»   » ಕನ್ನಡ ನಿರ್ಮಾಪಕರಿಗೆ ಭಾರತಿ ಯಾಕೆ ಭಾರವಾದರು?

ಕನ್ನಡ ನಿರ್ಮಾಪಕರಿಗೆ ಭಾರತಿ ಯಾಕೆ ಭಾರವಾದರು?

By: *ಎಂ. ವಿನೋದಿನಿ
Subscribe to Filmibeat Kannada

ಯಜಮಾನ ಗೆದ್ದಿರಬಹುದು. ಹಾಗಂತ ಯಜಮಾನ್ತಿ ಹೆಮ್ಮೆಯಿಂದ ಬೀಗುತ್ತಿಲ್ಲ . ಭಾರತಿ ಇವೆಲ್ಲವನ್ನೂ ಮೀರಿ ನಿಂತಂತೆ ಕಾಣಿಸ್ತಾರೆ. ವಯಸ್ಸಿಗೆ ಮೀರಿದ ವೈರಾಗ್ಯ ಬೆಳೆಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಪಂಡರಾಪುರಕ್ಕೆ ಪ್ರವಾಸ, ಕೆಲವು ವರ್ಷದ ಹಿಂದೆ ಮುಡಿಯನ್ನು ದೇವರಿಗೆ ಅರ್ಪಿಸಿದ್ದೂ ಉಂಟು. ವಿಷ್ಣುವರ್ಧನ್‌ ಇತ್ತೀಚೆಗೆ ನವರತ್ನ ಹಾರ, ಪರಮಾತ್ಮನ ಕೃಪೆ, ಸೋಲು ಗೆಲವನ್ನು ಮೀರಿದ ನಿರ್ಲಿಪ್ತತೆಯ ಬಗ್ಗೆ ಮಾತನಾಡುತ್ತಿದ್ದರೆ, ಭಾರತಿ ವರ್ಷಗಳ ಹಿಂದೆಯೇ ಈ ಸಾಧನೆ ಮಾಡಿದ್ದಾರೆ. ಆ ಮಟ್ಟಿಗೆ ಭಾರತಿ ಗಂಡನ ತಕ್ಕ ಹೆಂಡತಿ. ಮನೆಯಲ್ಲಂತೂ ಸದಾ ಪೂಜೆ ಪುನಸ್ಕಾರ.

ಮೊನ್ನೆ , ಅಪರೂಪಕ್ಕೆ ಜಿಲ್ಲಾಧಿಕಾರಿ ಚಿತ್ರದ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತಿ ಅಲ್ಲೂ ಕೂಡ ಪೂಜೆ ಬಗ್ಗೆ ಚಿಂತೆಯಲ್ಲಿದ್ದರು. ಮನೆಯಲ್ಲಿ ನವಗ್ರಹ ಪೂಜೆಗೆ ಸಿದ್ಧತೆ ನಡೆಸಬೇಕಿತ್ತು , ಇಲ್ಲಿ ಮುಹೂರ್ತ ವಿಳಂಬವಾಗುತ್ತಲೇ ಇತ್ತು . ಅದಕ್ಕೂ ಕಾರಣವಿತ್ತು . ನಿರ್ಮಾಪಕ, ನಿರ್ದೇಶಕ ಮತ್ತು ನಾಯಕನ ಹೆಸರನ್ನು ಆಧರಿಸಿದ ಸಂಖ್ಯಾ ಶಾಸ್ತ್ರದ ಪ್ರಕಾರ ಮುಹೂರ್ತ ಒಂದು ಗಂಟೆಗೆ ನಡೆದರೇ ಸೂಕ್ತ ಎಂದು ಯಾರೋ ಜ್ಯೋತಿಷಿಗಳು ರೆಹಮಾನ್‌ಗೆ ಸಲಹೆ ಕೊಟ್ಟಿದ್ದರಂತೆ. ಯಾರು ಏನೇ ಹೇಳಿದರೂ ನಂಬುವ ರೆಹಮಾನ್‌ ಈ ಮಾತನ್ನೂ ಚಾಚೂ ತಪ್ಪದೆ ಪಾಲಿಸುವ ಹಠ ತೊಟ್ಟಿದ್ದರು.

ಚಡಪಡಿಸುತ್ತಲೇ ಕುಳಿತಿದ್ದ ಭಾರತಿ ಮುಂದೆ ಟೈಮ್‌ ಪಾಸ್‌ಗಾಗಿ ಒಂದು ಪ್ರಶ್ನೆ ಬಂತು. ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿದೆ ? ಹೇಗೂ ಇಲ್ಲ . ಆದರೆ ನನ್ನಂಥಾ ನಟಿಯನ್ನು ನೆನಪಿಸಿಕೊಳ್ಳೋರು ಕೇರಳದ ನಿರ್ಮಾಪಕರು ಮಾತ್ರ. ಅವರಿಗೆ ನಮ್ಮ ಪಾತ್ರ ಕೊಡಬೇಕು ಅನ್ನೋದು ಗೊತ್ತಿದೆ.

ಮಾತು ಕೊಂಚ ಕಟುವಾಗಿತ್ತು. ಆದರೆ ಅದರಲ್ಲಿ ಸತ್ಯವೂ ಇತ್ತು . ಇತ್ತೀಚೆಗೆ ಧರ್ಮಾದಿಕುಟ್ಟಮ್‌ ಚಿತ್ರದಲ್ಲಿ ಭಾರತಿ ಅಜ್ಜಿಯಾಗಿ ನಟಿಸಿದ್ದರು. ಮೊಮ್ಮಗಳ ಜೊತೆಗೆ ಕಾಲ ಕಳೆಯುವ ಈ ಪಾತ್ರವನ್ನು ಮಲೆಯಾಳಿಗಳು ಮೆಚ್ಚಿಕೊಂಡಿದ್ದರು. ಆದರೆ ಇಲ್ಲಿ ಭಾರತಿ ಅಮ್ಮನೂ ಅಲ್ಲ , ಅಜ್ಜಿಯೂ ಅಲ್ಲ.

English summary
Bharathi is not happy with kannada film industry
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada