ನೆಲದ ಮೇಲೆ ನಿದ್ರೆ, ಗಲೀಜು ಟಾಯ್ಲೆಟ್, ಆ 120 ದಿನ ; ಜೈಲಿನಲ್ಲಿ ನರಕಯಾತನೆ -ಕಣ್ಣೀರಾದ ಕನ್ನಡ ಸಿನಿಮಾ ನಟಿ
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ.
ಇನ್ನೂ ಕೆಲವರು ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಮಾಡಬಾರದ ಪಾಪ ಕರ್ಮಗಳನ್ನೆಲ್ಲಾ ಮಾಡುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ರಾಶಿ ರಾಶಿ ಉದಾಹರಣೆಗಳಿವೆ. ಆ ಪೈಕಿ ಸಂದೀಪಾ ವಿರ್ಕ್ ಅವರ ಬದುಕಿನ ಕಥನ ಕೂಡ ಒಂದು.

ಹೌದು, ಸಂದೀಪಾ ವಿರ್ಕ್.. ದೆಹಲಿಯ ಚೆಲುವೆ. ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸಂದೀಪಾ 'HybooCare' ಎಂಬ ಸೌಂದರ್ಯ ವರ್ಧಕ ಬ್ರ್ಯಾಂಡ್‌ನ ಸಂಸ್ಥಾಪಕರೂ ಹೌದು.
2015ರಲ್ಲಿ ಬಂದ ಪಂಜಾಬಿ ಚಿತ್ರ ''ಗನ್ & ಗೋಲ್'' ಮೂಲಕ ಚಿತ್ರರಂಗಕ್ಕೆ ಬಂದ ಸಂದೀಪಾ ''ದಿಲ್ ಸಾಲಾ ಸಂಕಿ'' ಚಿತ್ರದ ಮೂಲಕ ಬಾಲಿವುಡ್‌ನ ಪ್ರವೇಶ ಮಾಡಿದರು. ಧನ್ಯತ್ರಾ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಬಂದ ಸಂದೀಪಾ ಕನ್ನಡದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. 2022ರಲ್ಲಿ ತೆರೆಗೆ ಬಂದಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ''ಲೋಕಲ್ ಟ್ರೈನ್'' ಮತ್ತು 2023ರಲ್ಲಿ ಬಿಡುಗಡೆಯಾಗಿದ್ದ ಅಂಬಾಸಿಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.
ಇವರ IMDb ಪ್ರೊಫೈಲ್ ಪ್ರಕಾರ 'ಹನಿ ಟ್ರ್ಯಾಪ್ ಸ್ಕ್ವಾಡ್' ಎಂಬ ವೆಬ್ ಸರಣಿಯಲ್ಲಿ ಕೂಡ ಸಂದೀಪಾ ಕಾಣಿಸಿಕೊಂಡಿದ್ದು ಅಜಿತ್ ಅಭಿನಯದ ಮಂಕಥಾ ಮತ್ತು ಮೋಹನ್ ಲಾಲ್ ಅಭಿನಯದ ಶಿಕ್ಕರ್ ಚಿತ್ರಗಳಲ್ಲಿ ಕೂಡ ಸಂದೀಪಾ ಅಭಿನಯಿಸಿದ್ದಾರೆ.
ಇಂಥಾ ಸಂದೀಪಾ ವಿರ್ಕ್ ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಪಿಟಿಐ ವರದಿಯ ಪ್ರಕಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡುವುದಾಗಿ ನಂಬಿಸಿ ಹೂಡಿಕೆದಾರರಿಂದ ಹಣ ಪಡೆದು ಅವರಿಗೆ ಪಂಗನಾಮವನ್ನು ಹಾಕಿದ್ದ ಸಂದೀಪಾ ಆ ಹಣದಲ್ಲಿ ಆಸ್ತಿ ಖರೀದಿ ಮಾಡಿದ್ದರು. ಇ-ಕಾಮರ್ಸ್ ವೇದಿಕೆಗಳಿಗೆ ಹಣ ವರ್ಗಾಯಿಸಿದ್ದರು.

ಹೀಗೆ ಜಾರಿ ನಿರ್ದೇಶನಾಲಯದ (ED)ದ ಬಲೆಗೆ ಬಿದ್ದ ಸಂದೀಪಾ ಆಗಲೇ ಹೇಳಿದಂತೆ ಕಳೆದ ವರ್ಷ ಆಗಸ್ಟ್ 14ರಂದು ಬಂಧನಕ್ಕೊಳಗಾಗಿದ್ದರು. ತಿಹಾರ್ ಜೈಲಿಗೆ ಹೋಗಿದ್ದರು. ಇದೀಗ ತಮ್ಮ ಈ ಜೈಲಿನ ಅನುಭವವನ್ನು ಸಂದೀಪಾ ಹಂಚಿಕೊಂಡಿದ್ದಾರೆ. ನನ್ನ ಶತ್ರುಗೂ ನನ್ನಂತಹ ಸ್ಥಿತಿ ಬರುವುದು ಬೇಡ ಎಂದಿದ್ದಾರೆ.
ಈ ಕುರಿತು ''ಸಿಮ್ರಾನ್ ಜೋತ್ ಮಕ್ಕರ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಂದೀಪಾ ವಿರ್ಕ್ ತಿಹಾರ್ ಜೈಲಿನಲ್ಲಿ ನಾನು ಅನುಭವಿಸಿದ ನರಕಯಾತನೆ ನನ್ನ ಶತ್ರು ಕೂಡ ಅನುಭವಿಸಬಾರದು ಎಂದು ಹೇಳಿದ್ದಾರೆ. ಮೊದಲ ದಿನ ನಾನು ಜೈಲಿಗೆ ಹೋದಾಗ ದೇವರೆ, ನಾನು ಇದಕ್ಕೆ ಅರ್ಹಳಲ್ಲ ಎಂದು ಕಣ್ಣೀರು ಹಾಕಿದ್ದೇ ಎಂದು ಹೇಳಿರುವ ಸಂದೀಪಾ ವಿರ್ಕ್ ಅಲ್ಲಿನ ಶೌಚಾಲಯಗಳನ್ನು ನೋಡಿದಾಗ ಹಿಂದಿನ ಜನ್ಮದಲ್ಲಿ ನಾನ್ಯಾವ ತಪ್ಪು ಮಾಡಿದ್ದೇ ಎಂದು ಮನಸ್ಸಿನಲ್ಲಿಯೇ ಕೊರಗುತ್ತಿದ್ದೆ ಎಂದು ಹೇಳಿದ್ಧಾರೆ.
ಪ್ರತಿ ದಿನ ನನ್ನ ಸಾವನ್ನು ನಾನು ಜೈಲಿನಲ್ಲಿ ಎದುರು ನೋಡುತ್ತಿದ್ದೆ, ಸಾವು ಬಂದು ನನ್ನನ್ನೂ ಕರೆದೊಯ್ಯಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೆ ಎಂದು ಹೇಳಿರುವ ಸಂದೀಪಾ ವಿರ್ಕ್ ನನ್ನ ತಂದೆ ತಾಯಿ ಜೈಲಿನಲ್ಲಿ ನನ್ನನ್ನು ನೋಡಲು ಬಂದಾಗ ನನಗೆ ವಿಪರೀತ ನೋವಾಗುತ್ತಿತ್ತು ಎಂದು ಹೇಳಿದ್ದಾರೆ. ನನ್ನಿಂದಾಗಿ ಅವರು ಜೈಲಿಗೆ ಬರಬೇಕಾಯಿತಲ್ಲಾ ಎಂದು ಅವರಲ್ಲಿ ನಾನು ಕ್ಷಮೆ ಕೇಳುತ್ತಿದ್ದೆ ಎಂದು ಹೇಳಿರುವ ಸಂದೀಪಾ ಈ ಕಡು ಕಷ್ಟದ ಸಮಯದಲ್ಲಿ ನನ್ನ ಕುಟುಂಬದವರು ನನ್ನ ಜೊತೆಗಿದ್ದರು, ನಾನು ಯಾರು ಎಂಬುದು ಅವರಿಗೆ ಗೊತ್ತಿತ್ತು ಎಂದು ಭಾವುಕರಾಗಿದ್ದಾರೆ.
ಮುಂದುವರೆದು ತಿಹಾರ್ ಜೈಲಿನ ಶೋಚನಿಯ ಸ್ಥಿತಿಯನ್ನು ಕೂಡ ವಿವರಿಸಿರುವ ಸಂದೀಪಾ, ಜೈಲಿನಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದೇ ಎಂದು ಹೇಳಿದ್ದಾರೆ. ಬೇರೊಬ್ಬರ ಸಹಾಯ ಇಲ್ಲದೇ ನನಗೆ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿರುವ ಸಂದೀಪಾ ಜೈಲಿನಲ್ಲಿ ನಾವು ನೆಲದ ಮೇಲೆಯೇ ಮಲಗಬೇಕಿತ್ತು, ಶೌಚಾಲಯಗಳಂತೂ ಸಂಪೂರ್ಣ ಗಲೀಜಾಗಿದ್ದವು, ಪ್ರತಿ ದಿನ ಅದೇ ದಾಲ್, ಅದೇ ಸಾಂಬಾರ್, ನಾಲ್ಕು ರೊಟ್ಟಿ ಮತ್ತು ಅನ್ನ ಆ ಆಹಾರ ಕೂಡ ತಿನ್ನಲು ಮನಸ್ಸಾಗುತ್ತಿರಲಿಲ್ಲ ಎಂದು ಬಿಕ್ಕಿದ್ದಾರೆ. ಕೆಲವು ಮಹಿಳಾ ಪೊಲೀಸರು ನಮ್ಮ ಮೇಲೆ ಕರುಣೆ ತೋರುತ್ತಿದ್ದರು ಆದರೆ ಮತ್ತೂ ಕೆಲವರು ಸಿಟ್ಟು ತೀರಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಇದೇ ವೇಳೆ ಜೈಲಿನ ಭ್ರಷ್ಟಾಚಾರದ ಕುರಿತು ಕೂಡ ಮಾತನಾಡಿರುವ ಸಂದೀಪಾ ಜೈಲಿನಲ್ಲಿ ಹಣ ಇದ್ದರೆ ನೀವೇ ಮಹಾರಾಣಿ, ಎಲ್ಲ ಕೆಲಸಗಳು ಸುಲಭ ಎಂದು ಕೂಡ ಹೇಳಿದ್ದಾರೆ. ಸದ್ಯ ಸಂದೀಪಾ ಅವರ ಈ ಹೇಳಿಕೆಯ ಕುರಿತು ಸೋಶಿಯಲ್ ಮೀಡಿಯಾ ಮತ್ತು ಬಣ್ಣದ ಲೋಕದಲ್ಲಿ ಚರ್ಚೆ ಶುರುವಾಗಿದೆ. ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


Click it and Unblock the Notifications











