'ಪೊನ್ನಿಯನ್ ಸೆಲ್ವನ್' ಗಾಯಕಿಯೊಂದಿಗೆ ಸಂಸದ ತೇಜಸ್ವಿ ಸೂರ್ಯ ಕಲ್ಯಾಣ; ವಧುವಿನ ಹಿನ್ನೆಲೆಯೇನು ಗೊತ್ತಾ?
ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಕರ್ನಾಟಕದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಈಗ ಎಪಿ ಅಂತಲೇ ಜನಪ್ರಿಯರಾಗಿರುವ ತೇಜಸ್ವಿ ಸೂರ್ಯ ಜಂಟಿಯಾಗುವುದಕ್ಕೆ ನಿರ್ಧರಿಸಿದ್ದು, ಚೆನ್ಣೈ ಮೂಲದ ಗಾಯಕಿಯನ್ನು ವಿವಾಹವಾಗುತ್ತಿದ್ದಾರೆ ಅನ್ನುವ ಸುದ್ದಿ ಓಡಾಡುತ್ತಿದೆ.
ಸಂಸದ ತೇಜಸ್ವಿ ಸೂರ್ಯ ತಮ್ಮ ವಿವಾಹದ ಬಗ್ಗೆ ಸುಳಿವನ್ನು ಬಿಟ್ಟಕೊಟ್ಟಿಲ್ಲ. ಆದರೆ, ಪ್ರಧಾನಿ ಮೋದಿ ಮೆಚ್ಚಿ ಗಾಯಕಿಯೊಂದಿಗೆ ತೇಜಸ್ವಿ ಸೂರ್ಯ ವಿವಾಹ ನಿಶ್ವಯವಾಗಿದ್ದು, ಎರಡೂ ಕುಟುಂಬಗಳು ಗ್ರೀನ್ ಸಿಗ್ನಲ್ ಕೊಟ್ಟಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ತೆರಮರೆಯಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿವೆ ಅನ್ನೋ ಮಾತು ಹೇಳಿ ಬರುತ್ತಿದೆ.

ಅಂದ್ಹಾಗೆ ತೇಜಸ್ವಿ ಸೂರ್ಯ ಜೊತೆ ಹಸಮಣೆ ಏರುತ್ತಿರುವ ಹುಡುಗಿ ಶಿವಶ್ರೀ ಸ್ಕಂದ ಪ್ರಸಾದ್. ತಮಿಳುನಾಡು ಮೂಲದ ಇವರು ವೃತ್ತಿಯಲ್ಲಿ ಗಾಯಕಿ. ಹಾಗೇ ಭರತನಾಟ್ಯದಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. 2025, ಮಾರ್ಚ್ 4 ರಂದು ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದ ಪ್ರಸಾದ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿದೆ.
ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಸಂಗೀತದ ಹಿನ್ನೆಲೆಯುಳ್ಳ ಕುಟುಂಬದವರು. ಶಿವಶ್ರೀ ಸ್ಕಂದ ಪ್ರಸಾದ್ ದೇಶ ವಿದೇಶದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಸೈಕಲಿಂಗ್ ಕೂಡ ಮಾಡುತ್ತಾರೆ. ಲೈಫ್‌ನಲ್ಲಿ ಆಕ್ಟಿವ್ ಆಗಿರುವ ಶಿವಶ್ರೀ ಸ್ಕಂದ ಪ್ರಸಾದ್ ಸಿನಿಮಾದಲ್ಲೂ ಹಾಡಿದ್ದಾರೆ. ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದ ಕನ್ನಡ ಅವತರಣಿಕೆಗೆ ಹಾಡಿದ್ದಾರೆ.

ಚೆನ್ನೈ ಮೂಲದ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್ ಹಾಡಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಿವಶ್ರೀ ಸ್ಕಂದ ಪ್ರಸಾದ್ ಹಾಡುವ ಹಾಡುಗಳಿಗೆ ಅಭಿಮಾನಿಯಾಗಿರುವ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಕಳೆದ ವರ್ಷ ಶ್ರೀರಾಮನ ಬಗ್ಗೆ ಹಾಡಿದ್ದ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಮೋದಿ ಶೇರ್ ಮಾಡಿ ಹೊಗಳಿದ್ದರು. "ಪೂಜಿಸಲೆಂದೇ ಹೂಗಳ ತಂದೆ" ಅನ್ನೋ ಕನ್ನಡ ಹಾಡನ್ನು ಹಾಡಿದ್ದರು ಅನ್ನೋದು ಇನ್ನೊಂದು ವಿಶೇಷ.
ಶಿವಶ್ರೀ ಸ್ಕಂದ ಪ್ರಸಾದ್ ಕೇವಲ ಸಂಗೀತ ಹಾಗೂ ಭರತನಾಟ್ಯ ಕ್ಷೇತ್ರದಲ್ಲಷ್ಟೇ ಅಲ್ಲ. ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ. ಇವರು ಬಯೋ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಹೊಂದಿದ್ದಾರೆ. ಹಾಗೇ ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿ ಹಾಗೂ ಚೆನ್ನೈನ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆಂದು ವರದಿಯಾಗಿವೆ. ಇವರೂ ಕೂಡ ತೇಜಸ್ವಿ ಸೂರ್ಯ ಅವರೊಂದಿಗೆ ವಿವಾಹದ ಬಗ್ಗೆ ಚಿಕ್ಕ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.
ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಬಿಜೆಪಿಯಿಂದ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ ತಮ್ಮ ಕ್ಷೇತ್ರ ಹಾಗೂ ದೆಹಲಿಯಲ್ಲಿ ವಾಕ್‌ಚಾತುರ್ಯದಿಂದ ಗಮನ ಸೆಳೆದಿದ್ದಾರೆ. ರಾಜಕೀಯದ ಜೊತೆ ಜೊತೆಗೆ ಸೈಕ್ಲಿಂಗ್, ವಾಕಥಾನ್ ಅಂತಹ ಆಕ್ಟಿವಿಟೀಸ್‌ನಲ್ಲಿ ಭಾಗವಹಿಸಿ ಯುವಕರ ಗಮನವನ್ನು ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ಐರನ್ ಮ್ಯಾನ್ ಮ್ಯಾರಥಾನ್ ನಡೆದಿತ್ತು. ಇದನ್ನು ಗೆದ್ದ ಮೊದಲ ಸಂಸದ ಎನ್ನುವ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.


Click it and Unblock the Notifications











