ಸಲ್ಮಾನ್ ಖಾನ್ 'ಭಾರತ್' ಕನ್ನಡದಲ್ಲಿ ಬರಲೇಬೇಕು
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಈದ್ ಹಬ್ಬದ ಪ್ರಯುಕ್ತ ಜೂನ್ 5 ರಂದು ಭಾರತ್ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಂಚಲನ ಸೃಷ್ಟಿಸಿದೆ.
ಇಂತಹ ಚಿತ್ರವೀಗ ಕನ್ನಡದಲ್ಲಿ ಬಿಡುಗಡೆಯಾಗಬೇಕು ಎಂಬ ಒತ್ತಾಯ ಹೆಚ್ಚಾಗುತ್ತಿದ್ದು, ಡಬ್ಬಿಂಗ್ ಇಷ್ಟ ಪಡುವ ಕನ್ನಡಿಗರು ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡ್ತಿದ್ದಾರೆ. ಟ್ವಿಟ್ಟರ್ '#BharatInKannada' ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದು, ಈ ಚಿತ್ರವನ್ನ ಕನ್ನಡದಲ್ಲಿ ರಿಲೀಸ್ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಹೆಚ್ಚು ಡಬ್ ಆಗುತ್ತಿದ್ದು, ಸಲ್ಮಾನ್ ಖಾನ್ ಚಿತ್ರವನ್ನ ಕನ್ನಡದಲ್ಲೇ ನೋಡಬೇಕು ಎಂಬ ಆಸೆ ಅನೇಕರಿಗೆ ಇದೆ.

ಅಜಿತ್ ಅಭಿನಯದ ಎನ್ನೈ ಅರಿಂದಾಲ್, ವಿವೇಗಂ, ವಿಶ್ವಾಸಂ, ಮಲಯಾಳಂ ಒರು ಅದಾರ್ ಲವ್, ತಮಿಳಿನ ಕಾಂಚನಾ 3 ಅಂತಹ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ತೆರೆಕಂಡಿದೆ. ಇದೀಗ, ಸಲ್ಮಾನ್ ಚಿತ್ರವನ್ನ ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿ ಎಂಬುದು ಡಬ್ಬಿಂಗ್ ಪರ ಬೆಂಬಲಿಗರ ಹೋರಾಟ.
ಕರ್ನಾಟಕ ಪ್ರೇಕ್ಷಕರ ಮನವಿಯನ್ನ ಚಿತ್ರತಂಡ ಗೌರವಿಸುತ್ತಾ. ಟ್ವಿಟ್ಟರ್ ಅಭಿಯಾನ ಚಿತ್ರತಂಡಕ್ಕೆ ತಲುಪುತ್ತಾ. ಕನ್ನಡದಲ್ಲಿ ಸಲ್ಮಾನ್ ಖಾನ್ ಸಿನಿಮಾ ಬರುತ್ತಾ ಎಂಬ ಕುತೂಹಲ ಈಗ ಹುಟ್ಟಿಕೊಂಡಿದೆ.
ಇನ್ನುಳಿದಂತೆ ಅಲಿ ಅಬ್ಬಾಜ್ ಜಾಫರ್ ಭಾರತ್ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕತ್ರಿನಾ ಕೈಫ್, ಟಬು, ಸುನೀಲ್ ಗ್ರೋವರ್, ದಿಶಾ ಪಟಾನಿ, ಜಾಕಿ ಶ್ರಾಫ್ ಸೇರಿದಂತೆ ಬಹುದೊಡ್ಡ ತಾರಬಳಗ ಚಿತ್ರದಲ್ಲಿದೆ.


Click it and Unblock the Notifications











