ನಾಡಪ್ರಭು ಕೆಂಪೇಗೌಡರ ಬಯೋಪಿಕ್ ಘೋಷಣೆ; ಹೀರೊ ಆಗಿ ನಟಿಸೋದ್ಯಾರು?
ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡ ಅವರ ಜೀವನವನ್ನಾಧರಿಸಿ ಸಿನಿಮಾ ಘೋಷಣೆ ಆಗಿದೆ. ದಿನೇಶ್ ಬಾಬು ಈ ಚಿತ್ರದ ಸಾರಥ್ಯ ವಹಿಸಿದ್ದು ಭಾರೀ ಕುತೂಹಲ ಮೂಡಿಸಿದೆ. 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಟೈಟಲ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕಿರಣ್ ತೋಟಂಬೈಲ್ ಬಂಡವಾಳ ಹೂಡಲಿದ್ದಾರೆ.
ಈಗಾಗಲೇ ಸಾಕಷ್ಟು ಐತಿಹಾಸಿಕ ಮಹಾಪುರುಷರ ಜೀವನವನ್ನಾಧರಿಸಿ ಸಿನಿಮಾಗಳು ಮೂಡಿ ಬಂದಿದೆ. ಬಹಳ ದಿನಗಳಿಂದ ನಾಡಪ್ರಭು ಕೆಂಪೇಗೌಡರ ಸಾಹಸಗಾಥೆಯನ್ನು ತೆರೆಗೆ ತರುವ ಮಾತುಗಳು ಕೇಳಿಬರುತ್ತಿತ್ತು. ಡಾ. ರಾಜ್‌ಕುಮಾರ್ ಕೂಡ ಕೆಂಪೇಗೌಡರ ಜೀವನಾಧರಿತ ಚಿತ್ರದಲ್ಲಿ ನಟಿಸುವ ಮನಸ್ಸು ಮಾಡಿದ್ದರು ಎನ್ನಲಾಗುತ್ತದೆ.

ನಿರ್ದೇಶಕ ನಾಗಾಭರಣ ಕೂಡ ಕೆಂಪೇಗೌಡರ ಕಥೆಯನ್ನು ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಯುವ ರಾಜ್‌ಕುಮಾರ್ ಹೀರೊ ಆಗಿ ನಟಿಸುತ್ತಾರೆ ಎನ್ನಲಾಗಿತ್ತು. ಅದೆಲ್ಲ ಸುಳ್ಳು, ಅಂತಹ ಯಾವುದೇ ಆಲೋಚನೆ ತಮಗಿಲ್ಲ ಎಂದು ನಾಗಾರಭರಣ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದರು. ಇದೀಗ ದಿನೇಶ್ ಬಾಬು ಆ ಸಾಹಸಕ್ಕೆ ಕೈ ಹಾಕಿದ್ದಾರೆ. ಸ್ಟಾರ್ ನಟರೊಬ್ಬರು ಚಿತ್ರದಲ್ಲಿ ಕೆಂಪೇಗೌಡರ ಪಾತ್ರಕ್ಕೆ ಜೀವ ತುಂಬುತ್ತಾರೆ ಎನ್ನಲಾಗುತ್ತಿದೆ.
ಖ್ಯಾತ ಇತಿಹಾಸಕಾರ ಅರೇನಹಳ್ಳಿ ಧರ್ಮೇಂದ್ರ ಕುಮಾರ್ ಕಥೆ ಬರೆದಿದ್ದಾರೆ. ಸಂಕೇತ್ ಛಾಯಾಗ್ರಹಣ ಹಾಗೂ ಉಜ್ವಲ್ ಕುಲಕರ್ಣಿ ಸಂಕಲನ ಚಿತ್ರಕ್ಕಿದ್ದು ನಿರ್ಮಾಪಕ ಕಿರಣ್ ತೋಟಂಬೈಲ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇನ್ನು ವಿ. ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಬರೆಯಲಿದ್ದಾರೆ. ರಘು ನಿಡುವಳ್ಳಿ ಹಾಗೂ ಮಾಸ್ತಿ ಬಳಿ ಸಂಭಾಷಣೆ ಬರೆಯುವಂತೆ ಚರ್ಚಿಸಲಾಗಿದೆ.

ಇತಿಹಾಸಿಕ ಕಥೆ ಕಟ್ಟಿಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಈ ಹಿಂದೆ ಕೆಲ ಸಿನಿಮಾಗಳಲ್ಲಿ ಕೆಂಪೇಗೌಡರ ಸಣ್ಣ ಸಣ್ಣ ಝಲಕ್ ತೋರಿಸಲಾಗಿತ್ತು. ಇದೀಗ ಸಂಪೂರ್ಣವಾಗಿ ಇಡೀ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಸೆಟ್ಟೇರಲಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಂಗೀತ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ಓದಿದ ಅವರಿಗೆ ಬಹಳ ದಿನಗಳಿಂದ ನಾಡಪ್ರಭು ಕೆಂಪೇಗೌಡರ ಜೀವನಚರಿತ್ರೆಯನ್ನು ತೆರೆಗೆ ತರುವ ಕನಸಿತ್ತು. ಅದು ಈಗ ಈಡೇರುತ್ತಿದೆ. ಕನ್ನಡ ಮಾತ್ರವಲ್ಲದೇ ಇಂಗ್ಲೀಷ್‌ನಲ್ಲೂ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಕೆಂಪೇಗೌಡರ ಹುಟ್ಟಿನಿಂದ ಆರಂಭಿಸಿ ಮುಂದೆ ಅವರ ಸಾಧನೆಯ ಮಜಲುಗಳನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಸೆಟ್ಟೇರುವ ಮುನ್ನವೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕೆಂಪೇಗೌಡರ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











