Bhairadevi Trailer: ದೆವ್ವದ ಮನೆ, ಸಮಸ್ಯೆ, ಅಗೋರಿಗಳು, ಶವ ಭಕ್ಷಣೆ; 'ಭೈರಾದೇವಿ' ಝಲಕ್
ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಭೈರಾದೇವಿ. ಅಕ್ಟೋಬರ್ 3ಕ್ಕೆ ಈ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶ್ರೀಜೈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಇತ್ತೀಚೆಗೆ ಅದ್ಧೂರಿಯಾಗಿ 'ಭೈರಾದೇವಿ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೀತು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಧಿಕಾ ಕುಮಾರಸ್ವಾಮಿ ಈ ಸಿನಿಮಾ ಗೆಲ್ಲದಿದ್ದರೆ ನಾನು ಮುಂದೆ ಚಿತ್ರಗಳಲ್ಲಿ ನಟಿಸಲ್ಲ, ಸಿನಿಮಾಗಳಿಂದ ದೂರ ಉಳಿಯುತ್ತೇನೆ ಎಂದು ಭಾವುಕರಾಗಿದ್ದರು. ಅವರು ಅಷ್ಟು ಭರವಸೆಯಿಂದ ಯಾಕೆ ಹೇಳುತ್ತಿದ್ದಾರೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ. ನಿಜಕ್ಕೂ ಚಿತ್ರದ ಕೆಲ ಸನ್ನಿವೇಶಗಳ ಮೈ ಜುಮ್ ಎನಿಸುವಂತಿದೆ.

ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಇರುವಂತೆಯೇ ಒಂದು ದೆವ್ವದ ಮನೆ, ಅಲ್ಲಿ ಒಂದಷ್ಟು ಸಮಸ್ಯೆಗಳು. ಅದನ್ನು ಪರಿಹರಿಸುತ್ತಾರೆ ಎನ್ನುವುದು ಚಿತ್ರದ ಸ್ಟೋರಿಲೈನ್ ಎನ್ನುವುದು ಗೊತ್ತಾಗುತ್ತದೆ. ಆ ನಿಗೂಢ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವ ಪೊಲೀಸ್ ಅಧಿಕಾರಿ ಅರವಿಂದ್ (ರಮೇಶ್ ಅರವಿಂದ್) ಒಂದು ಕಡೆ. ಇಲ್ಲ ಇದು ಮನುಷ್ಯನ ಸಾಮಾನ್ಯ ಗ್ರಹಿಕೆಗೆ ಮೀರಿದ್ದು ಎಂದು ಗೊತ್ತಾದಾಗ ಕಥೆ ಕಾಶಿಯ ಅಗೋರಿಗಳ ಪ್ರಪಂಚಕ್ಕೆ ಹೋಗಿ ನಿಲ್ಲುತ್ತದೆ.
ಅಲ್ಲಿ ಕಾಲಭೈರವ ಪರಿಪಾಲಕಿ ಭೈರಾದೇವಿಯನ್ನು ಆರಾಧಿಸುವ ಮಂತ್ರವಾದಿ(ರವಿಶಂಕರ್). ಆತನ ಅನುಯಾಯಿ ಅಗೋರಿ(ರಾಧಿಕಾ ಕುಮಾರಸ್ವಾಮಿ). ಪೊಲೀಸ್ ಅಧಿಕಾರಿಯಿಂದ ಪರಿಹರಿಸಲು ಸಾಧ್ಯವಾಗದ ಸಮಸ್ಯೆಯನ್ನು ಅವರು ಹೇಗೆ ಬಗೆಹರಿಸುತ್ತಾರೆ, ಈ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು 'ಭೈರಾದೇವಿ' ಕಥೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ.
ಅಗೋರಿ ಹಾಗೂ 'ಭೈರಾದೇವಿ'ಯಾಗಿ ದ್ವಿಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸಿರುವಂತೆ ಕಾಣುತ್ತಿದೆ. ಕನ್ನಡದ 'ಆಪ್ತಮಿತ್ರ' ಹಾಗೂ ತೆಲುಗಿನ 'ಅರುಂಧತಿ' ಸಿನಿಮಾಗಳನ್ನು ನೆನಪಿಸುವಂತಹ ಕೆಲ ಒಳ್ಳೆ ಸನ್ನಿವೇಶಗಳಿವೆ. ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್, ರವಿಶಂಕರ್, ರಂಗಾಯಣ ರಘು, ಮಾಳವಿಕಾ ಅವಿನಾಶ್, ಅನು ಪ್ರಭಾಕರ್ ಸೇರಿ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ. ನಾಲ್ಕೈದು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಭೈರಾದೇವಿ' ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ.

