ಲೋಕಸಭೆ ಚುನಾವಣೆ ; ಸಿಎಂ ಸಿದ್ಧರಾಮಯ್ಯ ವ್ಯಕ್ತಿತ್ವ-ಸಾಧನೆ ಹಾಡಿ ಹೊಗಳಿದ ಎಸ್.ನಾರಾಯಣ್..!
ಸಿದ್ದರಾಮಯ್ಯ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕ ರಾಜ್ಯ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಅವರದ್ದು ಮುಂಚೂಣಿ ಹೆಸರು. ಅತ್ಯಂತ ಜನಪ್ರಿಯ ಸಿಎಂಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು.
ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಹೀಗೆ ಅನೇಕ ಭಾಗ್ಯಗಳನ್ನ ಕರುಣಿಸಿದವರು ಸಿ.ಎಂ.ಸಿದ್ಧರಾಮಯ್ಯ. ಹೀಗಾಗಿಯೇ ಇವರನ್ನ ಭಾಗ್ಯಗಳ ಸರದಾರ ಎಂದು ಅನೇಕರು ಕರೆಯುತ್ತಾರೆ. ಬಿರುದನ್ನೂ ನೀಡಿದ್ದಾರೆ.

ಸದ್ಯದ ವಿಚಾರ ಏನೆಂದರೆ, ಕಲಾ ಸಾಮ್ರಾಟ್ ಎಂದೇ ಕರೆಯಲ್ಪಡುವ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್, ನಾರಾಯಣ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನ ಮಾಡಿದ್ದಾರೆ. ತಮ್ಮ ಈ ಪ್ರಯತ್ನಕ್ಕೆ ಇವರು ಇಟ್ಟಿರುವ ಹೆಸರು "ಭಾಗ್ಯರಾಜ ನಮ್ಮ ಮುಖ್ಯಮಂತ್ರಿ".
''ಭಾಗ್ಯರಾಜ ನಮ್ಮ ಮುಖ್ಯಮಂತ್ರಿ".. ಇದು ಎಸ್. ನಾರಾಯಣ್ ಅವರ ಹೊಸ ಪ್ರಯತ್ನ. ಹಾಗಂಥ ಇದನ್ನ ಸಿನಿಮಾ ಎಂದು ನೀವು ಅಂದುಕೊಳ್ಳುವಂತೆ ಇಲ್ಲ. ಯಾಕೆಂದರೆ ಎಸ್.ನಾರಾಯಣ್, ಸಿದ್ಧರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ನಂತರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಾಡಿನ ರೂಪವನ್ನ ಕೊಟ್ಟಿದ್ದಾರೆ. ನಾಲ್ಕು ಹಾಡುಗಳಿಗೆ ತಾವೇ ಖುದ್ದು ಸಾಹಿತ್ಯ ಬರೆದು ಹಾಡುಗಳನ್ನು ಚಿತ್ರೀಕರಿಸಿಕೊಂಡು ಕೂಡ ಬಂದಿದ್ದಾರೆ.
ಕಲ್ಪನೆ-ಪರಿಕಲ್ಪನೆ-ಸಾಹಿತ್ಯ-ನಿರ್ದೇಶನ ಅಷ್ಟೇ ಅಲ್ಲ, ಸಂಗೀತ ಕೂಡ ಎಸ್.ನಾರಾಯಣ್ ಅವರದ್ದೇ. ಇನ್ನೂ ಎಸ್.ನಾರಾಯಣ್ ಅವರ ಈ ಮಹತ್ವಕಾಂಕ್ಷೆಯ ಯೋಜನೆಗೆ ಎಸ್.ಆರ್. ಸನತ್ ಕುಮಾರ್ ಹಣ ಹೂಡಿದ್ದಾರೆ. ನಾಲ್ಕು ಹಾಡುಗಳನ್ನೊಳಗೊಂಡ ವಿಡಿಯೋ ಆಲ್ಬಂನ್ನ ನಿರ್ಮಾಣ ಮಾಡಿದ್ದಾರೆ.

