'ಕೆಜಿಎಫ್ 2' ಟಿಕೆಟ್ ನೀಡಿ 'ಕೆಜಿಎಫ್ 1' ಸಿನಿಮಾ ಪ್ರದರ್ಶಿಸಿದ ಬೆಂಗಳೂರಿನ ಚಿತ್ರಮಂದಿರ!
'ಕೆಜಿಎಫ್ 2' ಸಿನಿಮಾ ಕೊನೆಗೂ ಇಂದು ಬಿಡುಗಡೆ ಆಗಿದೆ. ಸತತ ಮೂರು ವರ್ಷಗಳಿಗೂ ಹೆಚ್ಚು ಸಮಯದ ಬಳಿಕ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗಿದೆ.
'ಕೆಜಿಎಫ್ 2' ನೋಡಲು ಕಾತರರಾಗಿದ್ದ ಪ್ರೇಕ್ಷಕರು ಮಧ್ಯರಾತ್ರಿ 12 ಗಂಟೆ ಶೋ, ಬೆಳಗಿನ ಜಾವದ 5 ಗಂಟೆ ಶೋಗಳ ಟಿಕೆಟ್ ಬುಕ್ ಮಾಡಿಕೊಂಡು ನಿದ್ರೆ ಬಿಟ್ಟು ಚಿತ್ರಮಂದಿರಗಳ ಮುಂದೆ ಕಾಯುತ್ತಿದ್ದರು. ಆದರೆ ಬೆಂಗಳೂರಿನ ಒಂದು ಚಿತ್ರಮಂದಿರದಲ್ಲಿ 'ಕೆಜಿಎಫ್ 2' ಸಿನಿಮಾದ ಟಿಕೆಟ್ ಮಾರಾಟ ಮಾಡಿ ಪ್ರೇಕ್ಷಕರಿಗೆ 'ಕೆಜಿಎಫ್ 1' ಸಿನಿಮಾ ಪ್ರದರ್ಶಿಸಿದ್ದಾರೆ.
Recommended Video

ಈ ಅಚಾತುರ್ಯ ನಡೆದಿರುವುದು ನಗರದ ವಿರೇಶ್ ಚಿತ್ರಮಂದಿರದಲ್ಲಿ. ಮಾಗಡಿ ರಸ್ತೆಯ ಈ ಚಿತ್ರಮಂದಿರದಲ್ಲಿ ಎರಡು ಸ್ಕ್ರೀನ್‌ಗಳಿದ್ದು ಬೆಳಿಗ್ಗೆ ಐದು ಗಂಟೆಗೆ ಸಿನಿಮಾದ ಪ್ರದರ್ಶನ ಆಯೋಜಿಸಲಾಗಿತ್ತು. ಬೆಳಗಿನ ಜಾವದ ಶೋನ ಎಲ್ಲ ಟಿಕೆಟ್‌ಗಳು ಮಾರಾಟವಾಗಿದ್ದವು. ಆದರೆ ಸಿನಿಮಾ ನೋಡಲು ಒಳಗೆ ಹೋದ ಅಭಿಮಾನಿಗಳಿಗೆ ನಿರಾಶೆ ಕಾದಿತ್ತು, ಚಿತ್ರಮಂದಿರದ ಎರಡನೇ ಸ್ಕ್ರೀನ್‌ನಲ್ಲಿ 'ಕೆಜಿಎಫ್ 1' ಸಿನಿಮಾ ಪ್ರದರ್ಶಿಸಲಾಗಿದೆ.

ಸತತ 20 ನಿಮಿಷಗಳ ಕಾಲ ಚಿತ್ರಮಂದಿರದ ಎರಡನೇ ಸ್ಕ್ರೀನ್‌ನಲ್ಲಿ 'ಕೆಜಿಎಫ್ 1' ಸಿನಿಮಾ ಪ್ರದರ್ಶನವಾಗಿದೆ. ಬಳಿಕ ಅಭಿಮಾನಿಗಳು ಆಕ್ರೋಶಗೊಂಡು ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಚಿತ್ರಮಂದಿರದ ಸಿಬ್ಬಂದಿ ಸಿನಿಮಾದ ಪ್ರದರ್ಶನ ನಿಲ್ಲಿಸಿ ಬಳಿಕ 'ಕೆಜಿಎಫ್ 2' ಸಿನಿಮಾ ಪ್ರದರ್ಶನ ಮಾಡಿದ್ದಾರೆ.
ಚಿತ್ರಮಂದಿರದ ಪ್ರೊಜೆಕ್ಟರ್ ರೂಂನ ಟೆಕ್ನೀಶಿಯನ್ ಮಾಡಿಕೊಂಡ ಯಡವಟ್ಟಿನಿಂದಾಗಿ ಈ ಸಮಸ್ಯೆ ಆಗಿದೆ ಎಂದು ಚಿತ್ರಮಂದಿರದ ಆಡಳಿತ ಮಂಡಳಿಯು ಸ್ಪಷ್ಟನೆ ನೀಡಿದೆ.
ಬೆಂಗಳೂರಿನಲ್ಲಿ 'ಕೆಜಿಎಫ್ 2' ಸಿನಿಮಾದ ಏಳು ನೂರಕ್ಕೂ ಹೆಚ್ಚು ಶೋಗಳು ಮೊದಲ ದಿನ ಪ್ರದರ್ಶನಗೊಳ್ಳಲಿದೆ. ಹಲವು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಸಿನಿಮಾದ ಶೋಗಳನ್ನು ಪ್ರದರ್ಶನ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳ ಮುಂದೆ ಕಾದಿದ್ದು ಅಭಿಮಾನಿಗಳು ಸಿನಿಮಾ ನೋಡಿದ್ದಾರೆ.


Click it and Unblock the Notifications











