ಕನ್ನಡ ಸ್ಟಾರ್ಸ್, ಫಿಲ್ಮ್ ಮೇಕರ್ಸ್ ಇಲ್ನೋಡಿ; ಬೇಗ ಎಚ್ಚೆತ್ತುಕೊಳ್ಳಿ

ಕನ್ನಡ ಚಿತ್ರರಂಗ ಒಂದಿಲ್ಲೊಂದು ಸಮಸ್ಯೆಯಿಂದ ಕಂಗೆಟ್ಟಿದೆ. ನಿಯಮಿತವಾಗಿ ಸ್ಟಾರ್ ನಟರ ಸಿನಿಮಾಗಳು ಬರದೇ ಇರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜನ ಚಿತ್ರಮಂದಿರಕ್ಕೆ ಬರಲು ಸಿದ್ಧರಿದ್ದರೂ ಯಾವುದೇ ಕನ್ನಡ ಸಿನಿಮಾ ಚಿತ್ರಮಂದಿರದಲ್ಲಿ ಇಲ್ಲ. ಇಂತಹ ಸಮಯದಲ್ಲೇ ನಿಧಾನವಾಗಿ ಮತ್ತೊಂದು ಸಂಕಷ್ಟ ಎದುರಾಗುವ ಸುಳಿವು ಸಿಕ್ತಿದೆ.

ಇತ್ತೀಚೆಗೆ ನಟ ಶಿವರಾಜ್‌ಕುಮಾರ್ ನಿವಾಸದಲ್ಲಿ ಕೆಲ ಪ್ರಮುಖರು ಸಭೆ ನಡೆಸಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಮುಂದೆ ಎಲ್ಲರನ್ನು ಕರೆದು ಮತ್ತೊಮ್ಮೆ ಮಾತನಾಡಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿತ್ತು. ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲಾಗಿತ್ತು. ಒಳ್ಳೆ ಸಿನಿಮಾಗಳು ಬರದೇ ಚಿತ್ರಮಂದಿರಗಳ ಉಳಿವು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಮೂಡುತ್ತದೆ.

Bengaluru Multiplexes Favor North Indian Films Kannada Industry Raises Alarm

ಕನ್ನಡ ಪ್ರೇಕ್ಷಕರು ಈಗಲೂ ಚಿತ್ರಮಂದಿರಕ್ಕೆ ಬರಲು ಸಿದ್ಧರಿದ್ದಾರೆ. ಆದರೆ ಕನ್ನಡದ ಒಳ್ಳೆ ಸಿನಿಮಾಗಳು ಬರದೇ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವಂತಾಗಿದೆ. ಇತ್ತ ಚಿತ್ರಮಂದಿರದ ಮಾಲೀಕರು, ಮಲ್ಟಿಪ್ಲೆಕ್ಸ್ ಚೈನ್‌ಗಳು ಕನ್ನಡ ಸಿನಿಮಾಗಳು ಅಂದರೆ ಕಸದಂತೆ ಕಾಣುತ್ತವೆ. ಕನ್ನಡ ಸಿನಿಮಾಗಳಿಗೆ ಶೋಗಳನ್ನು ಕೊಡದೇ ಅನ್ಯಾಯ ಮಾಡುತ್ತಿದ್ದಾರೆ. ಇತ್ತೀಚೆಗೆ 'ಮಾದೇವ' ಚಿತ್ರಕ್ಕೆ ಇದೇ ರೀತಿ ಹಿನ್ನೆಡೆಯಾಗಿತ್ತು. ಒಳ್ಳೆ ರೆಸ್ಪಾನ್ಸ್ ಸಿಗುತ್ತಿದ್ದರೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋ ತೆಗದು ಹಾಕಲಾಗಿತ್ತು. ಈ ಬಗ್ಗೆ ನಟ ವಿನೋದ್ ಪ್ರಭಾಕರ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿ ನೋವು ತೋಡಿಕೊಂಡಿದ್ದರು.

