ಶಿವಸೈನ್ಯಕ್ಕೆ ಸಿಹಿಸುದ್ದಿ; ಸೆಂಚುರಿ ಸ್ಟಾರ್ ನಟನೆಯ 'ಭೈರತಿ ರಣಗಲ್' ರಿಲೀಸ್ ಡೇಟ್ ಘೋಷಣೆ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಭೈರತಿ ರಣಗಲ್'. ನರ್ತನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಕೊಂಚ ತಡವಾಗಿ ರಣಗಲ್ ಬರ್ತಿದ್ದಾನೆ.
ಸೂಪರ್ ಹಿಟ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಇದು. ಶ್ರೀಮುರಳಿ ಹೀರೋ ಆಗಿ ನಟಿಸಿದ್ದ ಆ ಚಿತ್ರದಲ್ಲಿ ಶಿವಣ್ಣ ಒಂದು ಪವರ್‌ಫುಲ್ ಪಾತ್ರದಲ್ಲಿ ಅಬ್ಬರಿಸಿದ್ದರು. ಸಿನಿಮಾ ನೋಡಿದ ಮೇಲೆ ರೋರಿಂಗ್ ಸ್ಟಾರ್ ಮರೆಯಾಗಿ 'ಭೈರತಿ ರಣಗಲ್' ಪಾತ್ರ ಹೆಚ್ಚು ಸದ್ದು ಮಾಡಿತ್ತು. ಅದೇ ಸಮಯದಲ್ಲಿ ಪ್ರೀಕ್ವೆಲ್ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಕೊನೆಗೂ ಆ ಸಿನಿಮಾ ತೆರೆಗೆ ಬರುವಂತಾಗಿದೆ.

ಮಾಫಿಯಾ ಡಾನ್ ಭೈರತಿ ರಣಗಲ್ ಹಿನ್ನೆಲೆ ಏನು? ಆತ ಆ ರೀತಿ ಆಗುವುದಕ್ಕೆ ಕಾರಣವೇನು? ಆತ ರಕ್ಷಕನೋ ರಾಕ್ಷಸನೋ? ಎನ್ನುವ ಪ್ರಶ್ನೆಗಳಿಗೆಲ್ಲಾ 'ಭೈರತಿ ರಣಗಲ್' ಚಿತ್ರದಲ್ಲಿ ಉತ್ತರ ಸಿಗಲಿದೆ. ಸಂವಿಧಾನ ರಕ್ಷಣೆ ಮಾಡಬೇಕಾದ ಕಾನೂನು ಕಾಪಾಡಬೇಕಾದ ವಕೀಲ ರಣಗಲ್ ಯಾಕೆ ಅದೇ ಕಾನೂನು ಕೈಗೆತ್ತಿಕೊಳ್ಳುತ್ತಾನೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಇತ್ತೀಚೆಗೆ ಚಿತ್ರದ ಹಾಡೊಂದು ಬಿಡುಗಡೆ ಆಗಿ ಸದ್ದು ಮಾಡಿತ್ತು. ಅದಕ್ಕೂ ಮುನ್ನ ಶಿವಣ್ಣನ ಹುಟ್ಟುಹಬ್ಬಕ್ಕೆ ಟೀಸರ್ ಬಂದು ಧೂಳೆಬ್ಬಿಸಿತ್ತು.
7 ವರ್ಷಗಳ ಹಿಂದೆ ಬಂದಿದ್ದ 'ಮಫ್ತಿ' ಚಿತ್ರವನ್ನು ಪ್ರೇಕ್ಷಕರು ಮರೆತ್ತಿಲ್ಲ. ಅದರಲ್ಲೂ ಶಿವಣ್ಣ ಮಾಡಿದ್ದ ರಣಗಲ್ ಪಾತ್ರ ಅಭಿಮಾನಿಗಳ ನೆನಪಿನಲ್ಲಿ ಉಳಿದುಬಿಟ್ಟಿದೆ. ಹೆಚ್ಚು ಮಾತನಾಡದೇ ಕಣ್ಣಲ್ಲೇ ಕೊಲ್ಲುವ ಶಿವಣ್ಣನ ನಟನೆ ಸಖತ್ ಕಿಕ್ ಕೊಟ್ಟಿತ್ತು. ಇದೀಗ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಚಿತ್ರತಂಡ ಮುಂದಾಗಿದೆ. ನವೀನ್ ಕುಮಾರ್ ಛಾಯಾಗ್ರಹಣ, ರವಿಬಸ್ರೂರು ಸಂಗೀತ ಚಿತ್ರಕ್ಕಿದೆ.
ನರ್ತನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರುಕ್ಮಿಣಿ ವಸಂತ್, ರಾಹುಲ್ ಬೋಸ್, ನಾನಾ ಪಾಟೇಕರ್ ಚಿತ್ರದ ತಾರಾಗಣದಲ್ಲಿದ್ದಾರೆ. ಶ್ರೀಮುರಳಿ, ವಸಿಷ್ಠ ಸಿಂಹ ಪಾತ್ರಗಳು ಇರುತ್ತಾ ಕಾದು ನೋಡಬೇಕಿದೆ. ಇನ್ನು ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ ಸಿನಿಮಾ ನಿರ್ಮಾಣವಾಗಿದೆ. ಸದ್ಯ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಘೋಷಿಸಿದೆ.

ಯಲಹಂಕದಲ್ಲಿರುವ ದಿ ಗೆಲೆರಿಯಾ ಮಾಲ್‌ನಲ್ಲಿ ಬಹಳ ವಿಭಿನ್ನವಾಗಿ 'ಭೈರತಿ ರಣಗಲ್' ರಿಲೀಸ್ ಡೇಟ್ ರಿವೀಲ್ ಮಾಡಲಾಗಿದೆ. ನವೆಂಬರ್ 15ಕ್ಕೆ ರೋಣಾಪುರದ ರಾಕ್ಷಸ ತೆರೆಮೇಲೆ ಎಂಟ್ರಿ ಕೊಡಲಿದ್ದಾನೆ. ಶಿವಣ್ಣ ತಮ್ಮ ಶ್ರೀಮುತ್ತು ನಿವಾಸದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಬಳಿಕ ದಂಪತಿ ಸಮೇತ ಗೆಲೆರಿಯಾ ಮಾಲ್‌ಗೆ ಭೇಟಿ ನೀಡಿ ಅಭಿಮಾನಿಗಳ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದರು. ಇನ್ನು ದೊಡ್ಡಮಟ್ಟದಲ್ಲಿ ಸಿನಿಮಾ ಸ್ವಾಗತಿಸಲು ಅಭಿಮಾನಿಗಳು ಸಿದ್ಧರಾಗುತ್ತಿದ್ದಾರೆ.
'ವೇದ' ಬಳಿಕ ಶಿವಣ್ಣ ಹೋಮ್ ಬ್ಯಾನರ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು. ಅಂದಹಾಗೆ 'ಮಫ್ತಿ' ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಆದರೆ 'ಭೈರತಿ ರಣಗಲ್' ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಯೂಟ್ಯೂಬ್‌ನಲ್ಲಿ ಸಿನಿಮಾ ಭಾರೀ ಸದ್ದು ಮಾಡಿತ್ತು. ಕೆಲ ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇನ್ನು 'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಶಿವಣ್ಣನ ನಟನೆಯನ್ನು ಮೆಚ್ಚಿದವರಿಗೆ 'ಭೈರತಿ ರಣಗಲ್' ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











