ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ದರ್ಶನ್‌ಗೆ ಕಾದಿದ್ಯಾ ಸಂಕಷ್ಟ?
ಚಿಕಿತ್ಸೆಯ ನೆಪವೊಡ್ಡಿ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸಿಸಿಹೆಚ್ ಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಕ್ಕಿರಲಿಲ್ಲ. ಆದರೆ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿ ಬೆಂಗಳೂರು ತಲುಪಿದ್ದಾರೆ. ದರ್ಶನ್ ಪರ ಸಿವಿ ನಾಗೇಶ್ ವಾದ ಮಂಡಿಸಿ ಜಾಮೀನು ಕೊಡಿಸುವಲ್ಲಿ ಸಫಲರಾಗಿದ್ದಾರೆ. 131 ದಿನಗಳ ಬಳಿಕ ಜೈಲಿನಿಂದ ಹೊರ ಬಂದ ದರ್ಶನ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ನಿನ್ನೆ(ಅಕ್ಟೋಬರ್ 30) ಸಂಜೆ 6. 13ರ ಸುಮಾರಿಗೆ ನಟ ದರ್ಶನ್ ಜೈಲಿನಿಂದ ಹೊರ ಬಂದಿದ್ದರು. ಬಳಿಕ ತಮ್ಮ ಟೊಯೋಟಾ ಕಾರಿನಲ್ಲಿ ರಸ್ತೆ ಮಾರ್ಗವಾಗಿ ರಾತ್ರಿ ವೇಳೆಗೆ ಮನೆ ಸೇರಿದರು.

ಅಲ್ಲಲ್ಲಿ ಅಭಿಮಾನಿಗಳು ಕಾರು ತಡೆದು ಪಟಾಕಿ ಸಿಡಿಸಿ ಜೈಕಾರ ಹಾಕಿದ್ದು ಕಂಡುಬಂತು. ಬಳ್ಳಾರಿಯಿಂದ ನೇರವಾಗಿ ದರ್ಶನ್ ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್‌ಗೆ ತಲುಪಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇವತ್ತು ಪುತ್ರ ವಿನೀಶ್ ಹುಟ್ಟುಹಬ್ಬದ ಸಂಭ್ರಮವೂ ಇದೆ. ಹಾಗಾಗಿ ರಾತ್ರಿಯೇ ಕೇಕ್ ಕತ್ತರಿಸಿ ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ.
ನಟ ದರ್ಶನ್ ಬೆನ್ನುಹುರಿಯಿಂದ ಬಹಳ ಸಂಕಷ್ಟ ಎದುರಿಸುತ್ತಿದ್ದರು. ನಿಲ್ಲಲು, ಕೂರಲು ಸಾಧ್ಯವಾಗದೇ ನೋವು ಅನುಭವಿಸುತ್ತಿದ್ದರು. ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು, ಇಲ್ಲದಿದ್ದರೆ ಸಮಸ್ಯೆ ಬಹಳ ಗಂಭೀರವಾಗುತ್ತದೆ ಎಂದು ವಕೀಲರು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು. ಹಾಗಾಗಿ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. ಒಂದಷ್ಟು ಷರತ್ತುಗಳನ್ನು ವಿಧಿಸಿ ಜೈಲಿನಿಂದ ಹೊರಗಿರಲು ಅನುಮತಿ ನೀಡಲಾಗಿದೆ.
ನಟ ದರ್ಶನ್ ತಾವು ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಲಾಗಿದೆ. ಆದರೆ ವಾರದೊಳಗೆ ಚಿಕಿತ್ಸೆಯ ವರದಿಯನ್ನು ಕೋರ್ಟ್‌ಗೆ ನೀಡುವಂತೆಯೂ ಹೇಳಲಾಗಿದೆ. ಪಾಸ್‌ಪೋರ್ಟ್ ಕೋರ್ಟ್‌ಗೆ ಸರೆಂಡರ್ ಮಾಡಲಾಗಿದೆ. ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗುವಂತಿಲ್ಲ, ಸಾಕ್ಷಿಗಳ ಭೇಟಿ, ಬೆದರಿಸುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ. ಇದೆಲ್ಲದರ ನಡುವೆ ಮಧ್ಯಂತರ ದರ್ಶನ್‌ಗೆ ಸಿಕ್ಕಿರುವ ಮಧ್ಯಂತರ ಜಾಮೀನು ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಪೊಲೀಸರು ಚಿಂತಿಸುತ್ತಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಪೊಲೀಸ್ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೈಕೋರ್ಟ್ ನೀಡಿರುವ ದರ್ಶನ್ ಮಧ್ಯಂತರ ಜಾಮೀನು ಆದೇಶದ ಪ್ರತಿ ಸಿಕ್ಕ ಬಳಿಕ ಪೊಲೀಸರು ಮುಂದಿನ ತೀರ್ಮಾಣ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಹಳ ಗಂಭೀರವಾದ ಪ್ರಕರಣ ಆಗಿದೆ. ಈ ಪ್ರಕರಣದಲ್ಲಿ ಬಹಳ ಪ್ರಭಾವಿ ಆಗಿರುವ ದರ್ಶನ್ ಅವರನ್ನು ಪೊಲೀಸರ ಬಂಧಿಸಿ ಜೈಲಿಗೆ ಕಳುಹಿಸಿದ್ದರು. 131 ದಿನಗಳ ಬಳಿಕ ದರ್ಶನ್ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಹಾಗಾಗಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮುಂದೆ ಈ ವಿಚಾರ ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕಿದೆ.
ದರ್ಶನ್ ಅವರನ್ನು ಜೈಲಿನಿಂದ ಹೊರಗೆ ಕರೆತರಲು ಪತ್ನಿ ವಿಜಯಲಕ್ಷ್ಮಿ ಬಹಳ ಹೋರಾಟ ನಡೆಸಿದ್ದರು. ವಕೀಲರ ಮೂಲಕ ಕಾನೂನು ಹೋರಾಟದ ಜೊತೆಗೆ ದೇವರ ಮೊರೆ ಹೋಗಿದ್ದರು. ಹಲವು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ನಡೆಸಿದ್ದರು. ಇನ್ನು ದರ್ಶನ್‌ಗೆ ಜಾಮೀನು ಕೊಡಿಸಲು ಸಹೋದರ ದಿನಕರ್ ಹಾಗೂ ನಟ ಧನ್ವೀರ್ ಗೌಡ ಶ್ಯೂರಿಟಿ ಕೊಟ್ಟಿದ್ದಾರೆ.


Click it and Unblock the Notifications