ಫ್ಯಾಮಿಲಿ ಆಡಿಯನ್ಸ್ ಹಾಗೂ ಹಾರರ್ ಸಿನಿಮಾ ಪ್ರಿಯರಿಗೆ 'ಭೈರಾದೇವಿ' ಸಿನಿಮಾ ಇಷ್ಟವಾಗುವಂತಿದೆ. ದಸರಾಗೂ ಒಂದು ವಾರ ಮುನ್ನ ಚಿತ್ರ ತೆರೆಗೆ ಬರ್ತಿದೆ. ಹಾಗಾಗಿ ದಸರಾ ವೀಕೆಂಡ್‌ನಲ್ಲಿ ಫ್ಯಾಮಿಲಿ ಆಡಿಯನ್ಸ್‌ನ ಸೆಳೆಯುವ ಸಾಧ್ಯತೆಯಿದೆ. ರಾಧಿಕಾ ಕುಮಾರಸ್ವಾಮಿ ಜೊತೆಗೆ ರಮೇಶ್ ಅರವಿಂದ್, ರವಿಶಂಕರ್ ಪಾತ್ರಗಳಿಗೂ ಹೆಚ್ಚಿನ ಮಹತ್ವ ಸಿಕ್ಕಿರುವುದು ಗೊತ್ತಾಗುತ್ತಿದೆ. ಇನ್ನೂ ಭೈರಾದೇವಿ ಗೆಟಪ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ಹುಬ್ಬೇರಿಸುವಂತೆ ಕಾಣಿಸಿಕೊಂಡಿದ್ದಾರೆ.
ಜೆ. ಎಸ್ ವಾಲಿ ಛಾಯಾಗ್ರಹಣ, ರವಿವರ್ಮಾ ಸಾಹಸ ಸಂಯೋಜನೆ, ಮೋಹನ್ ಬಿ ಕೆರೆ ಆರ್ಟ್ ವರ್ಕ್, ಕೆ. ಕೆ ಸೆಂಥಿಲ್ ಪ್ರಕಾಶ್ ಸಂಗೀತ 'ಭೈರಾದೇವಿ' ಚಿತ್ರಕ್ಕಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಟ್ರೈಲರ್ ಚೆನ್ನಾಗಿದ್ದರೂ ಹಿನ್ನೆಲೆ ಸಂಗೀತ ಕೈಕೊಟ್ಟಿದೆ. ಇನ್ನು ಇಡೀ ಕಥೆಯನ್ನು ಇಲ್ಲೇ ಹೇಳಿರುವಂತೆ ಕಾಣುತ್ತದೆ. ಇನ್ನು ಸ್ವಲ್ಪ ಶಾರ್ಟ್ ಆಗಿ ಟ್ರೈಲರ್ ಕಟ್ ಮಾಡಿ ಒಳ್ಳೆ ಬಿಜಿಎಂ ಸೇರಿಸಿದ್ದರೆ ಮತ್ತಷ್ಟು ಮಜಾ ಕೊಡುತ್ತಿತ್ತು.
ತಮ್ಮ ಕೊನೆ ಸಿನಿಮಾ ಎನ್ನುವಂತೆ ರಾಧಿಕಾ ಕುಮಾರಸ್ವಾಮಿ ಬಹಳ ಶ್ರಮವಹಿಸಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗಿಗೂ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಆರ್ಮುಗ ರವಿಶಂಕರ್ ಒಂದು ಹಾಡನ್ನು ಹಾಡಿದ್ದಾರೆ. ಅಕ್ಟೋಬರ್ 3ಕ್ಕೆ 'ಭೈರಾದೇವಿ' ಸಿನಿಮಾ ಹೇಗಿದೆ ಎನ್ನುವುದು ತೆರೆಮೇಲೆ ಅನಾವರಣವಾಗಲಿದೆ.


Click it and Unblock the Notifications











