»   » ಆರಕ್ಕೇರದ ಮೂರಕ್ಕಿಳಿಯದ ಈ ಕಮ್‌ಬ್ಯಾಕ್‌

ಆರಕ್ಕೇರದ ಮೂರಕ್ಕಿಳಿಯದ ಈ ಕಮ್‌ಬ್ಯಾಕ್‌

Posted By: Super
Subscribe to Filmibeat Kannada

ಳೆದ ಐದು ವರ್ಷಗಳಿಂದ ಭವ್ಯ ಸುದ್ದಿಯಲ್ಲಿರಲಿಲ್ಲ. ಮದುವೆಯಾದ ನಂತರ ಆಕೆ ಸಿನಿಮಾಗೆ ವಿದಾಯ ಹೇಳಿದ್ದರು. ಅದು ಅಧಿಕೃತವಾಗಿಯಲ್ಲದಿದ್ದರೂ ಮದುವೆಯಾದ ಕ್ಷಣ ಎಲ್ಲಾ ನಾಯಕಿಯರನ್ನೂ ಚಿತ್ರರಂಗ ತಾನಾಗಿಯೇ ಬೀಳ್ಕೊಡುತ್ತದೆ. ಈ ಮಾತಿಗೆ ಅಪವಾದವೆಂದರೆ ಸುಧಾರಾಣಿ. 'ನಾನೇನೂ ಮಾಡ್ಲಿಲ್ಲ" ಚಿತ್ರದಲ್ಲಿ ನಟಿಸುವ ಮುನ್ನ ಸುಧಾ ತಾನು ನಿವೃತ್ತಿಯಾಗಿಲ್ಲ ಎಂದು ಪತ್ರಕರ್ತರ ಮುಂದೆ ಘೋಷಿಸಬೇಕಾದ ಸಂದರ್ಭ ಬಂದಿತ್ತು. ಇದೀಗ ಆಕೆ 'ಸ್ಪರ್ಶ" ದಲ್ಲೂ ನಟಿಸಿದ್ದಾಳೆ.

ಭವ್ಯಾ ವಾಪಸಾಗುವ ಹೊತ್ತಲ್ಲಿ ತಾಳಿರುವ ನಿಲುವಿಗೂ, ಸುಧಾರಾಣಿ ನಿಲುವಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಇಬ್ಬರೂ ವೈವಾಹಿಕ ಬದುಕಲ್ಲಿ ಸಂತೃಪ್ತರು. ಒಳ್ಳೇ ಅವಕಾಶ ಬಂದರೆ ನಟಿಸುವುದಕ್ಕೆ ಅಭ್ಯಂತರವಿಲ್ಲ. ಇದರರ್ಥ ಅವರಿಗಿನ್ನು ನಾಯಕಿ ಪಟ್ಟ ಶಾಶ್ವತವಾಗಿ ಕೈ ತಪ್ಪಿದಂತೆ. ಶ್ರೀಮತಿ ಲೇಬಲ್‌ ಹಚ್ಚಿಕೊಂಡಿರುವ ನಟಿ ನಾಯಕನ ಜೊತೆ ಮರ ಸುತ್ತುವುದನ್ನು ಪ್ರೇಕ್ಷಕರು ಒಪ್ಪುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರ 'ಯಜಮಾನ"ರಿಗೂ ಅದು ಪಥ್ಯವಾಗುವುದಿಲ್ಲ. ಈ ಲಕ್ಷ್ಮಣರೇಖೆಯನ್ನು ದಾಟಿದವರ ಬದುಕು ದುರಂತಮಯವಾದ ಉದಾಹರಣೆಗಳು ನಮ್ಮ ಮುಂದಿವೆ.

ಒಬ್ಬ ತಾರೆ ಬೇಡಿಕೆಯಲ್ಲಿರುವ ಹೊತ್ತಿಗೆ ಮದುವೆಯಾದರೆ, ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಉದಾಹರಣೆಗೆ ಮಾಧುರಿ ದೀಕ್ಷಿತ್‌. ಈ ಪಟ್ಟಿಗೆ ಸುಧಾರಾಣಿಯನ್ನೂ ಸೇರಿಸಬಹುದು. ಆದರೆ ಭವ್ಯಾ ಮದುವೆಯಾಗುವ ಮುನ್ನಾ ಅಥವ ನಿವೃತ್ತರಾಗುವ ಮುನ್ನವೇ ಬೇಡಿಕೆ ಕಳೆದುಕೊಂಡಿದ್ದರು. ಅದಕ್ಕೆ ಅವರ ವಯಸ್ಸು ಮತ್ತು ದೇಹದ ಗಾತ್ರವಷ್ಟೇ ಕಾರಣವಾಗಿರಲಿಲ್ಲ. ಬಿಚ್ಚಿ ಬಯಲಾಗುವ ಕಾಯಕಕ್ಕೂ ನಾಯಕಿ ಸಿದ್ಧವಾಗಿರಬೇಕು ಅನ್ನುವ ಚಿತ್ರೋದ್ಯಮದ ಬದಲಾದ ಒತ್ತಾಯಕ್ಕೆ ಮಣಿಯುವ ಸ್ಥಿತಿಯಲ್ಲಿ ಅವರಿರಲಿಲ್ಲ. ಹಾಗಿದ್ದೂ 'ಪ್ರಳಯಾಂತಕ" ಚಿತ್ರದಲ್ಲಿ ರವಿಚಂದ್ರನ್‌ ಜೊತೆ ಈಜುಕೊಳದಲ್ಲಿ ಕನಿಷ್ಠ ಉಡುಪಿನಲ್ಲಿ ಈಜಾಡಿದ್ದುಂಟು. ಅದೇ ಆರಂಭ ಮತ್ತು ಅದೇ ಕೊನೆ. ಅನಂತರ ಭವ್ಯಾ ಈ ಅವತಾರದಲ್ಲಿ ಕಾಣಿಸಲಿಲ್ಲ.

ಹಾಗೆ ನೋಡಿದರೆ ಮಂಜುಳಾ ಮತ್ತು ಮಾಲಾಶ್ರೀ ಇವೆರಡು ಜಮಾನಾಗಳ ನಡುವೆ ಒಂದಿಷ್ಟು ವರ್ಷ ಮೆರೆದ ಏಕೈಕ ನಟಿಯೆಂದರೆ ಭವ್ಯಾ. ಅವರಿಬ್ಬರ ಗ್ಲಾಮರ್‌ಗೆ ಹೋಲಿಸಿದರೆ ಭವ್ಯಾ ಕೊಂಚ ಹಿಂದುಳಿಯುತ್ತಾರಾದರೂ ನಟನಾ ಕೌಶಲ್ಯದಲ್ಲಿ ಅವರಿಗೆ ಈಕೆ ಸರಿಸಾಟಿ. ಇದಕ್ಕೆ ಉದಾಹರಣೆಯಾಗಿ 'ಹೃದಯ ಹಾಡಿತು" ಚಿತ್ರವನ್ನೇ ನೋಡಬಹುದು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಭವ್ಯಾಗೆ ನಾಯಕನ ಪತ್ನಿ ಪಾತ್ರ. ಇನ್ನೊಬ್ಬಾಕೆ ನಾಯಕನನ್ನು ಮದುವೆಯಾಗಲು ಹಂಬಲಿಸುತ್ತಿರುವ ಮನೋರೋಗಿ. ಈ ಪಾತ್ರಕ್ಕೆ ಮಿಂಚುವ ಅವಕಾಶ ಜಾಸ್ತಿ. ಜೊತೆಗೆ ಇದನ್ನು ನಿರ್ವಹಿಸಿದವರು ಆಗಿನ ಕನಸಿನ ರಾಣಿ ಮಾಲಾಶ್ರೀ. ಹಾಗಿದ್ದೂ ಈ ಪೈಪೋಟಿಯಲ್ಲಿ ಕೊನೆಗೆ ಗೆದ್ದದ್ದು ಭವ್ಯಾ. ಇದಕ್ಕೂ ಮುನ್ನಾ 'ಕೃಷ್ಣಾ ನೀ ಬೇಗನೆ ಬಾರೋ" ಚಿತ್ರದಲ್ಲೂ ಪರಭಾಷಾ ಬೆಡಗಿ ಕಿಮ್‌ ಅವರನ್ನು ಭವ್ಯಾ ಸಲೀಸಾಗಿ ಹಿಂದೆ ಸರಿಸಿದ್ದರು.

ಭವ್ಯಾಗಿದ್ದ ಪ್ಲಸ್‌ ಪಾಯಿಂಟ್‌ ಅಂದರೆ ಅದೇ. ಸಾಂಪ್ರದಾಯಿಕ ನಾಯಕಿಯಾಗಿ ಮನೋಜ್ಞವಾಗಿ ಅಭಿನಯಿಸುವ ಸಾಮರ್ಥ್ಯ. ಹಾಗಿದ್ದೂ ಶಂಕರ್‌ನಾಗ್‌ ಚಿತ್ರದಲ್ಲಿ ಈಕೆ ಪ್ಯಾಂಟು ಶರ್ಟು ತೊಟ್ಟಿದ್ದುಂಟು. ಭವ್ಯಾ-ಶಂಕರ್‌ನಾಗ್‌ ಜೋಡಿ ಅತೀ ಹೆಚ್ಚು ಹಿಟ್‌ ಚಿತ್ರಗಳನ್ನು ನೀಡಿದ ದಾಖಲೆಯಿದೆ. ಸುಮಾರು ಹದಿನೈದು ಚಿತ್ರಗಳಲ್ಲಿ ಈ ಜೋಡಿ ನಟಿಸಿತ್ತು. ಅದಲ್ಲದೆ ವಿಷ್ಣುವರ್ಧನ್‌, ಅನಂತನಾಗ್‌, ಅಂಬರೀಶ್‌, ಶಶಿಕುಮಾರ್‌, ಮುರಳಿ, ವಿನೋದ್‌ರಾಜ್‌, ದೇವರಾಜ್‌, ಜೈ ಜಗದೀಶ್‌ ಹೀಗೆ ಹೆಚ್ಚು ಕಡಿಮೆ ಎಲ್ಲಾ ನಾಯಕರೊಂದಿಗೆ ಭವ್ಯಾ ನಟಿಸಿದ್ದಾರೆ. ಈ ಮಧ್ಯೆ ಒಂದೆರಡು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದರೂ ಆಕೆ ಅಲ್ಲಿ ಸೆಟ್ಲ್‌ ಆಗಲಿಲ್ಲ. ಮೂಲತಃ ತೆಲುಗು ಮೂಲದ ಈ ನಟಿಯ ಮನೆ ಮಾತು ಕೂಡ ತೆಲುಗು.

