»   » ಆಧುನಿಕ ಜನಪದ ಕಲೆ ಯಾವುದು ಗೊತ್ತೆ? ಗೊತ್ತಿಲ್ಲದಿದ್ದರೆ ಭರಣರ ಕೇಳಿ...

ಆಧುನಿಕ ಜನಪದ ಕಲೆ ಯಾವುದು ಗೊತ್ತೆ? ಗೊತ್ತಿಲ್ಲದಿದ್ದರೆ ಭರಣರ ಕೇಳಿ...

Subscribe to Filmibeat Kannada

ಬೆಂಗಳೂರು: ಜನಪದದ ಆಧುನಿಕ ಕಲೆ ಯಾವುದೆಂದು ನಿಮಗೆ ಗೊತ್ತೆ ? ಏನು ಜನಪದದಲ್ಲಿ ಆಧುನಿಕ ಕಲೆಯೇ! ಅಲ್ಲ .. ಆಧುನಿಕತೆಯ ಹುಚ್ಚಿನಲ್ಲಿ ಶ್ರೀಮಂತ ಜಾನಪದ ಕಲೆ ನಶಿಸುತ್ತಿರುವಾಗ ಜನಪದದಲ್ಲಿ ಆಧುನಿಕ ಕಲೆ ಉದಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತೀರಾ? ಇದಕ್ಕೆ ಖ್ಯಾತ ಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಉತ್ತರಿಸುತ್ತಾರೆ.

ಭರಣರ ಪ್ರಕಾರ ಸಿನಿಮಾ ಒಂದು ಆಧುನಿಕ ಜನಪದ ಕಲೆ. ಕನ್ನಡ ಸಾಹಿತ್ಯ ಪರಂಪರೆಗೆ 2000 ವರ್ಷಗಳ ಇತಿಹಾಸ ಇದೆ. ಕನ್ನಡ ಸಿನಿಮಾ ಜಗತ್ತು ಈ ಸಾಹಿತ್ಯ ಸಂಜೀವನಿಯನ್ನು ಹೀರಿಕೊಂಡು ಪ್ರತಿಸೃಷ್ಟಿಯ ಕಾರ್ಯದಲ್ಲಿ ಬ್ರಹ್ಮರಾಕ್ಷಸನಂತೆ ಬೆಳೆದು ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹೀಗಾಗಿ ಸಿನಿಮಾ ಆಧುನಿಕ ಜನಪದ ಕಲೆ.

ಸಿನಿಮಾ ಮತ್ತು ಸಾಹಿತ್ಯ ಕುರಿತು ರಾಜಾಜಿನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಮಾಲೆಯಲ್ಲಿ ಮಾತನಾಡುತ್ತಿದ್ದ ಅವರು, ಈಹೊತ್ತು ಕನ್ನಡ ಚಿತ್ರ ನಿರ್ದೇಶಕರು ಸಾಹಿತ್ಯ ಶುದ್ಧತೆಯನ್ನು ಬಿಟ್ಟು ಕಮರ್ಷಿಯಲ್‌ ಮನೋಭಾವಕ್ಕೆ ಒತ್ತುಕೊಟ್ಟಿರುವುದರಿಂದ ಒಳ್ಳೆಯ ಸದಭಿರುಚಿಯ ಚಿತ್ರಗಳು ಬಾರದೆ, ರೀಮೇಕ್‌ ಹಾವಳಿ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಸಾಹಿತ್ಯ ಏಕವ್ಯಕ್ತಿ ನಿರ್ಮಾಣದ ಕಲೆಯಾದರೆ, ಸಿನಿಮಾ ಬಹುಮುಖಿ ವ್ಯವಸ್ಥೆಯ ಕಲೆ, ಹೊಸ ಪ್ರಯೋಗ, ಕಲಾತ್ಮಕ ಅಂಶಗಳ ಮನೋಭಾವ, ಸಮಷ್ಟಿ ಪ್ರಜ್ಞೆ, ಬೌದ್ಧಿಕ ಆಲೋಚನೆ ಗುಣಾವಗುಣ ಸಂಬಂಧ, ಸಾಮಾಜಿಕ ಕಾಳಜಿಯನ್ನು ಸಿನಿಮಾ ತನ್ನ ಅಸ್ತಿತ್ವದಲ್ಲಿ ಉಳಿಸಿಕೊಳ್ಳಬೇಕೆಂದು ಅವರು ಹೇಳಿದರು.

ಸಿನಿಮಾ ಇಂದು ರಿಮೇಕ್‌ ಹಾವಳಿಗೆ ತುತ್ತಾಗಿದೆ ಎಂಬುದು ನಿಜ. ಆದರೆ, ಸಿನಿಮಾ ಒಂದು ಆಧುನಿಕ ಜನಪದ ಕಲೆ ಎಂಬುದನ್ನು ನೀವು ಒಪ್ಪುತ್ತೀರಾ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada