ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಗುಡ್ ನ್ಯೂಸ್; ನಿಟ್ಟುಸಿರು ಬಿಟ್ಟ ದಾಸ
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾಗಿ ನಟ ದರ್ಶನ್ ಮತ್ತೆ ಜೈಲು ಸೇರಿ 25 ದಿನ ಕಳೆದಿದೆ. ಜೈಲಿನಲ್ಲಿ ನರಕ ದರ್ಶನವಾಗುತ್ತಿದ್ದು ಈ ಬಗ್ಗೆ ನ್ಯಾಯಾಧೀಶರ ಮುಂದೆ ದಾಸ ನೋವು ತೋಡಿಕೊಂಡಿದ್ದರು. ನನಗೆ ಕೊಂಚ ವಿಷ ಕೊಟ್ಟುಬಿಡಿ ಎಂದು ಕೇಳಿದ್ದರು. ಅಂತೂ ಇಂತೂ ನರಕಯಾತನೆ ಅನುಭವಿಸುತ್ತಿರುವ ದರ್ಶನ್‌ಗೆ ಕೊಂಚ ರಿಲೀಫ್ ಸಿಕ್ಕಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ & ಗ್ಯಾಂಗ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ವಜಾ ಮಾಡಿದೆ. ಹಾಗಾಗಿ ಸದ್ಯಕ್ಕೆ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಉಳಿಯಲಿದ್ದಾರೆ. ವೀಡಿಯೋ ಕಾಲ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದ ದರ್ಶನ್ ಒಂದು ಮನವಿ ಮಾಡಿದ್ದರು. ಇದನ್ನು ಕೇಳಿ ನ್ಯಾಯಾಧೀಶರು ಒಂದು ಕ್ಷಣ ಶಾಕ್ ಆಗಿದ್ದರು.

ಆಗಸ್ಟ್ 14ರಂದು ಜಾಮೀನು ರದ್ದು ಮಾಡಿದ್ದ ಸುಪ್ರೀಂ ಕೋರ್ಟ್ ಜೈಲಿನಲ್ಲಿ ಆರೋಪಿಗಳಿಗೆ ವಿಶೇಷ ಸವಲತ್ತು ಕೊಡಬಾರದು ಎಂದಿತ್ತು. ಜೈಲಿನ ಕೋಣೆಯಲ್ಲೇ ದರ್ಶನ್ ಕಾಲ ಕಳೆಯುವಂತಾಗಿದೆ. ನರಕಯಾತನೆ ತಾಳಲಾರದೆ ದರ್ಶನ್ "ನಾನು ಬಿಸಿಲು ನೋಡಿ 30 ದಿನಗಳಾಯ್ತು. ಬಟ್ಟೆ ವಾಸನೆ ಬರ್ತಿದೆ. ಕೈಗೆ ಫಂಗಸ್ ಬಂದಿದೆ. ನನಗೆ ಮಾತ್ರ ಪಾಯಿಸನ್ ಕೊಡಲಿ. ಕೋರ್ಟ್ ಈ ಆದೇಶ ಕೊಡಬೇಕು" ಎಂದಿದ್ದರು. ಅದಕ್ಕೆ ನ್ಯಾಯಾಧೀಶರು "ಆ ರೀತಿ ನೀವು ಕೇಳುವಂತಿಲ್ಲ" ಎಂದಿದ್ದಾರೆ.
ಬಳ್ಳಾರಿಗೆ ಶಿಫ್ಟ್ ಮಾಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿರುವ ಕೋರ್ಟ್ ದರ್ಶನ್ ಮನವಿಯನ್ನು ಪುರಸ್ಕರಿಸಿದೆ. ಜೈಲಿನ ಮ್ಯಾನ್ಯುಯಲ್ ಪ್ರಕಾರ ಒಂದಷ್ಟು ಸೌಲಭ್ಯ ಒದಗಿಸುವಂತೆ ಸೂಚಿಸಿದೆ. ಮಲಗಲು ಹಾಸಿಗೆ, ದಿಂಬು ಕೊಡಲು ತಿಳಿಸಿದೆ. ಜೊತೆಗೆ ಜೈಲಿನ ಒಳಗೆ ಓಡಾಡಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಆದೇಶ ನೀಡಿದೆ. ಬೆಳಗ್ಗೆ ವಿಚಾರಣೆ ಆರಂಭಿಸಿದ್ದ ಕೋರ್ಟ್ 3 ಗಂಟೆಗೆ ಮುಂದೂಡಿತ್ತು. 3 ಗಂಟೆಗೆ ಮತ್ತೆ ವಿಚಾರಣೆ ಆರಂಭವಾಗಿ ಈ ರೀತಿ ಆದೇಶ ನೀಡಿದೆ.

ಕಳೆದ ವರ್ಷ ಜೂನ್ 11ರಂದು ನಟ ದರ್ಶನ್ ಬಂಧನವಾಗಿತ್ತು. ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಪಡೆದು ದರ್ಶನ್ ಜೈಲಿನಿಂದ ಹೊರ ಬಂದಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಕಾರಣಕ್ಕೆ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ ದರ್ಶನ್ ಕೆಲ ದಿನ ಬಳ್ಳಾರಿ ಜೈಲಿನಲ್ಲಿ ಇದ್ದರು. ಜಾಮೀನು ಸಿಕ್ಕ ಬಳಿಕ ಅಲ್ಲಿಂದಲೇ ಬೆಂಗಲೂರಿಗೆ ವಾಪಸ್ ಬಂದಿದ್ದರು.
ಡಿಸೆಂಬರ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಹಾಗಾಗಿ ದರ್ಶನ್ ನಿಟ್ಟುಸಿರು ಬಿಟ್ಟಿದ್ದರು. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದು ಬಳಿಕ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಸರ್ಜರಿ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್ ಸರ್ಜರಿ ಮಾಡಿಸಿಕೊಂಡಿರಲಿಲ್ಲ. ಇನ್ನು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಜಾಮೀನು ನೀಡಿದ್ದ ಹೈಕೋರ್ಟ್‌ಗೆ ಛೀಮಾರಿ ಹಾಕಿತ್ತು. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿತ್ತು. ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಬಾರದು ಎಂದು ತಾಕೀತು ಮಾಡಿತ್ತು. ಮತ್ತೆ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಜಾ ಆಗಿತ್ತು. ದರ್ಶನ್ ಹಾಸಿಗೆ, ದಿಂಬು ಕೇಳಿ ಅರ್ಜಿ ಸಲ್ಲಿಸಿದ್ದರು. ಅಂತೂ ಅವರ ಮನವಿಗೆ ಕೋರ್ಟ್ ಪ್ರತಿಕ್ರಿಯಿಸಿದೆ.


Click it and Unblock the Notifications











