ಕಮಲ ಮಹಲ್, ಸೋಲ್ಜರ್ 'ಭೈರವ'; ಏನ್ ಪಾಠ ಹೇಳ್ತಿದ್ದಾರೆ ಹೇಮಂತ್ ರಾವ್?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಇನ್ನು ಎರಡು ದಿನ ಬಾಕಿಯಿದೆ. ಆದರೆ ಈಗಾಗಲೇ ಸೆಲೆಬ್ರೇಷನ್ ಶುರುವಾಗಿಬಿಟ್ಟಿದೆ. ಶಿವಣ್ಣನ ಮುಂದಿನ ಸಿನಿಮಾಗಳ ಚಿತ್ರತಂಡಗಳಿಂದ ಸರ್‌ಪ್ರೈಸ್‌ಗಳು ಒಂದೊಂದಾಗಿ ಹೊರ ಬರ್ತಿದೆ. ಸದ್ಯ 'ಭೈರವನ ಕೊನೆ ಪಾಠ' ಸಿನಿಮಾ ಖಡಕ್ ಪೋಸ್ಟರ್‌ಗಳು ಹೊರ ಬಂದಿದೆ.
'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿ ಹೇಮಂತ್ ರಾವ್ ಕಟ್ಟಿಕೊಡುತ್ತಿರುವ ಸಿನಿಮಾ 'ಭೈರವನ ಕೊನೆ ಪಾಠ'. ಶಿವಣ್ಣ- ಹೇಮಂತ್ ಕಾಂಬಿನೇಷನ್ ಇನ್ನಿಲ್ಲದ ನಿರೀಕ್ಷೆ ಹುಟ್ಟಾಕ್ಕಿದೆ. ಅದಕ್ಕೆ ತಕ್ಕಂತೆ ವಿಭಿನ್ನ ಟೈಟಲ್‌ನಲ್ಲಿ ಹೊಸ ಸಿನಿಮಾ ನಿರ್ಮಾಣವಾಗಲಿದೆ. ಅಧಿಕೃತವಾಗಿ ಪೋಸ್ಟರ್, ಟೈಟಲ್ ಸಮೇತ ಸಿನಿಮಾ ಘೋಷಣೆ ಆಗಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.