ಭವ್ಯ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಜೋಸೈಮನ್‌. ಮೊದಲ ಚಿತ್ರ 'ಡಾಕ್ಟರ್‌ದೇವೋ ಭವ" ತೆರೆಕಾಣಲಿಲ್ಲ. ಹಾಗಾಗಿ 'ಒಡೆದ ಹಾಲು" ಚಿತ್ರವನ್ನೇ ಅಧಿಕೃತವಾಗಿ ಮೊದಲ ಚಿತ್ರವೆನ್ನಬಹುದು. ತಮ್ಮ 15 ವರ್ಷದ ವೃತ್ತಿ ಬದುಕಿನುದ್ದಕ್ಕೂ ಯಾವತ್ತೂ ವಿವಾದಗಳಿಗೆ ಸಿಲುಕಿರದ ಭವ್ಯಾ ಒಮ್ಮೆ ಮಾತ್ರ ಗಾಸಿಪ್‌ ಕಾಲಂಗಳಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶಕ ಜೋಸೈಮನ್‌ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಅದರ ಹೊರತಾಗಿ ಶೂಟಿಂಗ್‌ಗೆ ತಡವಾಗಿ ಬರುವುದು, ಇದೇ ಹೋಟೆಲ್‌ ಬೇಕು ಎಂದು ಹಠ ಹಿಡಿಯುವುದು, ನಿರ್ದೇಶಕರ ಜೊತೆ ಜಗಳವಾಡುವುದು ಮೊದಲಾದ ವರಸೆಗಳು ಅವರಿಗೆ ಗೊತ್ತಿರಲಿಲ್ಲ.

ಭವ್ಯಾ ಅವರ ಹಿಟ್‌ ಚಿತ್ರಗಳ ಪಟ್ಟಿ ಹೀಗಿದೆ. ಲಯನ್‌ ಜಗಪತಿ ರಾವ್‌, ಮತ್ತೆ ಹಾಡಿತು ಕೋಗಿಲೆ, ಪ್ರೇಮ ಪರ್ವ, ತಾಯಿಯ ಆಸೆ, ಹೃದಯ ಹಾಡಿತು, ಕೃಷ್ಣಾ ನೀ ಬೇಗನೆ ಬಾರೋ, ಅವಳೇ ನನ್ನ ಹೆಂಡ್ತಿ, ಸಾಂಗ್ಲಿಯಾನ ಭಾಗ 2.

ಅವೆಲ್ಲವೂ ಇತಿಹಾಸ. ಭವ್ಯ ಈಗ ಮುಂಬೈನ ಭವ್ಯ ಬಂಗಲೆಯಾಂದರ ಒಡತಿ. ಅವರ ಗುಜರಾತಿ ಪತಿ ಹೋಟೆಲ್‌ ಉದ್ಯಮಿ. ಸಂಸಾರ ಸರಿಗಮದ ನಡುವೆ ಹಳೇ ನೆನಪುಗಳು ಕಾಡಲೇ ಬೇಕಲ್ಲ. ಅದಕ್ಕಾಗಿ ಆಗಾಗ ಬೆಂಗಳೂರಿಗೆ ಬರುತ್ತಾರೆ. ಹಾಗಂತ ಟೈಂ ಪಾಸ್‌ಗಾಗಿ ನಟಿಸುತ್ತೇನೆ ಎಂದಾಕೆ ಹೇಳುವುದಿಲ್ಲ. ಮನಸ್ಸಿಗೆ ತೃಪ್ತಿ ಮತ್ತು ಕಲೆಯ ಮೇಲಿರುವ ಗೌರವಕ್ಕಾಗಿ ನಟಿಸುತ್ತೇನೆ ಅನ್ನುತ್ತಾರೆ. ಅದು ಅಮ್ಮನ ಪಾತ್ರವಾದರೂ ಸರಿ.

ಗುಂಡು ಮುಖದ, ಗುಂಡುದೇಹದ ಕುಳ್ಳಿ ಭವ್ಯಾ ಅಮ್ಮನಾದರೆ ಇನ್ನೊಂದು ಪಂಡರಿಬಾಯಿ ಥರಾ ಕಾಣಬಹುದೇ ?

Read more about: sandalwood kannada cinema
English summary
Here is another example of talent being wasted

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada