ಆಗಸ್ಟ್ 15.. ರಣ ರಣ ಅಖಾಡ.. ಪುಷ್ಪ 02 - ಸಿಂಗಂ ಅಗೇನ್ ಜೊತೆ ಭೈರತಿ ರಣಗಲ್ ..!
ಕೆಲ ಸಿನಿಮಾಗಳ ಪಾತ್ರಗಳೇ ಹಾಗೆ. ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡುತ್ತಾ ಮನಸೊಳಗೇ ಕೂತು ಬಿಡುತ್ತವೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಪಾತ್ರವೂ ಅಂಥಾದ್ದೇ. ಒಂದು ಮಾಸಲು ಲುಂಗಿ, ಕಪ್ಪು ಬಣ್ಣದ ಮುದುರು ಮುದುರಾದ ಅಂಗಿ ಮತ್ತು ತಣ್ಣಗೆ ಅಬ್ಬರಿಸೋ ಶೈಲಿ...
ಇಷ್ಟೆಲ್ಲ ಗುಣಲಕ್ಷಣಗಳೊಂದಿಗೆ ಪ್ರಸಿದ್ಧಿಯಾಗಿದ್ದ ಪಾತ್ರ ಭೈರತಿ ರಣಗಲ್ ಈಗ ಚಿತ್ರದ ಸ್ವರೂಪ ಪಡೆದ ವಿಚಾರ ನಿಮಗೆ ಗೊತ್ತೇ ಇದೆ. ಸದ್ಯದ ಸಮಾಚಾರ ಏನೆಂದರೆ ಭೈರತಿ ರಣಗಲ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ವರ್ಷದ ಸ್ವಾತಂತ್ರೋತ್ಸವಕ್ಕೆ ಚಿತ್ರ ತೆರೆಗೆ ಬರಲಿದೆ.

ಭೈರತಿ ರಣಗಲ್ ಬಿಡುಗಡೆಯಾಗ್ತಿರುವ ದಿನದಂದೇ, ಪುಷ್ಪಾ 02 ಹಾಗೂ ಸಿಂಗಂ ಅಗೇನ್ ಅಕ್ಕ ಪಕ್ಕದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿವೆ. ಈ ಅರ್ಥದಲ್ಲಿ ಘಟಾನುಘಟಿಗಳ ನಡುವಿನ ತ್ರಿಕೋನ ಸ್ಪರ್ಧೆ ಎನ್ನಲು ಅಡ್ಡಿ ಇಲ್ಲ.
ಇನ್ನೂ ಪುಷ್ಪಾ -02 ಪ್ಯಾನ್ ಇಂಡಿಯಾ ಸಿನಿಮಾ. ಮೊದಲ ಭಾಗ ನೋಡಿದವರು ಎರಡನೇ ಭಾಗಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಕೇವಲ ದಕ್ಷಿಣ ಅಷ್ಟೇ ಅಲ್ಲ ಉತ್ತರದಲ್ಲಿಯೂ ಪುಷ್ಪಾ ಹವಾ ಇದೆ. ಇನ್ನೂ ಕರ್ನಾಟಕದ ವಿಚಾರಕ್ಕೆ ಬಂದರೆ ಇಲ್ಲಿಯೂ ಪುಷ್ಪಾ ಧ್ಯಾನವನ್ನ ಮಾಡುತ್ತಿರುವ ಬಹುದೊಡ್ಡ ವರ್ಗವೇ ಕಣ್ಣಿಗೆ ಕಾಣಿಸುತ್ತೆ.

