ನಿಮ್ಮ ಚಿನ್ನುಗೆ ನೀವೇ.. ; ನಾಯಿಗಳ ಕುರಿತು ಡಾಗ್ ಸತೀಶ್ ವಿಕೃತ ಮಾತು - ದಾಖಲಾಯ್ತು ದೂರು
ನಿಸ್ವಾರ್ಥ ಪ್ರೀತಿ ಮತ್ತು ನಿಷ್ಠೆಗೆ ಹೆಸರಾದ ಪ್ರಾಣಿ ನಾಯಿ. ಚೂರೇ ಚೂರು ಪ್ರೀತಿ ನೀಡಿದರೂ ಸಾಕು ಜೀವನಪೂರ್ತಿ ಜೊತೆಯಾಗುವ ಜೀವ. ಇಂತಹ ನಾಯಿಯಿಂದ ಹೆಸರು ಮಾಡಿ, ಹಣ -ಕೀರ್ತಿ ಎಲ್ಲವನ್ನೂ ಸಂಪಾದಿಸಿದವರಲ್ಲಿ ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬಾಮ್ಸ್ ಕೂಡ ಒಬ್ಬರು ಮತ್ತು ಪ್ರಮುಖರು.
ಮಾತೆತ್ತಿದರೆ ತರಹೇವಾರಿ ತಳಿಯ ನಾಯಿಗಳನ್ನು ಖರೀದಿ ಮಾಡಿರುವುದಾಗಿ ಹೇಳುವ ಡಾಗ್ ಸತೀಶ್ ಅಸಲಿಗೆ ಪ್ರಚಾರ ಪ್ರಿಯವೇ ಹೊರತು ನಾಯಿ ಪ್ರಿಯ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಡಾಗ್ ಸತೀಶ್ ತಮ್ಮ ಬದುಕಿಗೆ ನೆಲೆಯಾದ ನಾಯಿಯ ಬಗ್ಗೆ ತೀರಾ ಅಸಹ್ಯವಾಗಿ ಮಾತನಾಡಿದ್ದಾರೆ. ಈ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಡಾಗ್ ಸತೀಶ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಟರ್ ಟಾಟ್ ಸುಭಾಷ್ (ಸುಭಾಷ್ ಪ್ರಜಾಪತ್)ಅವರ ಜೊತೆ ಡಾಗ್ ಸತೀಶ್ ತೀರಾ ಅಸಹ್ಯ ಮತ್ತು ಅಸಭ್ಯವಾಗಿ ನಾಯಿಯ ಬಗ್ಗೆ ಮಾತನಾಡಿದ್ದಾರೆ.
ತನ್ನ ನಾಯಿಯ ಮಿಲನದ ಕುರಿತು ಸುಭಾಷ್, ಡಾಗ್ ಸತೀಶ್ ಅವರಲ್ಲಿ ಅಸಹ್ಯಕರವಾಗಿ ಪ್ರಶ್ನೆಯನ್ನು ಕೇಳಿದ್ದರೆ, ಡಾಗ್ ಸತೀಶ್ ಇನ್ನೂ ತೀರಾ ಅಸಹ್ಯವಾಗಿ ಉತ್ತರವನ್ನು ನೀಡಿದ್ದಾರೆ. 26 ಸೆಕೆಂಡ್‌ನ ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಡಾಗ್ ಸತೀಶ್ ವಿರುದ್ದ ಅನಿಮಲ್ ವೆಲ್ಫೇರ್ ಸಪೋರ್ಟ್ ನ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದಾರೆ.
ಡಾಗ್ ಸತೀಶ್ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಇಂತಹ ಮಾತುಗಳಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿರುವ ಲಕ್ಷ್ಮಿ, ಯುವಜನತೆ ಮತ್ತು ಅಪ್ರಾಪ್ತರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹಾಸ್ಯದ ನೆಪದಲ್ಲಿ ಇಂತಹ ಪ್ರಾಣಿ ವಿರೋಧಿ ಮತ್ತು ಅಶ್ಲೀಲ ವಿಷಯಗಳನ್ನು ಹರಡುವುದು ಕಾನೂನುಬಾಹಿರ ಎಂದು ತಮ್ಮ ದೂರಿನಲ್ಲಿ ಲಕ್ಷ್ಮೀ ಉಲ್ಲೇಖಿಸಿದ್ದಾರೆ.
ಡಾಗ್ ಸತೀಶ್ ಭಾರತೀಯ ನ್ಯಾಯ ಸಂಹಿತೆ (BNS), 2023: ಸೆಕ್ಷನ್ 294 ಮತ್ತು 296 (ಸಾರ್ವಜನಿಕವಾಗಿ ಅಶ್ಲೀಲ ಕೃತ್ಯ ಮತ್ತು ಪ್ರಸಾರ), ಮಾಹಿತಿ ತಂತ್ರಜ್ಞಾನ ಕಾಯ್ದೆ, 2000: ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳ ಪ್ರಸಾರ), ಪ್ರಾಣಿ ಹಿಂಸೆ ತಡೆ ಕಾಯ್ದೆ, 1960: ಸೆಕ್ಷನ್ 11 (ಪ್ರಾಣಿಗಳ ವಿರುದ್ಧದ ಕ್ರೌರ್ಯ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದ್ದು, ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ವೇಳೆ ಆರೋಪಿಗಳಾದ ಟಾಟ್ ಸುಭಾಷ್ ಮತ್ತು ಡಾಗ್ ಸತೀಶ್ ವಿರುದ್ಧ ತಕ್ಷಣ ಎಫ್‌ಐಆರ್ (FIR) ದಾಖಲಿಸಬೇಕು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಮೆಟಾ/ಫೇಸ್‌ಬುಕ್ ಸಂಸ್ಥೆಗೆ ನೋಟಿಸ್ ನೀಡಬೇಕು ಎಂದು ಕೂಡ ಆಗ್ರಹಿಸಲಾಗಿದ್ದು ವಿಡಿಯೋದಲ್ಲಿರುವ ಇನ್ನೊಬ್ಬ ಅಪರಿಚಿತ ವ್ಯಕ್ತಿಯನ್ನು ಗುರುತಿಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಸದ್ಯ ಈ ವಿಡಿಯೋ ವೈರಲ್ ಆದ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಡಾಗ್ ಸತೀಶ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಸುಭಾಷ್ ಅವರಿಗಂತೂ ಪ್ರಾಣಿಗಳ ಬಗ್ಗೆ ಗೌರವ ಇಲ್ಲ, ನೀವು ಒಬ್ಬ ಡಾಗ್ ಬ್ರೀಡರ್. ನಿಮಗಾದರೂ ಪ್ರಾಣಿಗಳ ಮೇಲೆ ಪ್ರೀತಿ ಬೇಡವೇ ಎಂದು ಹಲವರು ಡಾಗ್ ಸತೀಶ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪ್ರಚಾರಕ್ಕೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಲು ಹೋಗಬಾರದು ಎಂದು ಬುದ್ದಿಮಾತನ್ನು ಕೂಡ ಡಾಗ್ ಸತೀಶ್‌ಗೆ ಹೇಳುತ್ತಿದ್ದಾರೆ. ಡಾಗ್ ಸತೀಶ್ ತಮ್ಮ ಈ ವೈರಲ್ ವಿಡಿಯೋ ಬಗ್ಗೆ ಮತ್ತು ದೂರು ದಾಖಲಾದ ಬಗ್ಗೆ ಹೇಗೆ ಪ್ರತಿಕ್ರಿಯೆ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











