ಭಾರತದೆಲ್ಲೆಡೆ ಐಪಿಎಲ್ ಜ್ವರ, ರೀಲ್ಸ್ ರಾಣಿ ಸೋನು ಗೌಡ ಸೇರಿ 40ಕ್ಕೂ ಅಧಿಕ ಜನರಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ..!
ಇವತ್ತು ಭಾರತದಲ್ಲಿ ಕ್ರಿಕೆಟ್ ಕೇವಲ ಮನರಂಜನೆಯಾಗಿ ಉಳಿದಿಲ್ಲ. ಬದಲಿಗೆ ಪಕ್ಕಾ ಬ್ಯುಸಿನೆಸ್ ಆಗಿದೆ.ಯಾವ ಕ್ರೀಡೆ ಮನರಂಜನೆಗೆ ಸೀಮಿತವಾಗಬೇಕಿತ್ತೋ ಅದು ಇಂದು ಅನೇಕರ ಮನೆಗಳನ್ನು ಹಾಳು ಮಾಡಿ,ಲೆಕ್ಕ ಇಲ್ಲದ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ. ಬಡವರಿಂದ ಹಿಡಿದು ಶ್ರೀಮಂತರವರೆಗೆ,ಶಾಲಾ ಮಕ್ಕಳಿಂದ ಹಿಡಿದು ಗೃಹಿಣಿಯರವರೆಗೆ ಈ ಐಪಿಎಲ್ ಸಮಯದಲ್ಲಿ ಬೆಟ್ಟಿಂಗ್‌ಗೆ ಅಡಿಕ್ಟ್ ಆಗಿದ್ದಾರೆ.ಸೋತು ಅನೇಕರು ಜೀವವನ್ನು ಕಳೆದುಕೊಂಡಿದ್ದಾರೆ.
ಆದರೂ ಕೂಡ ಈ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇನ್ನು ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ .. ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನು ಅನೇಕರು ಮಾಡ್ತಾರೆ. ಬೆಟ್ಟಿಂಗ್ ಅಪಾಯಕಾರಿ ಎನ್ನುವುದು ಗೊತ್ತಿದ್ದರೂ ಕೂಡ ಪ್ರಚಾರ ಮಾಡುತ್ತಾರೆ.

ಕೇವಲ ಸೆಲೆಬ್ರಿಟಿಗಳು ಮಾತ್ರ ಅಲ್ಲ ಈಗೀಗ ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್‌ಗಳು ಕೂಡ ಈ ಕೆಲಸವನ್ನು ತುಂಬಾ ನಿಯತ್ತಾಗಿ ಮಾಡುತ್ತಿದ್ದಾರೆ. ತಮ್ಮ ಹಣದಾಸೆಗೆ ಬೆಟ್ಟಿಂಗ್ ಆಡುವಂತೆ ಬೇರೆಯವರನ್ನು ಪ್ರೇರೆಪಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸೈಬರ್ ಕ್ರೈಮ್ ಪೊಲೀಸರು ಈಗ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್‌ಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ನೋಟಿಸ್ ಕಳುಹಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಹೌದು, ಅಸಲಿಗೆ ಸೋಶಿಯಲ್ ಮೀಡಿಯಾದ ಇನ್‌ಫ್ಲುಯೆನ್ಸರ್‌ಗಳಾದ ಸೋನು ಗೌಡ, ವರುಣ್ ಆರಾಧ್ಯ, ದೀಪಕ್ ಗೌಡ, ಸೇರಿ 40ಕ್ಕೂ ಅಧಿಕ ಇನ್‌ಫ್ಲುಯೆನ್ಸರ್‌ಗಳು ಬೆಟ್ಟಿಂಗ್ ಬುಕ್ಕಿಗಳ ಆದೇಶದ ಮೇರೆಗೆ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೆಟ್ಟಿಂಗ್‌ನ ಪ್ರಚಾರ ಮಾಡುತ್ತಿದ್ದರು. ಇವತ್ತು ಯಾವ ತಂಡ ಗೆಲ್ಲುತ್ತೆ, ಯಾವ ತಂಡ ಟಾಸ್ ಗೆಲ್ಲುತ್ತೆ, ಯಾವ ತಂಡ ಸೋಲುತ್ತೆ, ಎನ್ನುವ ಮಾಹಿತಿಯನ್ನು ಹಂಚಿಕೊಳ್ಳುವ ವಾಟ್ಸಾಫ್ ಗ್ರೂಪ್‌ಗಳ ಲಿಂಕ್‌ಗಳನ್ನು ಹಾಕಿ ಆ ಗ್ರೂಪ್‌ಗಳಿಗೆ ಸೇರಿಕೊಳ್ಳುವಂತೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ತಮ್ಮ ಹಿಂಬಾಲಕರಿಗೆ ಸಂದೇಶವನ್ನು ನೀಡುತ್ತಿದ್ದರು ಎನ್ನಲಾಗಿದೆ.
