ್ನು ಉದ್ದೇಶಿಸಿ ಸೋನು ನಿಗಮ್ ಸುದೀರ್ಘವಾದ ಪತ್ರವನ್ನು ಬರೆದಿದ್ದರು. ನನಗೆ ಈಗ 51 ವರ್ಷ, ಜೀವನದ ದ್ವೀತಿಯಾರ್ಧಕ್ಕೆ ನಾನು ಕಾಲಿಟ್ಟಿದ್ದೇನೆ. ನನ್ನ ಮಗನ ವಯಸ್ಸಿನ ಹುಡುಗರು ಭಾಷೆಯ ಹೆಸರಿನಲ್ಲಿ ಅಲ್ಲಿ ಸೇರಿದ ಸಾವಿರಾರು ಜನರ ಮುಂದೆ ಬೆದರಿಕೆ ಹಾಕಲು ಪ್ರಯತ್ನ ಮಾಡಿದಾಗ ಕೋಪ ಮಾಡಿಕೊಳ್ಳುವ ಹಕ್ಕು ನನಗೆ ಇದೆ ಎಂದು ಹೇಳಿದ್ದರು. ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರ ಮಾಡಲು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಟ್ಟಿದ್ದೇನೆ. ನಿಮ್ಮ ತೀರ್ಪನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದರು.
ಇಷ್ಟೆಲ್ಲ ಆದ ನಂತರ ಕ್ಷಮೆಯನ್ನು ಕೇಳಿದ್ದ ಸೋನು ನಿಗಮ್ ಸದ್ಯ ಹೈಕೋರ್ಟ್‌ನಲ್ಲಿ ಪ್ರಕರಣ ರದ್ದು ಮಾಡುವಂತೆ ಮನವಿಯನ್ನು ಸಲ್ಲಿಸಿದ್ದಾರೆ. ಮೇ 15ರಂದು ಸೋನು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.


Click it and Unblock the Notifications