ಅಂದ್ಹಾಗೇ ಇತ್ತೀಚಿಗೆ ಈ ವಿಡಿಯೋ ಆಲ್ಬಂನ ಬಿಡುಗಡೆ ಮಾಡಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಎಸ್, ನಾರಾಯಣ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಶುಭ ಹಾರೈಸಿದರು. ಇನ್ನೂ ಯಾರಲ್ಲಾದರೂ ಸಿ.ಎಂ.ಸಿದ್ಧರಾಮಯ್ಯ ಅವರನ್ನ ಹೊಗಳಲೆಂದೆ ಎಸ್.ನಾರಾಯಣ್ ಈ ವಿಡಿಯೋ ಆಲ್ಬಂ ಮಾಡಿದ್ದಾರೆ ಎಂಬ ಭಾವನೆ ಬಂದರೆ ಅದು ತಪ್ಪು. ಯಾಕೆಂದರೆ ಇದು ಹೊಗಳಿಕೆಯಲ್ಲ, ನನಗನಿಸಿದ್ದನ್ನು ಬರೆದಿದ್ದೇನೆ ಅನ್ನುವುದು ಎಸ್.ನಾರಾಯಣ್ ಅವರ ಅಭಿಮತ.
ಹಿಂದೆಯೂ ಬಿಡುಗಡೆಯಾಗಿ, ಸದ್ದು ಮಾಡಿದ್ದವು ಹಾಡುಗಳು
ಎರಡು ವರ್ಷಗಳ ಹಿಂದೆ ಸಿದ್ಧರಾಮಯ್ಯ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ, ಮೈಸೂರು ಹುಲಿಯಾ...' ಮತ್ತು 'ಸೆಲ್ಫ್ ಮೇಡ್ ಸಿದ್ದಣ್ಣ ಎಂಬ ಎರಡು ಹಾಡುಗಳು ಬಿಡುಗಡೆಯಾಗಿದ್ದವು. ಮೈಸೂರು ಹುಲಿಯಾ ಹಾಡನ್ನ 'ಸಲಗ' ಚಿತ್ರದ ಖ್ಯಾತಿಯ 'ಟಿಣಿಂಗ ಮಿಣಿಂಗ ಟಿಶ್ಯಾ..' ಹಾಡಿನ ಗಾಯಕಿ ಗಿರಿಜಾ ಸಿದ್ದಿ ಹಾಡಿದ್ದರು. ವೀರ್ ಸಮರ್ಥ್ ಅವರು ಸಂಗೀತ ಸಂಯೋಜಿಸಿದ್ದರು. 'ಭರ್ಜರಿ', 'ಜೇಮ್ಸ್' ಸಿನಿಮಾಗಳ ನಿರ್ದೇಶಕ ಚೇತನ್ ಕುಮಾರ್ ಹಾಡನ್ನ ಬರೆದಿದ್ದರು. ಇನ್ನೂ ಸೆಲ್ಫ್ ಮೇಡ್ ಸಿದ್ದಣ್ಣ ಹಾಡನ್ನ 'ಚುಟು ಚುಟು ಅಂತೈತಿ..' ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದರು. ಈ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದರು. ವಿಶೇಷ ಅಂದರೆ ಈ ಹಾಡನ್ನ ಕೂಡ ಚೇತನ್ ಕುಮಾರ್ ಅವರೇ ಬರೆದಿದ್ದರು. ಈ ಎರಡು ಹಾಡುಗಳನ್ನ ಹೊರತು ಪಡಿಸಿದರೆ ಇನ್ನು ಒಂದಷ್ಟು ಹಾಡುಗಳನ್ನ ಯುಟ್ಯೂಬ್ ನಲ್ಲಿ ನೀವು ನೋಡಬಹುದು

ಮಿಕ್ಕಂತೆ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ, ಎಸ್.ನಾರಾಯಣ್ ಅವರ ಸಾರಥ್ಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರ ಗುಣಗಾನವಿರುವ "ಭಾಗ್ಯರಾಜ ನಮ್ಮ ಮುಖ್ಯಮಂತ್ರಿ" ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಗಳೇ ಹಾಡುಗಳಾಗಿವೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಇದೇ ಹಾಡುಗಳು ಇನ್ಮುಂದೆ ಎಲ್ಲೆಡೆ ಕೇಳಿಸಿದರೆ ಆಶ್ಚರ್ಯ ಪಡಬೇಡಿ.


Click it and Unblock the Notifications











