Bhairathi Ranagal Trailer: ಬಾಕ್ಸಾಫೀಸ್‌ನಲ್ಲಿ ಹೊಸ ಮೈಲುಗಲ್ಲು ನೆಡಲು ರಣಗಲ್ ಬಂದಾಯ್ತು.. ಆದರೆ..
ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅದನ್ನು ಡಬಲ್ ಮಾಡೋಕೆ ಸದ್ಯ ಟ್ರೈಲರ್ ಬಂದಿದೆ. ಶಿವಣ್ಣನ ಮಾಸ್ ಪರ್ಫಾರ್ಮನ್ಸ್, ನರ್ತನ್ ಟೇಕಿಂಗ್, ಅದ್ಧೂರಿ ಮೇಕಿಂಗ್, ರವಿಬಸ್ರೂರು ಮ್ಯೂಸಿಕ್ ಸೇರಿ ಸಖತ್ ಕಿಕ್ ಕೊಡ್ತಿದೆ.
ನವೆಂಬರ್ 15ಕ್ಕೆ 'ಭೈರತಿ ರಣಗಲ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಟ್ರೈಲರ್ ನೋಡೋಕೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯ್ತಿದ್ರು. ಸದ್ಯ ಆಕ್ಷನ್ ಪ್ಯಾಕ್ಡ್ ಝಲಕ್ ರಿವೀಲ್ ಆಗಿ ಧೂಳೆಬ್ಬಿಸಿದೆ. ಒನ್ಸ್ ಅಗೇನ್ ರಣಗಲ್ ಅವತಾರದಲ್ಲಿ ಶಿವತಾಂಡವ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.

ರೋಣಪುರದಲ್ಲಿ ನೀರಿಗಾಗಿ ಹಾಹಾಕಾರ. ಚಿಕ್ಕಂದಿನಲ್ಲಿ ಇದನ್ನು ನೋಡುತ್ತಾ ಬೆಳೆದ ರಣಗಲ್ ಮುಂದೆ ವಕೀಲನಾಗಿ ಆ ಜನರ ಪರ ನಿಲ್ತಾನೆ. ಊರ ಪಕ್ಕದಲ್ಲೇ ಒಂದು ಕಾರ್ಖಾನೆ. ಅದರಲ್ಲೇ ಕೆಲಸ ಮಾಡಿಕೊಂಡು ಬದುಕುವ ಜನ. ಅವರನ್ನು ಜೀವ ಹಿಂಡುವ ಮಾಲೀಕ. ಆ ಜನರಿಗಾಗಿ ಕಪ್ಪು ಕೋರ್ಟ್ ಕಳಚಿಟ್ಟು ರಣಗಲ್ ಕತ್ತಿ ಹಿಡಿಯುತ್ತಾನೆ. ಹೀಗೆ ಚಿತ್ರದ ಕಥೆ ಸಾಗುತ್ತದೆ ಎನ್ನುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಆದರೆ ಇದೇ ಕಥೆಯಲ್ಲ, ಮುಖ್ಯವಾದ ಕಥೆ ಬೇರೆನೇ ಇದೆ ಎನ್ನುವುದು ಗೊತ್ತಾಗುತ್ತಿದೆ.
ಜಬರ್ದಸ್ತ್ ಡೈಲಾಗ್ಸ್ ಜೊತೆಗೆ ಚಿತ್ರದ ಇಂಟ್ರೆಸ್ಟಿಂಗ್ ಸೀಕ್ವೆನ್ಸ್, ಎಲಿವೇಷನ್ ಸೀನ್ಸ್ ಮಿಕ್ಸ್ ಮಾಡಿ ಟ್ರೈಲರ್ ಕಟ್ ಮಾಡಲಾಗಿದೆ. ಚಿತ್ರದಲ್ಲಿರುವ ಮುಖ್ಯ ಪಾತ್ರಗಳನ್ನು ಪರಿಚಯಿಸುತ್ತಾ ಟ್ರೈಲರ್ ಮುಂದೆ ಸಾಗುತ್ತದೆ. ಆ ಕಾರ್ಖಾನೆಯ ಮಾಲೀಕನ ವಿರುದ್ಧವೇ ನಾಯಕ ಸಮರ ಮುಂದುವರೆಯುತ್ತದೆ. ಮುಂದೆ ತನ್ನದೇ ಮಾಫಿಯಾ ಸಾಮ್ರಾಜ್ಯ ಸೃಷ್ಟಿಸಿಕೊಂಡು ರಣಗಲ್ ಜನರ ಪರ ನಿಲ್ಲುತ್ತಾನೆ. ಕೆಟ್ಟವರಿಗೆ ಕೆಟ್ಟವನಾಗಿ ಶಿಕ್ಷೆ ಕೊಡುತ್ತಾ ಒಳ್ಳೆಯವರಿಗೆ ಒಳ್ಳೆಯವನಾಗಿ ಕಾಯುತ್ತಾನೆ.

