ಬೆಂಗಳೂರಿನಲ್ಲಿ ಮೊದಲ ಕಂಬಳ ಉದ್ಘಾಟಿಸಲಿರುವ ನಟಿ ಅನುಷ್ಕಾ ಶೆಟ್ಟಿ: ಯಾವ್ಯಾವ ನಟರು ಭಾಗಿ ಗೊತ್ತೆ?
ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಕರಾವಳಿ ಕಲರವ ಮೂಡಲಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೊದಲ ಕಂಬಳ ನಡೆಯಲಿದೆ. ತುಳುನಾಡಿನ ಕಂಬಳದ ಇತಿಹಾಸದಲ್ಲಿಯೇ ಅತಿ ಉದ್ದದ ಟ್ರ್ಯಾಕ್ ಅನ್ನು ಮಾಡಲಾಗುತ್ತದೆ. ನಟಿ ಅನುಷ್ಕಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
"ಸಾಂಪ್ರದಾಯಿಕ ಟ್ರ್ಯಾಕ್ 145 ಮೀಟರ್ ಉದ್ದವಿದೆ. ಈ ಹಿಂದೆ 147 ಮೀಟರ್ ಉದ್ದದ ಟ್ರ್ಯಾಕ್ ಹೊಂದಿರುವ ಕಂಬಳ ಮಾಡಲಾಗಿತ್ತು. ಆದರೆ, ಮೊದಲ ಬೆಂಗಳೂರು ಕಂಬಳಕ್ಕೆ 155 ಮೀಟರ್ ಉದ್ದದ ಕಂಬಳ ಕೆರೆ ಮಾಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ' ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.

ಅನುಷ್ಕಾ ಶೆಟ್ಟಿಯಿಂದ ಕಂಬಳ ಉದ್ಘಾಟನೆ
ತೆಲುಗು, ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮೂಲತಃ ಮಂಗಳೂರಿನವರೆ. ಅವರು ಕರಾವಳಿಯ ಎಲ್ಲಾ ದೇವರು, ದೈವಗಳ ಪೂಜಾ ಕಾರ್ಯಾಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. ದೈವ ಭಕ್ತೆಯಾಗಿರುವ ಅವರು ತಮ್ಮ ಊರಿನ ಎಲ್ಲಾ ದೇವರುಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
ಹೀಗಾಗಿಯೇ ನಟಿ ಅನುಷ್ಕಾ ಶೆಟ್ಟಿಯವರನ್ನು ಮೊದಲ ಬೆಂಗಳೂರು ಕಂಬಳಕ್ಕೆ ಅತಿಥಿಯಾಗಿ ಅಹ್ವಾನಿಸಲಾಗಿದ್ದು, ಅವರೇ ಕಂಬಳ ಉದ್ಘಾಟಿಸಲಿದ್ದಾರೆ. ಇವರ ಜೊತೆಗೆ ನಟರಾದ ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಮತ್ತು ಯಶ್, ದರ್ಶನ್ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಭಾಗವಹಿಸಲಿದ್ದಾರೆ.

ಬೆಂಗಳೂರು ಕಂಬಳ ತುಂಬಾ ವಿಶೇಷ
"ಬೆಂಗಳೂರಿನಲ್ಲಿ ನಡೆಯುವ ಕಂಬಳ ಕಾರ್ಯಕ್ರಮವು ಎಲ್ಲಾ ಅಂಶಗಳಲ್ಲಿಯೂ ವಿಶೇಷವಾಗಿರಬೇಕು. ನಾವು ಅನೇಕ ದಾಖಲೆಗಳನ್ನು ಮುರಿಯಲು ನಿರ್ಧರಿಸಿದ್ದೇವೆ. ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವವರಿಗೆ ರೂ 1.50 ಲಕ್ಷ ನಗದು ಮತ್ತು ಎರಡು ಪವನ್ ಚಿನ್ನ ಸಿಗುತ್ತದೆ. ಭಾಗವಹಿಸುವ ಜೋಡಿ ಎಮ್ಮೆಗಳಿಗೆ ಶೀಲ್ಡ್ ಮತ್ತು ವಿಜೇತ ಜಾಕಿ ಚಿನ್ನದ ಪದಕವನ್ನು ಪಡೆಯುತ್ತಾರೆ. ಎಮ್ಮೆಗಳ ಸಾಗಣೆಯ ವೆಚ್ಚಕ್ಕಾಗಿ ಕಂಬಳ ಮಾಲೀಕರಿಗೆ 50,000 ರೂಪಾಯಿಗಳನ್ನು ನೀಡಲಾಗುತ್ತದೆ" ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.
"ಆರಂಭದಲ್ಲಿ, ನಾವು ಕಂಬಳ ಎಮ್ಮೆ ಮಾಲೀಕರಿಗೆ ತಲಾ 15 ಪಾಸ್‌ಗಳನ್ನು ನೀಡಲು ನಿರ್ಧರಿಸಿದ್ದೇವು. ಈಗ ತಲಾ 25 ಪಾಸುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇದಲ್ಲದೆ, ಒಂದು ದಿನದಲ್ಲಿ 5,000 ಜನರಿಗೆ ಆಹಾರ ನೀಡಲಾಗುವುದು. ಕಂಬಳಕ್ಕೆ ಏಳರಿಂದ ಎಂಟು ಲಕ್ಷ ಪ್ರೇಕ್ಷಕರು ಆಗಮಿಸುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ" ಎಂದು ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
ಕಾಂತಾರ ಸಿನಿಮಾ ಬಳಿಕ ಕಂಬಳದ ಬಗ್ಗೆ ಜನರಲ್ಲಿ ಆಸಕ್ತಿ
ಬೆಂಗಳೂರು ಕಂಬಳಕ್ಕೆ 116 ಜೋಡಿ ಎಮ್ಮೆಗಳ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾಂತಾರ ಸಿನಿಮಾ ಬಳಿಕ ನಂತರ ಕಂಬಳ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿದೆ. ಕಂಬಳ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅದರ ಪಾಕಪದ್ಧತಿಯೊಂದಿಗೆ ಎತ್ತಿ ಹಿಡಿಯುವ ಗುರಿಯನ್ನು ಹೊಂದಿದೆ. 250 ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಉತ್ತರ ಕರ್ನಾಟಕದಿಂದ ಹಲಸಿನ ಖಾದ್ಯಗಳು, ಉಪ್ಪಿನಕಾಯಿ, ಕಲಾಕೃತಿಗಳು ಮತ್ತು ಇತರ ತಿಂಡಿಗಳನ್ನು ಮಾರಾಟ ಮಾಡುತ್ತೆವೆ ಎಂದಿದ್ದಾರೆ.
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಬೆಂಗಳೂರು ಕಂಬಳ ವೀಕ್ಷಿಸಲಿದ್ದಾರೆ. ಇನ್ನು, ಸಮಿತಿಯು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಅನುರಾಗ್ ಠಾಕೂರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಬೆಂಗಳೂರಿನಲ್ಲಿ ತುಳುಭವನಕ್ಕೆ ಅಧಿಕೃತ ಭಾಷಾ ಸ್ಥಾನಮಾನ ಮತ್ತು ಒಂದು ಎಕರೆ ಜಮೀನಿನ ಕುರಿತು ಸರಕಾರಕ್ಕೆ ಮನವಿ ಮಾಡಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.


Click it and Unblock the Notifications