ಸದ್ಯ ರಿವೀಲ್ ಆಗಿರುವ ಪೋಸ್ಟರ್‌ಗಳು ಅಭಿಮಾನಿಗಳ ಮನಗೆದ್ದಿದೆ. ವಯಸ್ಸಾದ ಸೋಲ್ಜರ್ 'ಭೈರವ'ನನ್ನು ಕಂಡು ಸಿನಿರಸಿಕರು ಹುಬ್ಬೇರಿಸಿದ್ದಾರೆ. ಜಬರ್ದಸ್ತ್ ಪೋಸ್ಟರ್ ನೋಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಶಿವಣ್ಣ ದಟ್ಟವಾದ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೋಸ್ಟರ್‌ಗಳು ಇದು ಐತಿಹಾಸಿಕ ಕಥಾಹಂದರದ ಸಿನಿಮಾ ಎನ್ನುವುದನ್ನು ಸಾರಿ ಹೇಳುವಂತಿದೆ. ಈಗಾಗಲೇ ಅಭಿಮಾನಿಗಳು ಪೋಸ್ಟರ್ ಚಿಂದಿ, ಸೈಕ್, ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರು ಏನಪ್ಪಾ ಭೈರವ ಕೊನೆ ಪಾಠ, ಯಾರೀತಾ? ಯಾವ ಜಾನರ್ ಕಥೆ ಇದು? ಶಿವಣ್ಣನ ಪಾತ್ರ ಏನು ಎಂದು ಪೋಸ್ಟರ್ ನೋಡಿ ಊಹಿಸಲರ ಆರಂಭಿಸಿದ್ದಾರೆ. ಒಂದು ಪೋಸ್ಟರ್‌ನಲ್ಲಿ ಬಹಳ ವಯಸ್ಸಾದ ಭೈರವನನ್ನು ನೋಡಬಹುದು. ಮತ್ತೊಂದರಲ್ಲಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಸ್ಟೈಲಿಶ್ ಆಗಿ ಹಳೇ ಕಾಲದ ಟೆಲಿಸ್ಕೋಪ್ ಹಿಡಿದ ಭೈರವನ ದರ್ಶನವಾಗಿದೆ.
ಸಾಮಾನ್ಯವಾಗಿ ಸಮುದ್ರಯಾನದ ವೇಳೆ ಇಂತಹ ಟೆಲಿಸ್ಕೋಪ್‌ಗಳನ್ನು ಬಳಸುತ್ತಿದ್ದರು. ಇನ್ನು ಸೈನಿಕನಂತೆ ಕಾಣುವ ಭೈರವನ ಪೋಷಾಕು, ಬತ್ತಳಿಕೆ ಬಾಣ ಎಲ್ಲವರೂ ಇದು ದಶಕಗಳ ಹಿಂದಿನ ಕಥೆ ಎನ್ನುವುದನ್ನು ಸಾರಿ ಹೇಳುವಂತಿದೆ. ಇಂಟ್ರೆಸ್ಟಿಂಗ್ ಅಂದರೆ ಈ ಪೋಸ್ಟರ್‌ನಲ್ಲಿ ಹಂಪಿಯ ಕಮಲ ಮಹಲ್ ನೆನೆಪಿಸುವ ಕಟ್ಟಡವನ್ನು ನೋಡಬಹುದು. ಹಾಗಾಗಿ ಹಂಪಿಯ ಹಿನ್ನೆಲೆಯಲ್ಲಿ ಏನಾದರೂ ಕಥೆ ಹೇಳುತ್ತಿದ್ದಾರಾ? ಎನ್ನುವ ಲೆಕ್ಕಾಚಾರ ಕೆಲವರದ್ದು. ಭೈರವ ಯಾವುದೋ ರಾಜ್ಯದ ಸೇನಾಪತಿ ರೀತಿ ಕಾಣುತ್ತಿದ್ದಾನೆ ಎಂದು ಕಾಮೆಂಟ್ ಮಾಡುವವರು ಇದ್ದಾರೆ.

ಒಟ್ಟಾರೆ ಹಳೇ ನೌಕಾದಳದ ಸೈನಿಕ ಭೈರವನ ಕಥೆ ಇದು ಎಂದು ಕೆಲವರು ಊಹಿಸುತ್ತಿದ್ದಾರೆ. ನಿರ್ಮಾಪಕ ವೈಶಾಖ್ ಜೆ ಗೌಡ 'ಭೈರವನ ಕೊನೆಪಾಠ' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಮೂಡಿ ಬರಲಿದೆ. ಕನ್ನಡ ಸೇರಿದಂತೆ ದಕ್ಷಿಣದ 4 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ', 'ಸಪ್ತ ಸಾಗರದಾಚೆ ಎಲ್ಲೋ' ಹೀಗೆ ಪ್ರತಿ ಚಿತ್ರಕ್ಕೂ ವಿಭಿನ್ನ ಟೈಟಲ್‌ಗಳನ್ನು ಹೇಮಂತ್ ಇಟ್ಟಿದ್ದರು. ಇದೀಗ 'ಭೈರವನ ಕೊನೆ ಪಾಠ' ಎನ್ನುವ ಟೈಟಲ್ ಮೂಲಕ ಮತ್ತೆ ಕುತೂಹಲ ಕೆರಳುವಂತೆ ಮಾಡಿದ್ದಾರೆ. ಈ ಹಿಂದೆ ಟೈಟಲ್ ಪೋಸ್ಟರ್‌ನಲ್ಲಿ ಬೆಟ್ಟದ ನಡುವೆ ಗಿಡದಲ್ಲಿ ಅರಳಿದ ಹೂವಿನ ಸುತ್ತಾ ಬಾಣಗಳು ಇರುವುದನ್ನು ತೋರಿಸಲಾಗಿತ್ತು. ಹೂವು ಶಾಂತಿ, ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಚಿತ್ರದಲ್ಲಿ ಒಂದು ಪ್ರೀತಿಯ ಕಥೆ ಕೂಡ ಇರಲಿದೆ ಎನ್ನುವುದು ಗೊತ್ತಾಗುತ್ತಿದೆ.


Click it and Unblock the Notifications











