ನಮ್ಮಪ್ಪ ನಾನ್ ವೆಜ್ ತಿಂತಿದ್ರು, ನಾನು ತಿನ್ನಲ್ಲ ಕಾರಣ ಏನಂದ್ರೆ?- ನಟಿ ಭಾವನಾ ರಾವ್
ನಟ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ವಿಚಾರ ಕಳೆದ ನಾಲ್ಕೈದು ದಿನಗಳಿಂದ ಭಾರೀ ಚರ್ಚೆ ಹುಟ್ಟುಹಾಕಿತ್ತು. ಲಿಂಗಾಯತರಾಗಿ ಧನಂಜಯ್ ನಾನ್ ವೆಜ್ ತಿಂತಾರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಎತ್ತಿದ್ದರು. ಇದು ಪರ ವಿರೋಧಕ್ಕೆ ಕಾರಣವಾಗಿತ್ತು. ಇದೇ ವಿಚಾರದ ಬಗ್ಗೆ ನಟಿ ಭಾವನಾ ರಾವ್ ಮಾತನಾಡಿದ್ದಾರೆ. ಅವರವರ ರುಚಿ ಅವರದ್ದು ಎಂದು ಆಕೆ ಹೇಳಿದ್ದಾರೆ.
'ಲ್ಯಾಂಡ್‌ಲಾರ್ಡ್' ಚಿತ್ರದ ವಿಶೇಷ ಪಾತ್ರದಲ್ಲಿ ನಟಿ ಭಾವನಾ ರಾವ್ ನಟಿಸಿದ್ದಾರೆ. ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದುನಿಯಾ ವಿಜಯ್ ನಟನೆಯ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜಡೇಶ್ ಹಂಪಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 2ನೇ ವಾರ ಸಿನಿಮಾ ಪ್ರದರ್ಶನವಾಗುತ್ತಿದೆ. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

ಭಾವನಾ ರಾವ್ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ಯಾರಂಟಿ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಇದೇ ವೇಳೆ ಧನಂಜಯ್ ನಾನ್ ವೆಜ್ ವಿವಾದದ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ. ನಾನು ಕೂಡ ಆ ವೀಡಿಯೋ ನೋಡಿದೆ. ಸುಖಾಸುಮ್ಮನೆ ಚರ್ಚೆ ಆಗ್ತಿದೆ. ಅವರವರ ಆಹಾರ ಅವರಿಷ್ಟ. ಜನಕ್ಕೆ ಇಷ್ಟ ಆಗಿದ್ದನ್ನು ತಿನ್ನುತ್ತಾರೆ. ನಮ್ಮ ತಂದೆ ಕೂಡ ನಾನ್ ವೆಜ್ ತಿನ್ನುತ್ತಿದ್ದರು. ನಾನು ತಿನ್ನಲ್ಲ ಎಂದಿದ್ದಾರೆ.
ಭಾವನಾ ರಾವ್ ಮಾತನಾಡಿ "ಬೇರೆಯವರು ನಾನ್ ವೆಜ್ ತಿನ್ನುವುದು ನೋಡಿ ನನಗೆ ತಿನ್ನಬೇಕು ಎಂದು ಯಾವತ್ತು ಅನ್ನಿಸಿತ್ತು. ನಾನು ಹುಟ್ಟುವುದಕ್ಕೂ ಮುನ್ನ ಅಪ್ಪ, ಅಮ್ಮ ಜಾಂಬಿಯಾದಲ್ಲಿದ್ದರು. ಅಪ್ಪ ನಾನ್ ವೆಜ್ ತಿನ್ನುತ್ತಿದ್ರು. ನಾನು ಪ್ರಾಣಿ ಪ್ರೇಮಿ. ಚಿಕ್ಕಂದಿನಲ್ಲಿ ಇದ್ದಾಗ ಪ್ರಾಣಿಗಳನ್ನು ಕತ್ತರಿಸುವುದನ್ನು ನೋಡಿಬಿಟ್ಟಿದ್ದೆ. ಹಾಗಾಗಿ ಅದಕ್ಕೆ ಮನಸ್ಸು ಒಪ್ಪುವುದಿಲ್ಲ" ಎಂದು ಹೇಳಿದ್ದಾರೆ.

ನಟ ಧನಂಜಯ್ ನಾನ್ ವೆಜ್ ವಿವಾದದ ಬಗ್ಗೆ ಮಾತನಾಡಿ "ಅದು ಅವರಿಷ್ಟ, ನಿನಗೆ ಇಷ್ಟ ಇದ್ದರೆ ನೀನು ತಿನ್ನು ತಪ್ಪೇನಿಲ್ಲ. ಅವರವರ ರುಚಿ ಅವರದ್ದು. ಜಾತಿ ಕಾರಣಕ್ಕೆ ನಾನು ತಿನ್ನಲ್ಲ ಎಂದು ಹೇಳುವುದಿಲ್ಲ. ನನಗೆ ಪ್ರಾಣಿಗಳಂದ್ರೆ ಬಹಳ ಇಷ್ಟ. ಆ ರೀತಿ ಅಂದು ಪ್ರಾಣಿಯನ್ನು ಕೊಂದಿದ್ದನ್ನು ನೋಡಿದ್ದಕೋ ಏನೋ, ನಾನ್ ವೆಜ್ ತಿನ್ನಲು ಮನಸ್ಸು ಒಪ್ಪಲ್ಲ" ಎಂದು ಭಾವನಾ ರಾವ್ ತಿಳಿಸಿದ್ದಾರೆ.
ಹಿರಿಯ ನಟಿ ಉಮಾಶ್ರೀ ಸೇರಿ ಹಲವರು ಈ ವಿವಾದದಲ್ಲಿ ಧನಂಜಯ್ ಪರ ನಿಂತರು. ಅವರ ರುಚಿ ಅವರಿಷ್ಟ. ನಿಮಗೆ ಬೇಡ ಎಂದರೆ ನೀವು ತಿನ್ನಬೇಡಿ. ಅವರಿಗೆ ತಿನ್ನಬೇಕು ಎನಿಸಿದ್ರೆ ತಿನ್ನುತ್ತಾರೆ. ಇದರಲ್ಲಿ ಜಾತಿ ವಿಚಾರ ಎಳೆದು ತರಬೇಡಿ ಎಂದು ಉಮಾಶ್ರೀ ಹೇಳಿದ್ದರು. ಧನಂಜಯ್ ಕೂಡ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದರು. ಇದು ಒಳ್ಳೆಯ ಚರ್ಚೆ, ಆದರೆ ನಾನ್ ವೆಜ್ ತಿನ್ನುವ ವಿಚಾರದಲ್ಲಿ ಸಮುದಾಯಗಳನ್ನು ಎಳೆದು ತಂದಿದ್ದು ಸರಿಯಲ್ಲ ಎಂದಿದ್ದರು.
"ಈಗ ಯಾಕೆ ಆ ವೀಡಿಯೋ ವೈರಲ್ ಮಾಡಿದ್ರು ಗೊತ್ತಿಲ್ಲ. ಬಿರಿಯಾನಿ ತಿನ್ನುತ್ತಾ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದೆ. ಧನಂಜಯ್ ಬಿರಿಯಾನಿ ತಿಂತಾರಾ? ಅಂದ್ರೆ ಪರವಾಗಿಲ್ಲ, ಲಿಂಗಾಯತರೆಲ್ಲಾ ತಿಂತಾರಾ, ಬ್ರಾಹ್ಮಣರೆಲ್ಲಾ ತಿಂತಾರಾ ಎಂದು ಸಮುದಾಯಗಳನ್ನು ಎಳೆದು ತಂದಿದ್ದು ತಪ್ಪು. ನನ್ನ ಊಟ, ನನ್ನ ತಿಂಡಿ, ನನ್ನ ಚಟ ನನ್ನ ವೈಯಕ್ತಿಕ ಆಯ್ಕೆ. ಬೇರೆ ಯಾರಿಗೂ ತೊಂದರೆ ಕೊಡದೇ ಏನು ಮಾಡಿದ್ರು ಸರಿ ಎನ್ನುತ್ತೇನೆ. ಮದುವೆಗೂ ಮುನ್ನ ಸಖತ್ ಪಾರ್ಟಿ ಮಾಡ್ತಿದ್ದೆ. ಎಲ್ಲ ಇತಿಮಿತಿಯಲ್ಲಿ ಇರಬೇಕು ಎನ್ನುವುದು ನನ್ನ ನಿಯಮ. ಹಾಗಂತ ಎಲ್ಲರೂ ಮಾಡಿ ಎಂದು ನಾನು ಹೇಳಲ್ಲ" ಎಂದು ಧನಂಜಯ್ ವಿವರಿಸಿದ್ದರು.
'ಗಾಳಿಪಟ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಭಾವನಾ ರಾವ್ ಮುಂದೆ ಗಾಳಿಪಟ ಭಾವನಾ ಎಂದು ಜನಪ್ರಿಯರಾದರು. 'ಅಟ್ಟಹಾಸ', 'ಬಹುಪರಾಕ್', 'ದಯವಿಟ್ಟು ಗಮನಿಸಿ', 'ಟೈಗರ್ ಗಲ್ಲಿ', 'ತುರ್ತು ನಿರ್ಗಮನ', 'ಹೊಂದಿಸಿ ಬರೆಯಿರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಭಾವನಾ ಬಣ್ಣ ಹಚ್ಚಿದ್ದಾರೆ.


Click it and Unblock the Notifications