ಈ ವರ್ಷ 6 ತಿಂಗಳಲ್ಲಿ 100ಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಗೆ ಬಂದಿದೆ. ಆದರೆ ಯಾವುದೇ ಸಿನಿಮಾ ಗೆಲ್ಲಲಿಲ್ಲ. ಮುಂದಿನ 6 ತಿಂಗಳಲ್ಲಿ ನಾಲ್ಕೈದು ಸಿನಿಮಾಗಳು ಮಾತ್ರ ಭರವಸೆ ಮೂಡಿಸಿದೆ. ಕೆಲ ಸ್ಟಾರ್ ನಟರಂತೂ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರನ್ನು ಚಿತ್ರರಂಗಕ್ಕೆ ಸೆಳೆಯುವಂತಹ ಸ್ಟಾರ್‌ಗಳ ಸಂಖ್ಯೆ ಕಮ್ಮಿ ಇದೆ. ಇರುವ ನಾಲ್ಕೈದು ಮಂದಿ ಕೂಡ ಎರಡು ಮೂರು ವರ್ಷಕ್ಕೆ ಸಿನಿಮಾ ಮಾಡುತ್ತಾ ಕೂತಿದ್ದಾರೆ. ಪ್ಯಾನ್ ಇಂಡಿಯಾ ಆಸೆಗೆ ಬಿದ್ದು ನಮ್ಮ ಊರನ್ನು, ನಮ್ಮ ಬಾಕ್ಸಾಫೀಸ್ ಗಳಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ಮೊದಲಿನಿಂದಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ಇಷ್ಟು ದಿನ ಪರಭಾಷಾ ಸಿನಿಮಾಗಳು ಅಂದರೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳು ಎನ್ನುವಂತಾಗಿತ್ತು. ಪರಭಾಷೆಯ ದೊಡ್ಡ ಸಿನಿಮಾಗಳು ಬಂದರೆ ಕನ್ನಡದ ಸ್ಟಾರ್ ನಟರ ಸಿನಿಮಾ ಬಿಡುಗಡೆಗೂ ಭಯಪಡುವಂತಾಗಿತ್ತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷೆಯ ಚಿತ್ರಗಳಿಗೆ ಜನ ಬರದೇ ಇದ್ದರೂ ಶೋ ಕೊಡ್ತಾರೆ, ಆದರೆ ಕನ್ನಡ ಸಿನಿಮಾ ನೋಡಲು ಜನ ಬರಲು ಸಿದ್ಧರಿದ್ದರೂ ಶೋ ಕ್ಯಾನ್ಸಲ್ ಮಾಡುತ್ತಾರೆ.

ಇಷ್ಟು ದಿನ ಪರಭಾಷೆಯ ಸಿನಿಮಾ ಅಂದರೆ ದಕ್ಷಿಣದ ಸಿನಿಮಾಗಳ ಜೊತೆ ಬಾಲಿವುಡ್ ಸಿನಿಮಾಗಳು ಎಂದುಕೊಳ್ಳುತ್ತಿದ್ದೆವು. ಆದರೆ ನಿಧಾನವಾಗಿ ಉತ್ತರ ಭಾರತ ಪ್ರಾದೇಶಿಕ ಭಾಷೆಯ ಸಿನಿಮಾಗಳು ಬೆಂಗಳೂರಿನಲ್ಲಿ ಪ್ರದರ್ಶನವಾಗಲು ಶುರುವಾಗಿದೆ. ಪಂಜಾಬಿ, ಗುಜರಾತಿ, ಮರಾಠಿ, ಒಡಿಯಾ, ಬೆಂಗಾಲಿ ಭಾಷೆಯ ಸಿನಿಮಾಗಳು ನಗರದ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನವಾಗಲು ಶುರುವಾಗಿದೆ. ಅಷ್ಟೆಲ್ಲಾ ಯಾಕೆ ನೇಪಾಳಿ ಭಾಷೆಯ ಸಿನಿಮಾಗಳನ್ನು ಕೂಡ ಬೆಂಗಳೂರಿನಲ್ಲಿ ನೋಡಲು ಅವಕಾಶ ಸಿಗುತ್ತಿದೆ.

ಕರ್ನಾಟಕದಲ್ಲಿ ಈಗ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇದ್ದರೂ ಆಯಾ ಭಾಷೆಗಳಲ್ಲೇ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಭಾರತದಲ್ಲಿ ಯಾರು ಎಲ್ಲಿ ಬೇಕಾದರೂ ಬದುಕಬಹುದು, ತಮ್ಮಿಷ್ಟದ ಸಿನಿಮಾ ನೋಡಬಹುದು, ಊಟ ಮಾಡಬಹುದು. ಎಲ್ಲಾ ಸ್ವಾತಂತ್ರ ಇದೆ. ಆದರೆ ಕನ್ನಡ ಸಿನಿಮಾಗಳಿಗೆ ಶೋಗಳನ್ನು ಕೊಡದೇ ಅನ್ಯಾಯ ಮಾಡಿ ಬೇರೆ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಮಣೆ ಹಾಕುವುದು ಎಷ್ಟು ನ್ಯಾಯ. ಇದು ಹೀಗೆ ಮುಂದುವರೆದರೆ ಮುಂದೆ ಕನ್ನಡ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳೇ ಸಿಗಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗಕ್ಕೆ ಇದು ಹೊಸ ತಲೆನೋವು ಆಗಲಿದೆ.