'ಬಘೀರ' ಚಿತ್ರದಲ್ಲಿ ವೈದ್ಯೆ ಆಗಿ ನಟಿಸಿದ್ದ ರುಕ್ಮಿಣಿ ಈ ಚಿತ್ರದಲ್ಲೂ ವೈದ್ಯೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಾರ್ಖಾನೆಯ ಮಾಲೀಕ ವೈಟ್ ಕಾಲರ್ ಕ್ರಿಮಿನಲ್ ಆಗಿ ರಾಹುಲ್ ಬೋಸ್ ಅಬ್ಬರಿಸಿದ್ದಾರೆ. ಇನ್ನುಳಿದಂತೆ ಭ್ರಷ್ಟ ರಾಜಕಾರಣಿಯಾಗಿ ಅವಿನಾಶ್, ಕಾರ್ಖಾನೆಯ ಕಾರ್ಮಿಕನಾಗಿ ಗೋಪಾಲಕೃಷ್ಣ ದೇಶಪಾಂಡೆ ಅವರನ್ನು ನೋಡಬಹುದು. ರಣಗಲ್ ಸಹೋದರಿ ಪಾತ್ರದಲ್ಲಿ ಛಾಯಾ ಸಿಂಗ್ ಮುಂದುವರೆದಿದ್ದಾರೆ.
ಕಥೆಯನ್ನು ಹೆಚ್ಚು ರಿವೀಲ್ ಮಾಡದೇ 'ಭೈರತಿ ರಣಗಲ್' ಟ್ರೈಲರ್‌ನಲ್ಲಿ ಎಚ್ಚರ ವಹಿಸಿದ್ದಾರೆ ನರ್ತನ್. ಅಭಿಮಾನಿಗಳಿಗೆ ಟ್ರೈಲರ್ ಬಹಳ ಇಷ್ಟವಾಗ್ತಿದೆ. ಪದೇ ಪದೇ ನೋಡಿ ಥ್ರಿಲ್ಲಾಗುತ್ತಿದ್ದಾರೆ. "ಇನ್ಮೇಲಿಂದ ರೋಣಪುರದಲ್ಲಿ ಇರೋದು ಸರ್ವೇ ಕಲ್ಲುಗಳಲ್ಲ.. ರಣಗಲ್ ಸಾಮ್ರಾಜ್ಯದ ಮೈಲಿಗಲ್ಲುಗಳು" ಎನ್ನುವ ಡೈಲಾಗ್ ಸಿನಿರಸಿಕರ ಮನಗೆದ್ದಿದೆ.
ನವೀನ್ ಕುಮಾರ್ ಛಾಯಾಗ್ರಹಣ ಸೊಗಸಾಗಿದೆ. ಅದರಲ್ಲೂ ಕೆಲ ಕ್ಯಾಮರಾ ಆಂಗಲ್‌ಗಳು ಹುಬ್ಬೇರಿಸವಂತಿದೆ. ಕಲರ್ ಗ್ರೇಡಿಂಗ್ ಕೂಡ ಚೆನ್ನಾಗಿದೆ. ಆದರೆ ಕೆಲವೊಮ್ಮೆ ಅದೇ ಧೂಳು, ಅದೇ ಮೈನಿಂಗ್ ಸನ್ನಿವೇಶಗಳು ಬೇಸರ ಮೂಡಿಸುತ್ತದೆ. ರವಿಬಸ್ರೂರು ಬಿಜಿಎಂ ಹಿನ್ನೆಲೆಯಲ್ಲಿ ಇಂತಹ ದೃಶ್ಯಗಳನ್ನು ಎಲ್ಲೋ ನೋಡಿದ್ದೀವಿ ಅಂತ ಎನಿಸದೇ ಇರದು. ಆದರೆ 'KGF' ಸರಣಿಗೂ ಮುನ್ನ 'ಮಫ್ತಿ' ಸಿನಿಮಾ ಬಂದಿತ್ತು ಎನ್ನುವುದನ್ನು ಯಾರೂ ಮರೆಯುವಂತಿಲ್ಲ.
ಮೇಕಿಂಗ್, ಶಿವಣ್ಣನ ಲುಕ್ಸ್, ಖದರ್ ಎಲ್ಲಾ ಓಕೆ, ಆದರೆ ಕಥೆಯಲ್ಲಿ ಹೊಸತನ ಇದ್ದರೆ 'ಭೈರತಿ ರಣಗಲ್' ಬ್ಲಾಕ್‌ಬಸ್ಟರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ. ಇಲ್ಲದಿದ್ದರೆ ಆವರೇಜ್ ಎನಿಸಿಕೊಳ್ಳುವ ಸಾಧ್ಯತೆಯಿದೆ. ಅಭಿಮಾನಿಗಳಂತೂ ಟ್ರೈಲರ್ ನೋಡಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡೋದು ಅಂತ ಫಿಕ್ಸ್ ಆಗಿಬಿಟ್ಟಿದ್ದಾರೆ. ಅಲ್ಲಿಗೆ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಗುವುದು ಗ್ಯಾರೆಂಟಿ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ವತಃ ಶಿವರಾಜ್‌ಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











