ವಿಷ್ಣು ಅಭಿಮಾನಿಗಳ ಮೇಲೆ ಭಾರತಿ ಅವರಿಗೇಕೆ ಇಷ್ಟೊಂದು ಕೋಪ.?
Recommended Video

ಸೆಪ್ಟೆಂಬರ್ 18 ರಂದು ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಪ್ರತಿವರ್ಷವೂ ಆ ದಿನವನ್ನ ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತಾರೆ ಅಭಿಮಾನಿಗಳು ಮತ್ತು ಕುಟುಂಬದವರು. ಈ ವರ್ಷವೂ ಅದು ಮುಂದುವರೆಯಲಿದೆ.
ಈ ಖುಷಿಯಲ್ಲೂ ಭಾರತಿ ಅವರಲ್ಲಿ ಒಂದಿಷ್ಟು ಬೇಸರ, ನೋವು ತುಂಬಿದೆ. ಇದನ್ನ ಸುದ್ದಿಗೋಷ್ಠಿಯಲ್ಲಿ ಹೊರಹಾಕಿದ್ದಾರೆ. ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಭಾರತಿ ಅವರ ಪ್ರೆಸ್ ಮೀಟ್ ಆಯೋಜನೆ ಮಾಡಿದ್ದರು. ಈ ವೇಳೆ ಅಭಿಮಾನಿಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
'ಯಜಮಾನ್ರ ಹೆಸರಿನಲ್ಲಿ ಕಾರ್ಯಕ್ರಮಗಳನ್ನ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಸ್ಮಾರಕ ವಿಚಾರದಲ್ಲೂ ಯಾರೋ ಕಾಣದ ಕೈಗಳು ಅಡ್ಡಿ ಪಡಿಸುತ್ತಿದೆ' ಎಂದು ಕಿಡಿಕಾರಿದ್ದಾರೆ. ಅಷ್ಟಕ್ಕೂ, ವಿಷ್ಣು ಫ್ಯಾನ್ಸ್ ಮೇಲೆ ಭಾರತಿಗೇಕೆ ಇಷ್ಟು ಕೋಪ.? ಮುಂದೆ ಓದಿ.....

ಯಜಮಾನ್ರ ಹೆಸ್ರಲ್ಲಿ ಕಾರ್ಯಕ್ರಮ ಬೇಕಾಗಿಲ್ಲ
'ನಮ್ಮ ಯಜಮಾನರು ಬದುಕಿದ್ದಾಗ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಇಷ್ಟಪಡುತ್ತಿರಲಿಲ್ಲ. ತಮ್ಮ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಡಿ ಅಂತ ಹೇಳುತ್ತಿದ್ದರು. ಆದರೆ, ಈಗ ಅವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲವರಿಗೆ ಹೊಟ್ಟೆ ತುಂಬುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಹೇಳುವ ಮೂಲಕ ಭಾರತಿ ವಿಷ್ಣುವರ್ಧನ್ ತಮ್ಮಲ್ಲಿದ್ದ ಬೇಸರವನ್ನ ಹೊರಹಾಕಿದರು.

ಸ್ಮಾರಕಕ್ಕೆ ವಿಘ್ನ ಎಲ್ಲಿ ಆಗ್ತಿದೆ.?
ಇನ್ನು ವಿಷ್ಣುವರ್ಧನ್ ಅವರ ಸ್ಮಾರಕ ಯಾವಾಗ ಎಂದರೇ ಭಾರತಿ ಅವರಿಂದ ಅಥವಾ ಅಳಿಯ ಅನಿರುದ್ಧ್ ಅವರಿಂದ ಯಾವುದೇ ನಿಖರವಾದ ಉತ್ತರವಿಲ್ಲ. 'ಸ್ಮಾರಕ ವಿಚಾರದಲ್ಲಿ ಯಾವುದೇ ಕಾಣದ ಕೈಗಳು ಕಾರಣ ಎಂದು ಅನಿರುದ್ಧ ಆರೋಪ ಮಾಡಿದರು. ಇದುವರೆಗೂ ಆರು ಮಂದಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಆದರೂ ಸ್ಮಾರಕದ ಬಗ್ಗೆ ಸ್ಪಷ್ಟ ಅಭಿಪ್ರಾಯ ಮೂಡುತ್ತಿಲ್ಲ. ಕಾಣದ ಕೈಗಳಿಂದಾಗಿ ಸ್ಮಾರಕಕ್ಕೆ ಅಡ್ಡಿಯಾಗಿದೆ. ಆ ಕೈಗಳು ಯಾವುವು ಎನ್ನುವುದನ್ನು ಹೇಳುವುದಕ್ಕೆ ಆಗುವುದಿಲ್ಲ'' ಎಂದರು.

ಕಾಯುವ ತಾಳ್ಮೆ ಇಲ್ಲ
'ವಿಷ್ಣು ಸ್ಮಾರಕ ಮತ್ತೆ ಮತ್ತೆ ವಿಳಂಬವಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಒಂಥರಾ ಸಮಸ್ಯೆ ಆಗಿತ್ತು. ಈಗ ಮೈಸೂರಿನಲ್ಲಿ ಮತ್ತೊಂದು ರೀತಿ ಸಮಸ್ಯೆ. ಸರ್ಕಾರ ಮನಸ್ಸು ಮಾಡಿದ್ರೆ ಕ್ಷಣ ಮಾತ್ರದಲ್ಲಿ ಗೊಂದಲ ಬಗೆಹರಿಸಬಹುದು. ಆದ್ರೆ, ಅದ್ಯಾಕೋ ಮುಂದಾಗುತ್ತಿಲ್ಲ. ಇದೊಂದು ಸಲ ನೋಡೋಣ. ಆಮೇಲೆ ಬೇರೆಯದ್ದೇ ಮಾಡೋಣ' ಎಂದು ಭಾರತಿ ಬೇಸರ ವ್ಯಕ್ತಪಡಿಸಿದರು.

ಸ್ಮಾರಕದ ಪ್ಲಾನ್ ನಾನೇ ಹೇಳ್ತೀನಿ
'ಒಂದು ವೇಳೆ ಸರ್ಕಾರ ಈ ಸಲ ಯಾವುದೇ ರೀತಿಯ ನಿರ್ಧಾರ ಮಾಡಿಲ್ಲ ಅಂದ್ರೆ, ನಾನೇ ಖುದ್ದು ಒಂದು ಯೋಜನೆ ಮಾಡಿದ್ದೀನಿ. ಅದನ್ನ ನಿಮ್ಮ ಮುಂದೆ ಇಡ್ತೀನಿ. ನಿಮ್ಮ ಸಲಹೆ ಕೊಡಿ, ಆಮೇಲೆ ನಾವೇ ಮಾಡ್ತೀವಿ. ಆ ಪ್ಲಾನ್ ಏನು ಎಂಬುದನ್ನ ಆಮೇಲೆ ಹೇಳ್ತೀವಿ' ಎಂದು ಭಾರತಿ ಅವರು ಕುತೂಹಲ ಮೂಡಿಸಿದ್ದಾರೆ.

ವಿಷ್ಣು ಹಬ್ಬದ ಪ್ರಯುಕ್ತ
ಸೆಪ್ಟಂಬರ್ 18 ವಿಷ್ಣು ದಾದಾ ಹುಟ್ಟುಹಬ್ಬ. ಇದೇ ತಿಂಗಳ 14ನೇ ತಾರೀಕು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಅವರು 'ಹೃದಯ ಗೀತೆ' ಎಂದು ಆಚರಿಸುತ್ತಿದ್ದು ಹೃದಯ ತೊಂದರೆ ಇರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.


Click it and Unblock the Notifications











