'ವಿಷ ಕೊಟ್ಟು ಸಾಯಿಸಿ ಸಂತೋಷ ಪಡಿ': 'ವಿಕೃತ'ರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಜಗ್ಗೇಶ್!
Recommended Video

ಸಾಮಾಜಿಕ ಜಾಲತಾಣಗಳಿಂದ ಏನೇನೆಲ್ಲ ಅವಾಂತರಗಳು ಸೃಷ್ಟಿಯಾಗಬಹುದು ಎಂಬುದಕ್ಕೆ ನಿನ್ನೆ ನಡೆದ ಘಟನೆಯೇ ಉತ್ತಮ ಉದಾಹರಣೆ.
ಎಷ್ಟೇ ಸಂಕಷ್ಟ ಎದುರಾದರೂ, ಅದನ್ನೆಲ್ಲ ಮೆಟ್ಟಿನಿಂತು ಎರಡು ವರ್ಷಗಳಿಂದ ಕಷ್ಟಪಟ್ಟು, ಇಷ್ಟಪಟ್ಟು 'ಭರ್ಜರಿ' ಸಿನಿಮಾ ಮಾಡಿದ್ರೆ, ಅದನ್ನೆಲ್ಲ ಒಂದೇ ಕ್ಷಣದಲ್ಲಿ ವ್ಯರ್ಥ ಮಾಡಿಬಿಟ್ಟ ಕಿಡಿಗೇಡಿಯೋರ್ವ.!
ಹುಬ್ಬಳ್ಳಿ ಮೂಲದ ಸಂತೋಷ್ ಎಂಬಾತ ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಚಿತ್ರವನ್ನ ಪುಕ್ಕಟೆ ಪ್ರಸಾರ ಮಾಡಿದ್ದಾನೆ. ಇದರಿಂದ ನಿರ್ಮಾಪಕ ಹಾಗೂ ವಿತರಕರಿಗೆ ನಷ್ಟ ಮಾತ್ರ ಅಲ್ಲ, ಇಡೀ ಚಿತ್ರತಂಡದ ಶ್ರಮ ನೀರಿನಲ್ಲಿ ಹೋಮ ಮಾಡಿದ ಹಾಗಾಗಿದೆ. ಇಂತಹ ಬೆಳವಣಿಗೆ ಕಂಡು ನಟ ಜಗ್ಗೇಶ್ ಕಿಡಿಕಾರಿದ್ದಾರೆ. ಮುಂದೆ ಓದಿರಿ....

ಹೊಸ ತಲೆನೋವು
ಈಗಾಗಲೇ ಡಬ್ಬಿಂಗ್, ಪೈರಸಿ ಅಂತಹ ಸಮಸ್ಯೆಗಳಿಂದ ನಲುಗಿರುವ ಚಿತ್ರತಂಡಕ್ಕೆ ಈಗ ಫೇಸ್ ಬುಕ್ ಲೈವ್ ಎಂಬ ಹೊಸ ತಲೆನೋವು ಶುರುವಾಗಿದೆ. ಸಾಮಾಜಿಕ ಜಾಲತಾಣಗಳನ್ನ ದುರ್ಬಳಕೆ ಮಾಡಿಕೊಂಡ ಯುವಕನ ವಿರುದ್ಧ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಹೌಹಾರಿದ್ದಾರೆ.

ವಿಷ ಕೊಟ್ಟು ಸಾಯಿಸಿ
''ಇಂದು ತುಂಬಾ ಕೆಟ್ಟ ಸಂಪ್ರದಾಯ. ಇದರ ಬದಲು ವಿಷಕೊಟ್ಟು ಸಾಯಿಸಿ ಸಂತೋಷ ಪಡಿ. ವಿಕೃತರೇ... ಒಂದು ಸಿನಿಮಾಗೆ ನೂರು ಜನರ ಬೆವರಿದೆ. ನಿರ್ಮಾಪಕರ ಬದುಕಿದೆ. ಅಂಥವರ ಮೇಲೆ ಕಾನೂನು ಕ್ರಮ ಕಡ್ಡಾಯ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಒಂದುವರೆ ಗಂಟೆ ಲೀಕ್ ಆಗಿದೆ
ಹುಬ್ಬಳ್ಳಿ ಮೂಲದ ಸಂತೋಷ್ ಎಂಬ ಯುವಕ ಸುಮಾರು ಒಂದುವರೆ ಗಂಟೆಗಳ ಕಾಲ ಫೇಸ್ ಬುಕ್ ಲೈವ್ ಮಾಡಿ 'ಭರ್ಜರಿ' ಚಿತ್ರವನ್ನ ತನ್ನ ಅಕೌಂಟ್ ನಲ್ಲಿ ಪ್ರಸಾರ ಮಾಡಿದ್ದಾನೆ. ಫೇಸ್ ಬುಕ್ ಲೈವ್ ಮೂಲಕವೇ 856ಕ್ಕೂ ಹೆಚ್ಚು ಮಂದಿ 'ಭರ್ಜರಿ' ಚಿತ್ರವನ್ನ ಬಿಟ್ಟಿಯಾಗಿ ವೀಕ್ಷಿಸಿದ್ದಾರೆ.

ರಾಜ್ಯಾದ್ಯಂತ 'ಭರ್ಜರಿ' ಪ್ರದರ್ಶನ
ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ ಅಭಿನಯಿಸಿರುವ 'ಭರ್ಜರಿ' ಚಿತ್ರ ನಿನ್ನೆ (ಸೆಪ್ಟೆಂಬರ್ 15) ರಂದು ರಾಜ್ಯಾದ್ಯಂತ ತೆರೆಕಂಡಿದೆ. ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ರೆ, 'ಭರ್ಜರಿ'ಯಾಗಿ ನಿರ್ಮಾಣ ಮಾಡಿರುವವರು ಕನಕಪುರ ಶ್ರೀನಿವಾಸ್.


Click it and Unblock the Notifications