ಪ್ರಾದೇಶಿಕ ಭಾಷೆಗಳಿಗೆ ಮೊದಲ ಆದ್ಯತೆ ಎಂದು ಹೇಳಿ ಮಲ್ಟಿಪ್ಲೆಕ್ಸ್‌ಗಳು ಸರ್ಕಾರದಿಂದ ಅನುಮತಿ ಪಡೆದು ಬಳಿಕ ಅನ್ಯಾಯ ಮಾಡುತ್ತಿವೆ. ಸದ್ಯ 'ಬೌ ಬುಟ್ಟು ಭೂತಾ' ಹಾಗೂ 'ಅನಂತ' ಎಂಬ ಒಡಿಯಾ ಭಾಷೆಯ ಚಿತ್ರಗಳು ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನವಾಗುತ್ತಿದೆ. 'ಪಿಂಡ್ ಪೇಯ ಸಾರ ಜೊಂಬಿಲ್ಯಾಂಡ್ ಬನೆಯ' ಹಾಗೂ 'ಸೌಕಂನ್ ಸೌಕನ್ಯ' ಎಂಬ ಎರಡು ಪಂಜಾಬಿ ಸಿನಿಮಾಗಳು ಕಳೆದ ವಾರ ಬಿಡುಗಡೆಯಾಗಿತ್ತು.

ಇನ್ನು 'ಭೈಮಾನ್ ದ' ಎಂಬ ಅಸ್ಸಾಮಿ ಸಿನಿಮಾ, 'ಭ್ರಾಮ್' ಎಂಬ ಗುಜರಾತಿ ಸಿನಿಮಾ ಹಾಗೂ 'ಅಂಬಾಟ್ ಶೌಕಿನ್' ಎಂಬ ಮರಾಠಿ ಸಿನಿಮಾ ನಗರದ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಂಡಿದೆ. 'ಜಾರ್' ಎಂಬ ನೇಪಾಳಿ ಸಿನಿಮಾ ಕಾಡುಗೋಡಿಯ ಶ್ರೀನಿವಾಸ ಚಿತ್ರಮಂದಿರದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ಹೀಗೆ ಉತ್ತರ ಭಾರತದ ಏಳೆಂಟು ಸಿನಿಮಾಗಳು ಬೆಂಗಳೂರಿನಲ್ಲೇ ಪ್ರದರ್ಶನ ಕಾಣುತ್ತಿವೆ. ದಿನದಿಂದ ದಿನಕ್ಕೆ ಉತ್ತರ ಭಾರತದ ಜನ ಹೆಚ್ಚು ಬೆಂಗಳೂರಿಗೆ ಬಂದು ಸೇರುತ್ತಿದ್ದಾರೆ. ಇಲ್ಲಿ ಕೂಲಿ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಇಂತಹವರು ಹೀಗೆ ತಮ್ಮೂರಿನ ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್‌ಗಳಿಗೆ ಹೋಗುತ್ತಿದ್ದಾರೆ.

ಇಲ್ಲೇ ದುಡಿದು ಬದುಕು ಕಟ್ಟಿಕೊಂಡು ತಮಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಬೆಂಗಳೂರನ್ನು ತಮ್ಮದೇ ಊರು ಎನ್ನುವಂತೆ ನೋಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಗರ ಬದಲಾಗುತ್ತಿರುವ ಆತಂಕ ಶುರುವಾಗಿದ್ದು ಬೆಂಗಳೂರಿನಲ್ಲಿ ಕನ್ನಡಿಗರೇ ಮೂಲೆಗುಂಪಾಗುವ ಆತಂಕವನ್ನು ಸಾಕಷ್ಟು ಜನ ವ್ಯಕ್ತಪಡಿಸುತ್ತಿದ್ದಾರೆ.