ಇನ್ನು, ಎಲ್ಲರಿಗೆ ಗೊತ್ತಿರುವಂತೆ ಯಾವುದಾದರೂ ವಸ್ತುವಿನ ಪ್ರಚಾರ ಮಾಡಬೇಕೆಂದರೆ ಸೆಲೆಬ್ರಿಟಿಗಳು ಹಣ ಪಡೆಯುತ್ತಾರೆ. ಸೋಶಿಯಲ್ ಮೀಡಿಯಾದ ಇನ್‌ಫ್ಲುಯೆನ್ಸರ್ ಗಳು ಕೂಡ ಇದರಿಂದ ಹೊರತಾಗಿಲ್ಲ. ಒಂದು ಇನ್‌ಸ್ಟಾಗ್ರಾಮ್ ಸ್ಟೋರಿಗೆ ಇವರು ಒಂದು ಸಾವಿರದಿಂದ ಐದು ಸಾವಿರದವರೆಗೆ ಹಣ ಪಡೆಯುತ್ತಿದ್ದರು ಎಂದು ಟಿವಿ 9 ಕನ್ನಡ ವರದಿ ಮಾಡಿದೆ.
ಈ ಹಿನ್ನೆಲೆ ಬೆಂಗಳೂರಿನ ವಕೀಲರೊಬ್ಬರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ರೀಲ್ಸ್ ಸ್ಟಾರ್‌ಗಳ ಲಿಸ್ಟ್ ಮಾಡಿ ಪೊಲೀಸರಿಗೆ ನೀಡಿದ್ದರು. ಈಗ ಸೈಬರ್ ಕ್ರೈಂ ಪೊಲೀಸರು ಲಿಸ್ಟ್ ನಲ್ಲಿರುವ ಎಲ್ಲರಿಗೆ ನೋಟಿಸ್ ಕಳುಹಿಸಿದ್ದಾರೆ. ಕೆಲವರ ವಿಚಾರಣೆಯನ್ನು ಕೂಡ ಮಾಡಿದ್ದಾರೆ.
ಆ ಪೈಕಿ ವಿಚಾರಣೆಗೆ ಹಾಜರಾದ ಕೆಲ ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್‌ಗಳು ಇನ್ನು ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.ನಮ್ಮ ತಪ್ಪಿನ ಅರಿವು ನಮಗಾಗಿದೆ, ಗೊತ್ತಿಲ್ಲದೇ ಐಪಿಎಲ್ ಬೆಟ್ಟಿಂಗ್‌ನ ಜಾಹೀರಾತು ನಾವು ಹಾಕಿದ್ದೇವೆ, ಅವೆಲ್ಲವನ್ನು ಡಿಲೀಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.ಕೇವಲ ಬೆಂಗಳೂರು ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಕೂಡ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡುತ್ತಿದ್ದರು ಅವರನ್ನು ಕೂಡ ವಿಚಾರಣೆಗೆ ಕರೆಯಲಾಗಿದೆ.
ಇನ್ನು ಸೈಬರ್ ಕ್ರೈಂ ಪೊಲೀಸರು ಸದ್ಯ ಕೆಲವರ ವಿಚಾರಣೆ ಮಾಡಿ ಕಳುಹಿಸಿದ್ದು ಇನ್ಮುಂದೆ ಬೆಟ್ಟಿಂಗ್ ಆಪ್‌ಗಳ ಪ್ರಚಾರವನ್ನು ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.


Click it and Unblock the Notifications