ಪುಷ್ಪಾ 02 ಹೊರತು ಪಡಿಸಿದರೆ, ಅವತ್ತು ಬಿಡುಗಡೆಯಾಗ್ತಿರುವ ಸಿಂಗಂ ಅಗೇನ್ ಸಿನಿಮಾದ ಮೇಲೆ ಆಗ್ಲೇ ನಿರೀಕ್ಷೆಗಳು ಗರಿಗೇದರಿವೆ. ಅಜಯ್ ದೇವಗನ್ ಹಾಗೂ ರೊಹೀತ್ ಶೆಟ್ಟಿಯ ಈ ಸಿನಿಮಾ ಹಿಂದಿನ ಸಿಂಗಂ ಫ್ರಾಂಚೈಸಿಗಳ ದಾಖಲೆಯನ್ನ ಪುಡಿ ಮಾಡುವ ವಿಶ್ವಾಸವೂ ಇದೆ. ಇನ್ನೂ ಈ ಬಾರಿ ಇಲ್ಲಿ ಅಜಯ್ ದೇವಗನ್ ಮಾತ್ರ ಇಲ್ಲ. ಕರಿನಾ ಕಪೂರ್ , ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಅರ್ಜುನ್ ಕಪೂರ್, ಟೈಗರ್ ಶ್ರಾಫ್ ಹೀಗೆ ದೊಡ್ಡ ತಾರಾಬಳಗ ಇದೆ.
ಪುಷ್ಪಾ 02 ಹಾಗೂ ಸಿಂಗಂ ಅಗೇನ್ ಚಿತ್ರಗಳನ್ನ ಹೊರತು ಪಡಿಸಿದರೆ ಈ ವರ್ಷದ ಸ್ವಾತಂತ್ರೋತ್ಸವಕ್ಕೆ ದಳಪತಿ ವಿಜಯ್ ಅಭಿನಯದ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ ಕೂಡ ಬಿಡುಗಡೆಯಾಗುವ ಎಲ್ಲ ಸಾಧ್ಯತೆ ಇದೆ. ಇನ್ನೂ ಈ ರಣ ರಣ ಅಖಾಡಕ್ಕೆ ಕೊನೆ ಕ್ಷಣದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ಧುಮುಕಬಹುದು. ತಮ್ಮ 'ವೆಟ್ಟೈಯನ್' ಸಿನಿಮಾವನ್ನ ಬಿಡುಗಡೆ ಮಾಡಿದರು ಮಾಡಬಹುದು.

ಇವೆಲ್ಲ ಕಾರಣಗಳಿಂದ ಈಗಾಗಲೇ ಸ್ವಾತಂತ್ರೋತ್ಸವದಂದು ನಡೆಯಲಿರುವ ಈ ಸಿನಿ ಸಮರ ಕುತೂಹಲವನ್ನ ಕೆರಳಿಸಿತ್ತು. ಯಾರಾದರೂ ಮುಂದಿಟ್ಟ ಹೆಜ್ಜೆಯನ್ನ ಹಿಂದಿಡುವ ಮನಸ್ಸು ಮಾಡ್ತಾರಾ ಅನ್ನುವ ಪ್ರಶ್ನೆ ಇತ್ತು. ಹೀಗಿರುವಾಗ ಆಗಸ್ಟ್ 15ರ ಸಿನಿ ಸಮರಕ್ಕೆ ಭೈರತಿ ರಣಗಲ್ ಎಂಟ್ರಿಯಾಗಿದೆ. ಸ್ಪರ್ಧೆ ಈಗ ಇನ್ನೂ ರೋಚಕವಾಗಿದೆ.
ಒಟ್ಟಿನಲ್ಲಿ ಹಬ್ಬ ಹರಿದಿನಕ್ಕೆ, ಸ್ವಾತಂತ್ರೋತ್ಸವಕ್ಕೆ, ಗಣರಾಜೋತ್ಸವಕ್ಕೆ, ಕನ್ನಡ ಚಿತ್ರ ಬಿಡುಗಡೆಯಾಗುವುದು ತೀರಾ ವಿರಳ. ಅದಕ್ಕೆ ಕಾರಣ ಪರಭಾಷೆ ಸಿನಿಮಾಗಳ ಹಾವಳಿ. ಇನ್ನೂ ಕರ್ನಾಟಕದಲ್ಲಿನ ಅಷ್ಟೂ ಮಲ್ಟಿಫ್ಲೆಕ್ಸ್‌ಗಳಿಗೆ ಪರಭಾಷಾ ಚಿತ್ರಗಳ ಮೇಲೇ ಪ್ರೀತಿ. ಥೇಟರುಗಳಲ್ಲಿಯೂ ಪರಭಾಷಾ ಚಿತ್ರಗಳದ್ದೇ ಹಾವಳಿ. ಈ ವರ್ಷವೂ ಈ ಹಾವಳಿ ಮುಂದುವರೆದಿದೆ. ಆದರೆ ಈ ವರ್ಷ ಈ ಹಾವಳಿಗೆ ಕರ್ನಾಟಕದಲ್ಲಿ ಕಡಿವಾಣ ಹಾಕಲು ಭೈರತಿ ರಣಗಲ್ ಪ್ಲ್ಯಾನ್ ಮಾಡಿದಂತೆ ಇದೆ.


Click it and Unblock the Notifications