Bengaluru Multiplexes Favor North Indian Films Kannada Industry Raises Alarm

ಸದ್ಯ ಈ ಬೆಳವಣಿಗೆ ಬಗ್ಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. "ನಿಜಕ್ಕೂ ಇದು ಆತಂಕಕಾರಿ ಸಂಗತಿ. ಮುಂದೆ ಕನ್ನಡಿಗರಿಗೆ ಇಲ್ಲಿ ಉಳಿಗಾಲ ಇಲ್ಲದಂತೆ ಆಗುತ್ತದೆ. ಇನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಹೀಗೆ ಉತ್ತರಭಾರತದ ಸಿನಿಮಾಗಳನ್ನು ಅವರದ್ದೇ ಭಾಷೆಗಳಲ್ಲಿ ಪ್ರದರ್ಶಿಸುವುದು ತಪ್ಪಾಗುತ್ತದೆ. ಈ ಬಗ್ಗೆ ಫಿಲ್ಮ್ ಚೇಂಬರ್‌ಗೆ ಮನವಿ ಪತ್ರ ನೀಡಿ ಕ್ರಮ ಕೈಗೊಳ್ಳಲು ಕೇಳುತ್ತೇವೆ" ಎಂದಿದ್ದಾರೆ.

ನಿರ್ಮಾಪಕದ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ "ಮೊದಲಿನಿಂದಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ಕೊಡಬೇಕು ಎಂದು ಫಿಲ್ಮ್ ಚೇಂಬರ್ ಕಡೆಯಿಂದ ಮನವಿ ಮಾಡುತ್ತಲೇ ಇದ್ದೇವೆ. ಹೋರಾಟ ಮಾಡುತ್ತಿದ್ದೇವೆ. ಪ್ರಾದೇಶಿಕ ಭಾಷೆ ಚಿತ್ರಗಳಿಗೆ ಆದ್ಯತೆ ಎಂದು ಹೇಳಿ ಲೈಸೆನ್ಸ್ ಪಡೆದು ಅನ್ಯಾಯ ಮಾಡುತ್ತಿದ್ದಾರೆ. ಜನ ಬರದ ಸಮಯದಲ್ಲಿ ಕನ್ನಡ ಸಿನಿಮಾಗಳನನು ಹಾಕುವುದು, ಬರುವ ಸಮಯದಲ್ಲಿ ಶೋ ಕೊಡಲ್ಲ. ಪಾಪ್‌ಕಾರ್ನ್, ಕೂಲ್ ಡ್ರಿಂಕ್ಸ್ ದರ ಹೆಚ್ಚಿಸಿ ಕನ್ನಡ ಪ್ರೇಕ್ಷಕರು ಬರದಂತೆ ಮಾಡುತ್ತಿದ್ದಾರೆ. ಆ ಮೂಲಕ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಮಲ್ಟಿಪ್ಲೆಕ್ಸ್‌ ಚೈನ್ ವಿರುದ್ಧ ಕ್ರಮ ಕೈಗೊಳ್ಳುವುದೇ ಸಮಸ್ಯೆ ಆಗಿಬಿಟ್ಟಿದೆ" ಎನ್ನುತ್ತಾರೆ.

"ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಹತೋಟಿಗೆ ತರಬಹುದು. ಆದರೆ ಮಲ್ಟಿಪ್ಲೆಕ್ಸ್‌ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಇಲ್ಲಿನವರನ್ನು ಕೇಳಿದರೆ ನಮಗೂ ಇದಕ್ಕೂ ಸಂಬಂಧ ಇಲ್ಲ. ಮುಂಬೈನಲ್ಲಿ ಎಲ್ಲಾ ಶೆಡ್ಯೂಲ್ ಮಾಡ್ತಾರೆ ಎಂದುಬಿಡುತ್ತಾರೆ. ನಾವು ಏನಾದರೂ ಕೇಳಿದರೆ ಕಾನೂನು, ಸಿಸಿಐ ಎಂದು ಹೇಳುತ್ತಾರೆ. ಏನೇ ಕೇಳಿದರೂ ಏನೋ ಒಂದು ಹೇಳಿ ನುಣುಚಿಕೊಳ್ಳುತ್ತಾರೆ" ಎಂದು ಬಣಕಾರ್ ಹತಾಶೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Multiplex Chains Under Fire for Neglecting Kannada Cinema in Bengaluru
Read more about: sandalwood kannada theater
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X